ಅಂಚೆ, ಜೀವವಿಮೆ ಸಂಗ್ರಹದಲ್ಲಿ ಚಿತ್ರದುರ್ಗ ವಿಶೇಷ ಸಾಧನೆ!

ಚಿತ್ರದುರ್ಗ : ಅಂಚೆ ಜೀವ ವಿಮೆ ಮತ್ತು ಗ್ರಾಮೀಣ ಅಂಚೆ ಜೀವ ವಿಮೆಗಳಲ್ಲಿ ರಾಜ್ಯದಲ್ಲಿ ಚಿತ್ರದುರ್ಗ ಅಂಚೆ ವಿಭಾಗವು ಮೂರೇ ತಿಂಗಳಿಗೆ 2 ಕೋಟಿ 98 ಲಕ್ಷ ಪ್ರೀಮಿಯಂ ಹಣವನ್ನು ಸಂಗ್ರಹಣೆ ಮಾಡುವ ಮೂಲಕ ಪ್ರಥಮ ಸ್ಥಾನದಲ್ಲಿದೆ. ಹಳೆ ಚಿತ್ರದುರ್ಗ ವಿಭಾಗವು ದಾವಣಗೆರೆ, ಹರಿಹರ, ಜಗಳೂರು ಒಳಗೊಂಡ0ತೆ 2 ಕೋಟಿ 98 ಲಕ್ಷ ಪ್ರಿಮಿಯಂ ವಿಮಾ ಮೊತ್ತವನ್ನು ಸಂಗ್ರಹಿಸಿ ಇತರೆ ಜಿಲ್ಲೆಗಳಿಗೆ ಮಾದರಿಯಾಗಿದೆ.

ಗ್ರಾಮೀಣ ಜೀವ ವಿಮೆ : ಇದು ಕೇಂದ್ರ ಸರಕಾರದ ಯೋಜನೆಯಾಗಿದ್ದು, ಈ ವಿಮೆ ಪಡೆಯಲು ಗ್ರಾಮೀಣ ಪ್ರದೇಶದ ನಿವಾಸಿಯಾಗಿರಬೇಕು. ಕಡಿಮೆ ಕಂತು ಅಧಿಕ ಬೋನಸ್, 18 ರಿಂದ 55 ವರ್ಷ ವಯಸ್ಸಿನವರು ಪ್ರೀಮಿಯಂ ಕಟ್ಟಬಹುದಾಗಿದೆ. ವಿಮೆಯಲ್ಲಿ ಗ್ರಾಮ ಸುರಕ್ಷ, ಸುಮಂಗಳ, ಸುವಿಧ, ಗ್ರಾಹಕ ಪ್ರಿಯಾ ಮತ್ತು ಬಾಲ ವಿಮೆ ಎಂಬ ಯೋಜನೆಗಳಿವೆ. ವಿಮೆ ಪಡೆದವರಿಗೆ ಸಾಲ ಸೌಲಭ್ಯ, ನಾಮ ನಿರ್ದೇಶನ ಸೌಲಭ್ಯ, ಆದಾಯ ತೆರಿಗೆ ವಿನಾಯಿತಿ ಒಳಪಟ್ಟಿರುವುದರಿಂದ ಬಹುತೇಕ ಗ್ರಾಮೀಣರು ಈ ವಿಮೆಯನ್ನು ಮಾಡಿಸುತ್ತಾರೆ.

ಅಂಚೆ ಜೀವ ವಿಮೆ!
ಕೇಂದ್ರ, ರಾಜ್ಯ ಸರಕಾರಿ ನೌಕರರು, ಅಧೀನ ಸಂಸ್ಥೆಗಳು, ಖಾಸಗಿ ಸಂಸ್ಥೆಗಳ ನೌಕರರು ವೃತ್ತಿಪರರು (ವೈದ್ಯರು, ವಕೀಲರು, ಅಭಿಯಂತರು) ಇತ್ಯಾದಿ ಪಡೆಯಲು ಅರ್ಹರಾಗಿದ್ದಾರೆ. ಸಂತೋಷ, ಸುರಕ್ಷ, ಸುಮಂಗಳ, ಸುವಿಧ, ಯೋಜನೆಗಳಿದ್ದು, ಕಡಿಮೆ ಪ್ರೀಮಿಯಂ ಅಧಿಕ ಬೋನಸ್, ನಾಮ ನಿರ್ದೇಶನ ಸೌಲಭ್ಯವಿದ್ದ ಕಾರಣ ವಿಮೆಯನ್ನು ಹೆಚ್ಚು ಜನರು ಮಾಡಿಸಿದ್ದಾರೆ. ಎಲ್ಲದಕ್ಕಿಂತ ಹೆಚ್ಚಾಗಿ ಸರಕಾರದ ವಿಮೆ ಆಗಿರುವುದರಿಂದ ಹಲವರು ಈ ವಿಮೆಗೆ ಪ್ರಾಶಸ್ತ್ಯ ನೀಡುತ್ತಾರೆ. ಹೂಡಿಕೆ ಹಣದ ಮತ್ತು ಜೀವ ವಿಮೆ ಭದ್ರತೆ ಇರುವುದರಿಂದ ಹೆಚ್ಚು ಜನಜನಿತವಾಗಿದೆ.

