ಕಂದಾಯ ದಾಖಲೆ ರೈತರ ಮನೆ ಬಾಗಿಲಿಗೆ” ಯೋಜನೆಗೆ ಮುಖ್ಯಮಂತ್ರಿ ಅದ್ದೂರಿ ಚಾಲನೆ: ಎತ್ತಿನ ಬಂಡಿ ಏರಿ ಜಾಗೃತಿ ಮೂಡಿಸಿದ ಸಿಎಂ

ಚಿಕ್ಕಬಳ್ಳಾಪುರ: ಪಹಣಿ, ಅಟ್ಲಾಸ್, ಜಾತಿ ಮತ್ತು ಆದಾಯ ಪ್ರಮಾಣ ಪತ್ರ ಸೇರಿದಂತೆ ಕಂದಾಯ ಇಲಾಖೆಯ ವಿವಿಧ ದಾಖಲೆಗಳನ್ನು ನೇರವಾಗಿ ರೈತರು ಮತ್ತು ಸಾರ್ವಜನಿಕರ ಮನೆ ಬಾಗಿಲಿಗೆ ತಲುಪಿಸುವ ರಾಜ್ಯ ಸರ್ಕಾರದ ಮಹತ್ವಾಕಾಂಕ್ಷೆಯ ವಿನೂತನ ಯೋಜನೆಯಾದ ಕಂದಾಯ ದಾಖಲೆ ಮನೆ ಬಾಗಿಲಿಗೆ ಯೋಜನೆಗೆ ಇಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಚಿಕ್ಕಬಳ್ಳಾಪುರ ತಾಲ್ಲೂಕಿನ ಪೋಶೆಟ್ಟಿಹಳ್ಳಿ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಗುಂಗಿರ್ಲಹಳ್ಳಿ ಗ್ರಾಮದಿಂದ ಚಾಲನೆ ನೀಡಿದರು. ಜಿಲ್ಲಾಡಳಿತ ಮತ್ತು ಕಂದಾಯ ಇಲಾಖೆ ಸಹಯೋಗದಲ್ಲಿ ಚಿಕ್ಕಬಳ್ಳಾಪುರ ತಾಲ್ಲೂಕಿನ ಪೋಶೆಟ್ಟಿಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗುಂಗಿರ್ಲಹಳ್ಳಿ ಗ್ರಾಮದಲ್ಲಿ ನಡೆದ ರಾಜ್ಯಮಟ್ಟದ ಚಾಲನಾ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿಗಳು ಸರ್ಕಾರದ ಈ ಮಹತ್ವದ ಯೋಜನೆಗೆ ವಿದ್ಯುಕ್ತವಾಗಿ ಚಾಲನೆ ನೀಡಿದರು.
ನಂತರ ಮಾತನಾಡಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಕಂದಾಯ ಇಲಾಖೆ ಗ್ರಾಮ ವಾಸ್ತವ್ಯ, ಜಿಲ್ಲಾಧಿಕಾರಿಗಳ ನಡೆ ಗ್ರಾಮಗಳ ಕಡೆ ಎಂಬ ವಿನೂತನ ಯೋಜನೆ ಮತ್ತು ಕಾರ್ಯಕ್ರಮಗಳನ್ನು ಈಗಾಗಲೇ ಪರಿಚಯಿಸುವ ಮೂಲಕ ಗಮನಸೆಳೆದಿರುವ ಕಂದಾಯ ಇಲಾಖೆ ಈಗ ಪಹಣಿ, ಅಟ್ಲಾಸ್, ಜಾತಿ ಮತ್ತು ಆದಾಯ ಪ್ರಮಾಣ ಪತ್ರ ಸೇರಿದಂತೆ ವಿವಿಧ ದಾಖಲೆಗಳನ್ನು ನೇರವಾಗಿ ರೈತರು ಮತ್ತು ಸಾರ್ವಜನಿಕರ ಮನೆಬಾಗಿಲಿಗೇ ಉಚಿತವಾಗಿ ತಲುಪಿಸುವ ಮಹತ್ವದ ಯೋಜನೆಗೆ ಇಂದು ಚಾಲನೆ ನೀಡಿದೆ. ಈ ವಿಶಿಷ್ಟ ಯೋಜನೆಯ ಮೂಲಕ ರಾಜ್ಯದ ಸುಮಾರು 55 ಲಕ್ಷ ರೈತರಿಗೆ 5 ಕೋಟಿ ವಿವಿಧ ಕಂದಾಯ ದಾಖಲೆಗಳನ್ನು ಒಂದೇ ದಿನದಲ್ಲಿ ರಾಜ್ಯದ್ಯಂತ ಉಚಿತವಾಗಿ ವಿತರಿಸಲಾಗುತ್ತಿದೆ. ಇದು ಕಂದಾಯ ಇಲಾಖೆಯಲ್ಲಿ ಕ್ರಾಂತಿಕಾರಿ ಹೆಜ್ಜೆಯಾಗಿದ್ದು, ಮುಂದಿನ ದಿನಗಳಲ್ಲಿ ದೊಡ್ಡ ಕಂದಾಯ ಕ್ರಾಂತಿಗೆ ಸಾಕ್ಷಿಯಾಗಲಿದೆ. ಕಂದಾಯ ದಾಖಲೆ ಮನೆ ಬಾಗಿಲಿಗೆ ಯೋಜನೆಯಿಂದ ರೈತರು ಮತ್ತು ಸಾರ್ವಜನಿಕರು ಕಚೇರಿಗಳಿಗೆ ಪದೇ ಪದೇ ಸುತ್ತಾಡುವುದು ತಪ್ಪುತ್ತದೆ. ಕಂದಾಯ ದಾಖಲೆಗಳು ನೇರವಾಗಿ ರೈತರ ಮನೆಬಾಗಿಲಿಗೆ ತಲುಪುವುದರಿಂದ ರೈತರಿಗೆ ಸರ್ಕಾರದ ಖಾತ್ರಿಯೊಂದಿಗೆ ದಾಖಲೆಗಳು ಅಧಿಕೃತವಾಗಿ ಮತ್ತು ಸುಲಭವಾಗಿ ಕೈ ಸೇರಿ ಹೆಚ್ಚಿನ ಅನುಕೂಲವಾಗಲಿದೆ ಎಂದರು.
ಚಿಕ್ಕಬಳ್ಳಾಪುರ-ಕೋಲಾರ ಸೇರಿದಂತೆ ಬಯಲುಸೀಮೆ ಜಿಲ್ಲೆಗಳ ನೀರಿನ ಬವಣೆಯನ್ನು ನೀಗಿಸಲು ರಾಜ್ಯ ಸರ್ಕಾರ ಜಾರಿ ಮಾಡಿರುವ ಎತ್ತಿನಹೊಳೆ ಯೋಜನೆಗೆ ಈ ಬಾರಿಯ ಬಜೆಟ್ನಲ್ಲಿ 3 ಸಾವಿರ ಕೋಟಿ ರೂಪಾಯಿಗಳನ್ನು ಮೀಸಲಿಡಲಾಗಿದ್ದು, ಎತ್ತಿನಹೊಳೆ ಕಾಮಗಾರಿಯ ವೇಗವನ್ನು ಹೆಚ್ಚಿಸಿ ಸಾಧ್ಯವಾದಷ್ಟೂ ಮಟ್ಟಿಗೆ ಮುಂದಿನ ವರ್ಷ ಚಿಕ್ಕಬಳ್ಳಾಪುರ ಜಿಲ್ಲೆಗೆ ನೀರನ್ನು ಹರಿಸಲು ಶ್ರಮಿಸಲಾಗುವುದು ಎಂದು ತಿಳಿಸಿದರು. ಕಂದಾಯ ಸಚಿವ ಆರ್.