ಹಿಟ್ಲರ್ ರೀತಿ ವರ್ತಿಸುತ್ತಿದ್ದಾರೆ ಸಿಎಂ ಯೋಗಿ ಆದಿತ್ಯನಾಥ್
ದಾವಣಗೆರೆ : ಹಿಟ್ಲರ್ ಹೇಗೆ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಸರ್ವಾಧಿಕಾರ ನೀತಿ ಅನುಸರಿಸುತ್ತಿದ್ದನೋ ಹಾಗೆ ಯುಪಿ ಸಿಎಂ ಯೋಗಿ ಆದಿತ್ಯನಾಥ್ ವರ್ತನೆ ಇದೆ. ಇಂತಹ ವರ್ತನೆಗಳಿಂದ ಭಾರತ ದೇಶದ ಪ್ರಜಾಪ್ರಭುತ್ವಕ್ಕೆ ಗಂಡಾಂತರ ಬರುವ ಸಾಧ್ಯತೆಗಳಿವೆ. ದೇಶದ ಜನ ಈಗಲೇ ಎಚ್ಚೆತ್ತುಕೊಳ್ಳಬೇಕಿದೆ ಎಂದು ಧಾರವಾಡ ಸಮಾಜ ಪರಿವರ್ತನಾ ಸಂಸ್ಥೆಯ ಸಂಸ್ಥಾಪಕ ಎಸ್.ಆರ್ ಹಿರೇಮಠ ಹೇಳಿದ್ದಾರೆ. ನಗರದಲ್ಲಿ ಮಾತನಾಡಿದ ಅವರು, ಗೋಹತ್ಯೆ ನಿಷೇಧ ಕಾಯ್ದೆ ಹೆಸರಿನಲ್ಲಿ ಜನರಿಗೆ ಹಿಂಸೆ ಕೊಟ್ಟದ್ದು ಯೋಗಿ ಆದಿತ್ಯನಾಥ್ ಅವರು ಎಂದು ದೇಶದ ಜನರಿಗೆ ಗೊತ್ತಿದೆ. ಉತ್ತರಪ್ರದೇಶದಲ್ಲಿ ಮತ್ತೆ ಬಿಜೆಪಿ ಪಕ್ಷ ಬಹುಮತ ಪಡೆದ ಬೆನ್ನಲ್ಲೇ ಯೋಗಿ ಆದಿತ್ಯನಾಥ್ ಅವರಿಂದ ಸಾಕಷ್ಟು ತೊಂದರೆ ಆಗಲಿದೆ. ಜತೆಗೆ ರೈತರ ಹತ್ಯೆಗೆ ಕಾರಣರಾದ ಸಚಿವರ ಪುತ್ರನ ರಕ್ಷಣೆಗೆ ನಿಂತದ್ದು, ಇದೇ ಯೋಗಿ ಅದಿತ್ಯನಾಥ್ ಎಂದು ವಾಗ್ದಾಳಿ ನಡೆಸಿದ್ದಾರೆ. ಪ್ರತಿಪಕ್ಷಗಳು ತಾವು ಮಾಡಬೇಕಾದ ಕಾರ್ಯದ ಬಗ್ಗೆ ಸ್ಪಷ್ಟವಾಗಿ ಚಿಂತನೆ ಮಾಡಬೇಕಿದೆ. ಪ್ರತಿಪಕ್ಷಗಳ ಚಿಂತನೆಗಳು ಸ್ಪಷ್ಟವಾಗಿರದೇ ಇರುವುದರಿಂದ ಮತ್ತೆ ಯುಪಿಯಲ್ಲಿ ಯೋಗಿಗೆ ಗೆಲುವು ಸಿಕ್ಕಿದೆ ಎಂದು ಕಿಡಿಕಾರಿದರು.