ಆಜಾದಿ ಕಾ ಅಮೃತ್ ಮಹೋತ್ಸವ ನಿಮಿತ್ತ ಅಂಚೆ ಜೀವ ವಿಮೆ ಸ್ಪರ್ಧೆಯನ್ನು ಆಯೋಜಿಸಲಾಗಿತ್ತು. ಈ ಸ್ಫರ್ಧೆ ಅಂಗವಾಗಿ, ಜಿದ್ದಾಜಿದ್ದಿಗೆ ಬಿದ್ದ ಹಲವರು ಹೆಚ್ಚು ಪ್ರೀಮಿಯಂ ಮಾಡಿಸಲು ಯಶಸ್ವಿಯಾಗಿದ್ದಾರೆ. ಈ ಯಶಸ್ವಿ ಪರಿಣಾಮ ಡಿಸೆಂಬರ್ 2021-ಮಾರ್ಚ್ 31ರವರೆಗೆ ಹೆಚ್ಚು ಹಣ ಸಂಗ್ರಹಿಸಲು ಸಾಧ್ಯವಾಗಿದೆ. ಈ ಕಾರ್ಯ ಸಾಧನೆಗೆ ಎಲ್ಲಾ ಅಂಚೆ ಅಧಿಕಾರಿ ವರ್ಗ, ಅಂಚೆ ಪಾಲಕರು/ನೌಕರರು ಮತ್ತು ಗ್ರಾಮೀಣ ಅಂಚೆ ಸೇವಕರು ಹಾಗೂ ಅಂಚೆ ಜೀವ ವಿಮಾ ಪ್ರತಿನಿಧಿಗಳು ಕಾರಣವಾಗಿದ್ದಾರೆ ಎಂದು ವಿರೂಪಾಕ್ಷಪ್ಪ ತಿಳಿಸಿದ್ದಾರೆ.

ಪಾರಿತೋಷಕ : ಕರ್ನಾಟಕ ವೃತ್ತದಲ್ಲಿ ಪ್ರಥಮ ಸ್ಥಾನವನ್ನು ಅತ್ಯುತ್ತಮ ಅಂಚೆ ವಿಭಾಗದ ಮುಖ್ಯಸ್ಥರ ವಿಭಾಗದಲ್ಲಿ ಚಿತ್ರದುರ್ಗ ವಿಭಾಗಕ್ಕೆ ಘೋಷಣೆಯಾಗಿದೆ. ಅತ್ಯುತ್ತಮ ಅಂಚೆ ವಿಭಾಗದ ಮುಖ್ಯಸ್ಥರ ವಿಭಾಗಕ್ಕೆ ಅಂಚೆ ಅಧೀಕ್ಷಕರಾದ ವಿರೂಪಾಕ್ಷಪ್ಪನವರು ಆಯ್ಕೆಯಾಗಿದ್ದಾರೆ. ಅದರಂತೆ ಸೋಮವಾರ ಬೆಂಗಳೂರಿನ ಮುಖ್ಯ ಪೋಸ್ಟ್ ಮಾಸ್ಟರ್ ಜನರಲ್, ಕಚೇರಿಯಲ್ಲಿ ಆಯೋಜಿಸಿದ್ದ ಪ್ರಶಸ್ತಿ ಪ್ರಧಾನ ಸಮಾರಂಭದಲ್ಲಿ ಮುಖ್ಯ ಪೋಸ್ಟ್ ಮಾಸ್ಟರ್ ಜನರಲ್ ರಾಜೇಂದ್ರಕುಮಾರ್ ಅವರು ವಿರೂಪಾಕ್ಷಪ್ಪ, ಅವರಿಗೆ ಪ್ರಶಸ್ತಿ ನೀಡಿ ಗೌರವಿಸಿದರು.

ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ವಿರೂಪಾಕ್ಷಪ್ಪ ಪ್ರಶಸ್ತಿಯು ನಮಗೆ ಇನ್ನೂ ಜವಾಬ್ದಾರಿಯನ್ನು ಹೆಚ್ಚಿಸಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು. ಪ್ರಶಸ್ತಿಯು ಪ್ರಮಾಣ ಪತ್ರ, ನಗದು ಮತ್ತು ಪಾರಿತೋಷಕವನ್ನು ಒಳಗೊಂಡಿತ್ತು. ಈ ಪ್ರಶಸ್ತಿಯ ಶ್ರೇಯಸ್ಸನ್ನು ಇಡೀ ಚಿತ್ರದುರ್ಗ ಅಂಚೆ ವಿಭಾಗದ ಸಮಸ್ತ ಅಂಚೆ ಅಧಿಕಾರಿ ವರ್ಗ, ನೌಕರರು ಮತ್ತು ಗ್ರಾಮೀಣ ಅಂಚೆ ಸೇವಕರು ಹಾಗೂ ವಿಮಾ ಪ್ರತಿನಿಧಿಗಳಿಗೆ ಸಲ್ಲಿಸಿದರು.

 

garudavoice21@gmail.com 9740365719

Leave a Reply

Your email address will not be published. Required fields are marked *

error: Content is protected !!