ಅಶೋಕ್ ಮಾತನಾಡಿ, ಕಂದಾಯ ಇಲಾಖೆಯಲ್ಲಿ ಹಲವು ವಿನೂತನ ಯೋಜನೆಗಳನ್ನು ಜಾರಿ ಮಾಡುವ ಮೂಲಕ ಮಹತ್ವದ ಬದಲಾವಣೆಗಳನ್ನು ತರಲಾಗುತ್ತಿದೆ. ಕಂದಾಯ ದಾಖಲೆಗಳನ್ನು ನೇರವಾಗಿ ರೈತರ ಮನೆಬಾಗಿಲಿಗೇ ತಲುಪಿಸುವ ಯೋಜನೆಯಿಂದ ರಾಜ್ಯದ ಲಕ್ಷಾಂತರ ರೈತರಿಗೆ ಅನುಕೂಲವಾಗಲಿದೆ. ದಾಖಲೆಯನ್ನು ಪಡೆಯುವುದು ಪ್ರತಿಯೊಬ್ಬರ ಹಕ್ಕು. ಆ ಹಕ್ಕನ್ನು ಅತ್ಯಂತ ಸರಳ ರೀತಿಯಲ್ಲಿ ಪಡೆಯಲು ಈ ಮಹತ್ವದ ಯೋಜನೆ ಸಹಕಾರಿಯಾಗಲಿದೆ. ಭೂದಾಖಲೆಗಳ ಇಲಾಖೆಯಲ್ಲಿ ಭೂಮಾಪನಕ್ಕೆ ಸಂಬಂಧಿಸಿದಂತೆ 2 ಲಕ್ಷ ಅರ್ಜಿಗಳು ವಿಲೇವಾರಿಯಾಗಲು ಬಾಕಿಯಿದ್ದು, ಈಗಾಗಲೇ 3 ಸಾವಿರ ಭೂಮಾಪಕರ ನೇಮಕಾತಿ ಪ್ರಕ್ರಿಯೆಗೆ ಚಾಲನೆ ನೀಡಲಾಗಿದೆ ಎಂದು ತಿಳಿಸಿದರು.
ರಾಜ್ಯಾದ್ಯಂತ ಇಂದು 55 ಲಕ್ಷ ರೈತಾಪಿ ವರ್ಗದವರಿಗೆ ಸುಮಾರು 5 ಕೋಟಿ ದಾಖಲೆಗಳನ್ನು ಉಚಿತವಾಗಿ ಒಂದೇ ದಿನ ವಿತರಿಸಲಾಗುತ್ತಿದೆ. ಈ ದಾಖಲೆಗಳಿಂದ ರೈತರು ತಮ್ಮ ಹಕ್ಕು ಸ್ವಾಮ್ಯದ ಬಗ್ಗೆ ಸೂಕ್ತವಾಗಿ ತಿಳಿದುಕೊಳ್ಳಬಹುದು. ಬ್ಯಾಂಕ್ ಗಳಿಂದ ಸಾಲ ತೆಗೆದುಕೊಳ್ಳಲು ಹಾಗೂ ಸರ್ಕಾರದ ಎಲ್ಲಾ ಸವಲತ್ತುಗಳನ್ನು ಪಡೆಯಲು ಸಹಕಾರಿಯಾಗುತ್ತದೆ. ಈ ಎಲ್ಲಾ ಅಂಶಗಳನ್ನು ಮನಗಂಡು ‘ಅಲೆದಾಟ ಬೇಕಿಲ್ಲ ಇಂದು ನಾಳೆ ಸುತ್ತಾಟವಿಲ್ಲ ಬಂತು ನೋಡಿ ಮನೆ ಬಾಗಿಲಿಗೆ ದಾಖಲೆ’ ಎಂಬ ವಾಕ್ಯದೊಂದಿಗೆ ಕಂದಾಯ ದಾಖಲೆ ಮನೆಬಾಗಿಲಿಗೆ ನಿಮ್ಮ ದಾಖಲೆ ಎಂಬ ವಿನೂತನ ಯೋಜನೆಯನ್ನು ಇಂದು ರಾಜ್ಯಾದ್ಯಂತ ಯಶಸ್ವಿಯಾಗಿ ಜಾರಿಗೊಳಿಸಲಾಗಿದೆ. ಅಧಿಕಾರಿಗಳು ಈ ನಿಟ್ಟಿನಲ್ಲಿ ದಿನವಿಡೀ ಅಭಿಯಾನದ ರೀತಿ ಈ ಯೋಜನೆಯನ್ನು ಯಶಸ್ವಿಗೊಳಿಸುತ್ತಿದ್ದಾರೆ. ಈ ಯೋಜನೆಯ ಮಾದರಿಯಲ್ಲೇ ಮನೆ ಬಾಗಿಲಿಗೆ ಪಿಂಚಣಿ ಹಾಗೂ ತ್ವರಿತ ಪಾರದರ್ಶಕ ಭೂ ಪರಿವರ್ತನೆ ಯೋಜನೆಗಳನ್ನು ಮುಂದಿನ ಕೆಲವೇ ದಿನಗಳಲ್ಲಿ ಜಾರಿಗೆ ತರಲಾಗುವುದು ಎಂದು ತಿಳಿಸಿದರು.
