ವಿಧಾನಸಭೆ ಕಲಾಪದಲ್ಲಿ ವಿಧಾನಸಭೆ ಸದಸ್ಯ ರವಿಕುಮಾರ್ ಪ್ರಶ್ನೆಗೆ ಸಿಎಂ ಬಸವರಾಜ್ ಬೊಮ್ಮಾಯಿ ಉತ್ತರ ಏನು ಗೊತ್ತಾ?: ಕಳೆದ 3 ವರ್ಷದಲ್ಲಿ 12780 ಕೆಪಿಎಸ್‌ಸಿ ಹುದ್ದೆಗಳ ಭರ್ತಿ
ದಾವಣಗೆರೆ : ಕರ್ನಾಟಕ ಲೋಕಸೇವಾ ಆಯೋಗ ನೀಡಿರುವ ಮಾಹಿತಿಯಂತೆ ಸರ್ಕಾರದ ವಿವಿಧ ಇಲಾಖೆಗಳಿಂದ, ನೇಮಕಾತಿ ಪ್ರಾಧಿಕಾರಗಳಿಂದ ಸ್ವೀಕೃತವಾಗಿದ್ದ ಪ್ರಸ್ತಾವನೆಗಳ ಪೈಕಿ 21827 ಹುದ್ದೆಗಳನ್ನು ಭರ್ತಿ ಮಾಡಲು ಆಯೋಗದಿಂದ ಅಧಿಸೂಚನೆಗಳನ್ನು ಹೊರಡಿಸಲಾಗಿರುತ್ತದೆ ಎಂದು ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ವಿಧಾನಸಭೆ ಕಲಾಪದಲ್ಲಿ ಎನ್. ರವಿಕುಮಾರ್ ಕೇಳಿದ ಪ್ರಶ್ನೆಗೆ ಉತ್ತರಿಸಿದ್ದಾರೆ.
ರಾಜ್ಯದಲ್ಲಿ ಸರ್ಕಾರವು ಕಳೆದ 3 ವರ್ಷಗಳಿಂದ ಕೆಪಿಎಸ್‌ಸಿ ಮೂಲಕ ಎಷ್ಟು ಇಲಾಖೆಗಳ, ಎಷ್ಟು ಹುದ್ದೆಗಳನ್ನು ಭರ್ತಿ ಮಾಡಲು ಸೂಚಿಸಲಾಗಿತ್ತು ಎಂದು ಕೇಳಿದ ಪ್ರಶ್ನೆಗೆ ಉತ್ತರಿಸಿರುವ ಅವರು, ಈ ಸಂಬಂಧ ಕಳೆದ 3 ವರ್ಷಗಳಲ್ಲಿ 12780 ಹುದ್ದೆಗಳನ್ನು ಭರ್ತಿ ಮಾಡಲಾಗಿದ್ದು, ಕೆಲವು ಅಧಿಸೂಚಿಸಿದ ಹುದ್ದೆಗಳ ಪೈಕಿ 2320 ಹುದ್ದೆಗಳನ್ನು 2019ರ ಪೂರ್ವದಲ್ಲಿಯೇ ಪೂರ್ಣಗೊಳಿಸಿ ಇಲಾಖೆಗೆ ರವಾನಿಸಲಾಗಿದೆ.ಇನ್ನುಳಿದಂತೆ ಅದರಲ್ಲಿ 6314 ಹುದ್ದೆಗಳಿಗೆ ನೇಮಕಾತಿ ಪ್ರಗತಿಯಲ್ಲಿರುತ್ತದೆ ಮತ್ತು 413 ಹುದ್ದೆಗಳನ್ನು ವಿವಿಧ ಕಾರಣಗಳಿಗಾಗಿ ಅರ್ಹ ಅಭ್ಯರ್ಥಿಗಳ ಕೊರತೆಯಿಂದ ಭರ್ತಿ ಮಾಡಿರುವುದಿಲ್ಲ ಎಂದು ತಿಳಿಸಿದ್ದಾರೆ.
ರಾಜ್ಯದಲ್ಲಿ ಸರ್ಕಾರವು ಕಳೆದ 3 ವರ್ಷಗಳಿಂದ ಕೆಪಿಎಸ್‌ಸಿ ಮೂಲಕ ಭರ್ತಿ ಮಾಡಲು ಸೂಚಿಸಿದ ಎಷ್ಟು ಹುದ್ದೆಗಳನ್ನು ಭರ್ತಿ ಮಾಡಲಾಗಿದೆ, ಎಷ್ಟು ಹುದ್ದೆಗಳಿಗೆ ಅಧಿಸೂಚನೆ ಹೊರಡಿಸಲಾಗಿದೆ, ಎಷ್ಟು ಹುದ್ದೆಗಳ ಪರೀಕ್ಷಾ ಫಲಿತಾಂಶಪ್ರಕಟಿಸಲಾಗಿದೆ, ಎಷ್ಟು ಹುದ್ದೆಗಳ ಸಂದರ್ಶನ ಪ್ರಕ್ರಿಯೆ ಮುಕ್ತಾಯಗೊಳಿಸಲಾಗಿರುತ್ತದೆ ಹಾಗೂ ಎಷ್ಟು ಹುದ್ದೆಗಳ ಆಯ್ಕೆಯಾದ ಅಭ್ಯರ್ಥಿಗಳ ಪಟ್ಟಿಯನ್ನು ಸರ್ಕಾರಕ್ಕೆ ಒಪ್ಪಿಸಲಾಗಿದೆ ಎಂಬ ಪ್ರಶ್ನೆಗೆ ಉತ್ತರಿಸಿರುವ ಮುಖ್ಯಮಂತ್ರಿಗಳು ಕರ್ನಾಟಕ ಲೋಕಸೇವಾ ಆಯೋಗವು ನೀಡಿರುವ ಮಾಹಿತಿಯಂತೆ 106 ಕೆಎಎಸ್ ಹುದ್ದೆಗಳಿಗೆ ಮುಖ್ಯ ಪರೀಕ್ಷೆಯನ್ನು ಫೆಬ್ರವರಿ -2021ರಂದು ನಡೆಸಲಾಗಿದೆ ಎಂದು ಹೇಳಿದ್ದಾರೆ.