ಕಾರ್ಯಕ್ರಮ ಹೇಗಿತ್ತು
ಪೋಶೆಟ್ಟಿಹಳ್ಳಿ ಕಂದಾಯ ದಾಖಲೆ ಮನೆ ಬಾಗಿಲಿಗೆ ಯೋಜನೆಯ ರಾಜ್ಯ ಮಟ್ಟದ ಚಾಲನಾ ಕಾರ್ಯಕ್ರಮದ ಅಂಗವಾಗಿ ಶನಿವಾರ ಚಿಕ್ಕಬಳ್ಳಾಪುರ ತಾಲ್ಲೂಕಿನ ನಂದಿ ಹೋಬಳಿಯ ಪೊಶೇಟ್ಟಹಳ್ಳಿ ಗ್ರಾಮ ಪಂಚಾಯ್ತಿಯ ಗುಂಗೀರ್ಲಹಳ್ಳಿ ಗ್ರಾಮದಲ್ಲಿ ಮಾನ್ಯ ಮುಖ್ಯಮಂತ್ರಿ ಬಸವರಾಜು ಬೊಮ್ಮಾಯಿ ಅವರು ಆಗಮಿಸಿದರು.
ಗ್ರಾಮದ ಪ್ರವೇಶ ರಸ್ತೆಯಲ್ಲಿ ಗ್ರಾಮದ ಮಹಿಳೆಯರು ಮುಖ್ಯಮಂತ್ರಿಯವರಿಗೆ ಆರತಿ ಬೆಳಗಿ ಹಾಗೂ ಕುಂಭ ಸ್ವಾಗತ ನೀಡಿ ಬರಮಾಡಿಕೋಂಡರು.ನಂತರ ಸರ್ಕಾರದ ವಿನೂತನ ಮಹತ್ವಾಕಾಂಕ್ಷಿ ಯೋಜನೆಯಾದ “ಕಂದಾಯ ದಾಖಲೆ ಮನೆ ಬಾಗಿಲಿಗೆ ಯೋಜನೆ”ಯಡಿ ಕಂದಾಯ ಇಲಾಖೆಯಿಂದ ಸಾರ್ವಜನಿಕರಿಗೆ ನೀಡುತ್ತಿರುವ ಮೂಲ ದಾಖಲೆಗಳನ್ನು ಚಿಕ್ಕಬಳ್ಳಾಪುರ ಜಿಲ್ಲೆಯ ತಾಲ್ಲೂಕಿನ ಗುಂಗೀರ್ಲಹಳ್ಳಿ ಗ್ರಾಮದ ರೈತರಾದ ಹನುಮಪ್ಪ ದೊಡ್ಡಪ್ಪಯ್ಯ ಹಾಗೂ ಇತರರಿಗೆ ಮುಖ್ಯಮಂತ್ರಿಗಳು ಉಚಿತವಾಗಿ ವಿತರಿಸುವ ಮೂಲಕ ಈ ಮಹತ್ವಪೂರ್ಣ ಯೋಜನೆಗೆ ಚಾಲನೆ ನೀಡಿದರು. ಈ ವೇಳೆ ಗ್ರಾಮಸ್ಥರೋರ್ವರ ಮನೆಯಲ್ಲಿ ಮುಖ್ಯಮಂತ್ರಿಗಳು ಚಹಾ ಕುಡಿದರು.
ಗ್ರಾಮಸ್ಥರೊಂದಿಗೆ ಸಂವಾದ
ಚಾಲನೆ ನೀಡಿದ ನಂತರ ಮುಖ್ಯಮಂತ್ರಿ ಅವರು ಗುಂಗೀರ್ಲಹಳ್ಳಿ ಗ್ರಾಮದಲ್ಲಿನ ಹಳ್ಳಿಕಟ್ಟೆಯ ಮೇಲೆ ಕುಳಿತು ಗ್ರಾಮಸ್ಥರೊಂದಿಗೆ ಸಂವಾದ ನಡೆಸಿ ಗ್ರಾಮದ ಅಹವಾಲುಗಳನ್ನು ಆಲಿಸಿದರ ಜೊತೆಗೆ ಅರಿವು ಮೂಡಿಸಿದರು. ಆನಂತರ ಎತ್ತಿನ ಬಂಡಿಯಲ್ಲಿ ಗ್ರಾಮದಲ್ಲಿ ಮೆರವಣಿಗೆ ಕೈಗೋಂಡು ಈ ಯೋಜನೆಯ ಕುರಿತು ಜಾಗೃತಿ ಮೂಡಿಸಿದರು. ಅಲ್ಲಿಂದ ಗ್ರಾಮದಲ್ಲಿಯೇ ಕಂದಾಯ ದಾಖಲೆ ಮನೆ ಬಾಗಿಲಿಗೆ ಯೋಜನೆಯ ರಾಜ್ಯಮಟ್ಟದ ಚಾಲನಾ ಕಾರ್ಯಕ್ರಮದ ವೇದಿಕೆ ಕಾರ್ಯಕ್ರಮವನ್ನು ಉದ್ಘಾಟಿಸಿದರು ಗ್ರಾಮದಲ್ಲಿ ಹಬ್ಬದ ವಾತಾವರಣ ಮೂಡಿದ್ದು, ಹೂವಿನ ಅಲಂಕಾರದಿಂದ ಸಿಂಗಾರಗೊಂಡಿತ್ತು, ಗ್ರಾಮಸ್ಥರು ನಾಡ ದೊರೆಯನ್ನು ಅದ್ದೂರಿಯಾಗಿ ಬರಮಾಡಿಕೊಂಡರು.
ಜಿಲ್ಲಾಡಳಿತಕ್ಕೆ ಅಭಿನಂದನೆ
ಕಂದಾಯ ದಾಖಲೆ ಮನೆಬಾಗಿಲಿಗೆ ಯೋಜನೆಯ ರಾಜ್ಯ ಮಟ್ಟದ ಚಾಲನಾ ಕಾರ್ಯಕ್ರಮವನ್ನು ಯಶಸ್ವಿಯಾಗಿ ಯಾವುದೇ ಲೋಪವಾಗದಂತೆ ಆಯೋಜಿಸಿದ ಚಿಕ್ಕಬಳ್ಳಾಪುರ ಜಿಲ್ಲಾಡಳಿತಕ್ಕೆ ಹಾಗೂ ಜಿಲ್ಲಾಧಿಕಾರಿ ಆರ್.ಲತಾ ಅವರಿಗೆ ಕಂದಾಯ ಸಚಿವರು ಅಭಿನಂದನೆ ತಿಳಿಸಿದರು. ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಹಾಗೂ ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ಅವರು ಮಾತನಾಡಿ, ಸರ್ಕಾರದ ವಿನೂತನ ಮಹತ್ವಾಕಾಂಕ್ಷಿ ಯೋಜನೆಯಾದ “ಕಂದಾಯ ದಾಖಲೆ ಮನೆ ಬಾಗಿಲಿಗೆ ಯೋಜನೆ”ಯಡಿ ಕಂದಾಯ ಇಲಾಖೆಯಿಂದ ಸಾರ್ವಜನಿಕರಿಗೆ ನೀಡುತ್ತಿರುವ ಮೂಲ ದಾಖಲೆಗಳಾದ ಪಹಣಿ, ಅಟ್ಲಾಸ್ ಹಾಗೂ ಜಾತಿ ಮತ್ತು ಆದಾಯ ಪ್ರಮಾಣ ಪತ್ರಗಳನ್ನು ಕಂದಾಯ ಇಲಾಖೆಯ ಅಧಿಕಾರಿಗಳು ತಮ್ಮ ಮನೆಗಳಿಗೆ ಬಂದು ಉಚಿತವಾಗಿ ವಿತರಿಸುವಂತಹ ಮಹತ್ವ ಪೂರ್ಣ ಯೋಜನೆಗೆ ಇಂದು ಚಿಕ್ಕಬಳ್ಳಾಪುರ ಜಿಲ್ಲೆಯ ಗುಂಗೀರ್ಲಹಳ್ಳಿ ಕುಗ್ರಾಮದಲ್ಲಿ ಮಾನ್ಯ ಮುಖ್ಯಮಂತ್ರಿಗಳು ಚಾಲನೆ ನೀಡಿರುವುದು ತುಂಬಾ ಸಂತೋಷವಾಗಿದೆ ಎಂದರು.