2017-18ನೇ ಸಾಲಿನ ಗೆಜೆಟೆಡ್ ಪ್ರೊಬೇಷನರ್ 106 ಹುದ್ದೆಗಳಿಗೆ ದಿನಾಂಕ 31-01-2020ರಂದು ಅಧಿಸೂಚನೆಯನ್ನು ಹೊರಡಿಸಿ, ಕೋವಿಡ್-19 ಲಾಕ್‌ಡೌನ್‌ನಿಂದಾಗಿ ಪರೀಕ್ಷೆಯನ್ನು ಮುಂದೂಡಿ ಕೋವಿಡ್ -19 ಹರಡುತ್ತಿದ್ದ ಸಂದರ್ಭದಲ್ಲಿಯೂ ಭಾರತ ಸರ್ಕಾರದ ಮಾರ್ಗಸೂಚಿಯನ್ವಯ ದಿನಾಂಕ 24-08-2020ರಂದು ಪೂರ್ವಭಾವಿ ಮತ್ತು ಮುಖ್ಯ ಪರೀಕ್ಷೆಯನ್ನು ದಿನಾಂಕ 13-02-2021ರಿಂದ 16-02-2021ರವರೆಗೆ ನಡೆಸಲಾಗಿರುತ್ತದೆ. ಗೆಜೆಟೆಡ್ ಪ್ರೊಬೇಷನರ್ 2015ನೇ ಸಾಲಿನ ಮುಖ್ಯ ಪರೀಕ್ಷೆಯಲ್ಲಿ ಆಯ್ಕೆಯಾಗದ ಕೆಲವು ಅಭ್ಯರ್ಥಿಗಳು ಮೌಲ್ಯಮಾಪನದ ಕುರಿತು ಆರೋಪಿಸಿ ವಿವಿಧ ನ್ಯಾಯಾಲಯಗಳಲ್ಲಿ ಪ್ರಕರಣಗಳನ್ನು ದಾಖಲಿಸಿರುತ್ತಾರೆ ಎಂದು ಉತ್ತರಿಸಿದ್ದಾರೆ.
ಇನ್ನು ವಿವಿಧ ಇಲಾಖೆಯ ಸಹಾಯಕ ಅಭಿಯಂತರರು, ಕಿರಿಯ ಅಭಿಯಂತರರು ಹುದ್ದೆಗಳಿಗೆ ನಡೆದ ಪರೀಕ್ಷಾ ಫಲಿತಾಂಶವು ವಿಳಂಬವಾಗಲು ಕಾರಣವೇನು? ಎಂದು ರವಿಕುಮಾರ್ ಅವರ ಪ್ರಶ್ನೆಗೆ ಉತ್ತರಿಸಿರುವ ಬೊಮ್ಮಾಯಿ ಕರ್ನಾಟಕ ಲೋಕಸೇವಾ ಆಯೋಗವು ನೀಡಿರುವ ಮಾಹಿತಿಯಂತೆ ಸಹಾಯಕ ಅಭಿಯಂತರರು, ಕಿರಿಯ ಅಭಿಯಂತರರು ಹುದ್ದೆಗಳಿಗೆ ದಿನಾಂಕ 14-12-2021, 15-12-2021 ಮತ್ತು 29-12-2021ರಂದು ಸ್ಪರ್ಧಾತ್ಮಕ ಪರೀಕ್ಷೆಗಳನ್ನು ನಡೆಸಿ ದಿನಾಂಕ 05-01-2022ರಂದು ಕೀ ಉತ್ತರಗಳನ್ನು ಪ್ರಕಟಿಸಲಾಗಿದೆ. ಆಯೋಗವು ಅಧಿಸೂಚಿಸಿದ ವಿವಿಧ ಹುದ್ದೆಗಳ ನೇಮಕಾತಿಗೆ ಸಂಬಂಧಿಸಿದಂತೆ ಕ್ರಮಾನುಗತವಾಗಿ ಪರಿಕ್ಷೋತರ ಕಾರ್ಯಗಳನ್ನು ನಿರ್ವಹಿಸಲಾಗುತ್ತಿದ್ದು, ಸಹಾಯಕ ಅಭಿಯಂತರರು, ಕಿರಿಯ ಅಭಿಯಂತರರು ಹುದ್ದೆಗಳ ಪರೀಕ್ಷೆಗಳನ್ನು ಡಿಸೆಂಬರ್ -2021ರ ಅಂತ್ಯದಲ್ಲಿ ನಡೆಸಲಾಗುವುದರಿಂದ ಸದ್ಯದಲ್ಲಿಯೇ ಸದರಿ ಹುದ್ದೆಗಳ ಪರಿಕ್ಷೋತರ ಕಾರ್ಯಗಳನ್ನು ಪೂರ್ಣಗೊಳಿಸಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಉತ್ತರಿಸಿದ್ದಾರೆ.