ನಿವೇಶನ ರಹಿತರಿಗಾಗಿ 1217.28 ಎಕರೆ ಮಂಜೂರು
ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಗ್ರಾಮೀಣ ಮತ್ತು ನಗರ ಪ್ರದೇಶವೊಳಗೊಳ್ಳಂತೆ 1217.28 ಎಕರೆ ವಿಸ್ತೀರ್ಣದ ಸರ್ಕಾರಿ ಜಮೀನನ್ನು ನಿವೇಶನ ರಹಿತರಿಗಾಗಿ ಮಂಜೂರು ಮಾಡಲಾಗಿದ್ದು ಈ ಪೈಕಿ 794 ಎಕರೆಯನ್ನು ಸಂಬಂಧಪಟ್ಟ ಇಲಾಖೆಗಳಿಗೆ ಹಸ್ತಾಂತರಿಸಲಾಗಿದ್ದು, ಉಳಿದ 423.28 ಎಕರೆ ಜಮೀನನ್ನು ಸನ್ಮಾನ್ಯ ಮುಖ್ಯಮಂತ್ರಿಗಳು ಇಂದು ಚಿಕ್ಕಬಳ್ಳಾಪುರ ಜಿಲ್ಲಾಪಂಚಾಯಿತಿಯ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳಿಗೆ ಹಸ್ತಾಂತರಿಸಿರುವುದು ಸಂತಸ ತಂದಿದೆ ಎಂದರು.
1217.28 ಎಕರೆ ಪೈಕಿ ಚಿಕ್ಕಬಳ್ಳಾಪುರ ವಿಧಾನಸಭಾ ಕ್ಷೇತ್ರದಲ್ಲಿ ಗುರ್ತಿಸಿರುವ ಎಲ್ಲಾ ನಿವೇಶನ ರಹಿತರಿಗೆ ನಿವೇಶನಗಳನ್ನು ಹಂಚಿಕೆ ಮಾಡುವ ಸಲುವಾಗಿ 506-೦೦ ಎಕರೆ ಜಮೀನನ್ನು ಮಂಜೂರು ಮಾಡಲಾಗಿದ್ದು, ಸದರಿ ಮಂಜೂರು ಮಾಡಿರುವ ಪ್ರದೇಶದಲ್ಲಿ ಸುಮಾರು 22, 770 ನಿವೇಶನ ರಹಿತರಿಗೆ ನಿವೇಶನಗಳನ್ನು ಹಂಚಿಕೆ ಮಾಡಬಹುದಾಗಿರುತ್ತದೆ. ಸದರಿ ವಿಧಾನಸಭಾ ಕ್ಷೇತ್ರದಲ್ಲಿ ಬೇಡಿಕೆಗೆ ಅನುಗುಣವಾಗಿ ಅವಶ್ಯಕವಿದ್ದ ಸರ್ಕಾರಿ ಜಮೀನನ್ನು ಸಂಪೂರ್ಣ ಮಂಜೂರು ಮಾಡಲಾಗಿರುತ್ತದೆ. ಸದರಿ ಜಮೀನಿನ ನಿವೇಶನಗಳ ಹಕ್ಕುಪತ್ರಗಳನ್ನು ಮುಂದಿನ 3 ರಿಂದ 4 ತಿಂಗಳ ಒಳಗಾಗಿ ವಿತರಿಸಲು ಕ್ರಮ ವಹಿಸಲಾಗುವುದು ಎಂದರು. ಈ ರೀತಿ ನಿವೇಶನ ರಹಿತರಿಗೆಲ್ಲಾ ನಿವೇಶನ ಹಂಚಿಕೆ ಮಾಡಲು ಇಷ್ಟು ದೊಡ್ಡ ಪ್ರಮಾಣದಲ್ಲಿ ಜಮೀನನ್ನು ಮಂಜೂರು ಮಾಡಿರುವುದು ರಾಜ್ಯದಲ್ಲಿಯೇ ಚಿಕ್ಕಬಳ್ಳಾಪುರ ಜಿಲ್ಲೆ ಮುಂಚೂಣಿಯಲ್ಲಿದೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ವಿಧಾನ ಪರಿಷತ್ ಸದಸ್ಯರಾದ ವೈ.ಎ. ನಾರಾಯಣಸ್ವಾಮಿ, ಕಂದಾಯ ಇಲಾಖೆಯ ಪ್ರಧಾನ ಕಾರ್ಯದರ್ಶಿ ತುಷಾರ ಗಿರಿನಾಥ್, ಹಿರಿಯ ಭೂದಾಖಲೆಗಳ ಇಲಾಖೆಯ ಆಯುಕ್ತ ಮುನೀಶ್ ಮೌದ್ಗಿಲ್, ಕಂದಾಯ ಇಲಾಖೆಯ ಪ್ರಾದೇಶಿಕ ಆಯುಕ್ತ ನವೀನರಾಜ್ ಸಿಂಗ್, ಕೇಂದ್ರ ವಲಯದ ಐಜಿಪಿ ಚಂದ್ರಶೇಖರ್, ಜಿಲ್ಲಾಧಿಕಾರಿ ಆರ್.ಲತಾ, ಪೊಲೀಸ್ ವರಿಷ್ಠಾಧಿಕಾರಿ ಜಿ.ಕೆ.ಮಿಥುನ್ ಕುಮಾರ್, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಪಿ.ಶಿವಶಂಕರ್, ಕರ್ನಾಟಕ ರಾಜ್ಯ ಮಾವು ಮತ್ತು ಮಾರುಕಟ್ಟೆ ಅಭಿವೃದ್ಧಿ ನಿಗಮದ ಅಧ್ಯಕ್ಷರಾದ ಮಾನ್ಯ ಶ್ರೀ ಕೆ.ವಿ.ನಾಗರಾಜು, ಚಿಕ್ಕಬಳ್ಳಾಪುರ ನಗರಸಭೆ ಅಧ್ಯಕ್ಷ ಆನಂದರೆಡ್ಡಿ ಬಾಬು, ಪೋಶೆಟ್ಟಹಳ್ಳಿ ಗ್ರಾ.ಪಂ ನ ಅಧ್ಯಕ್ಷರಾದ ಶಾಂತಮ್ಮ, ಉಪಾಧ್ಯಕ್ಷರಾದ ನಾಗರತ್ನ, ಜಿಲ್ಲಾ ಸರ್ಕಾರಿ ನೌಕರರ ಸಂಘದ ಅಧ್ಯಕ್ಷರಾದ ಜಿ.ಹರೀಶ್, ಸ್ಥಳೀಯ ಜನಪ್ರತಿನಿಧಿಗಳು ಹಾಗೂ ರೈತರು ಮತ್ತು ಗುಂಗೀರ್ಲಹಳ್ಳಿಯ ಗ್ರಾಮಸ್ಥರು ಉಪಸ್ಥಿತರಿದ್ದರು.