ಎಐಟಿಯುಸಿ ರಾಷ್ಟ್ರೀಯ ಮಂಡಳಿಗೆ ಕಾಂ. ಹೆಚ್.ಜಿ. ಉಮೇಶ್ ಅವರಗೆರೆ ಆಯ್ಕೆ

ದಾವಣಗೆರೆ: ದೇಶದ ಸ್ವಾತಂತ್ರ್ಯ ಪೂರ್ವದಲ್ಲೇ 1920 ರಲ್ಲಿ ಸಂಘಟಿತಗೊಂಡ ದೇಶದ ಪ್ರಪ್ರಥಮ ಕಾರ್ಮಿಕ ಸಂಘಟನೆಯಾದ ಅಖಿಲ ಭಾರತ ಟ್ರೇಡ್ ಯೂನಿಯನ್ ಕಾಂಗ್ರೆಸ್ (ಎಐಟಿಯುಸಿ)ನ ರಾಷ್ಟ್ರೀಯ ಮಂಡಳಿ ಸದಸ್ಯರಾಗಿ ಎಐಟಿಯುಸಿ ಕರ್ನಾಟಕ ರಾಜ್ಯ ಉಪಾಧ್ಯಕ್ಷ ಹಾಗೂ ದಾವಣಗೆರೆ ಜಿಲ್ಲಾ ಪ್ರಧಾನ ಕಾರ್ಯದರ್ಶಿಯಾಗಿರುವ ಕಾಂ.ಹೆಚ್.ಜಿ.ಉಮೇಶ್ ಅವರಗೆರೆ ಆಯ್ಕೆಯಾಗಿದ್ದಾರೆ. ಡಿಸೆಂಬರ್ 16 ರಿಂದ 20 ರವರೆಗೆ ಕೇರಳದ ಅಳಪುಝಾದಲ್ಲಿ ಜರಗಿದ ಎಐಟಿಯುಸಿಯ 42ನೇ ರಾಷ್ಟ್ರೀಯ ಸಮ್ಮೇಳನದಲ್ಲಿ ಹೆಚ್.ಜಿ.ಉಮೇಶ್ ಅವರಗೆರೆ ಅವರನ್ನು ರಾಷ್ಟ್ರೀಯ ಮಂಡಳಿ ಸದಸ್ಯರನ್ನಾಗಿ ಆಯ್ಕೆ ಮಾಡಲಾಯಿತು ಎಂದು ಎಐಟಿಯುಸಿ ದಾವಣಗೆರೆ ಜಿಲ್ಲಾ ಸಮಿತಿ ಅಧ್ಯಕ್ಷ ಕೆ.ರಾಘವೇಂದ್ರ ನಾಯರಿ ತಿಳಿಸಿದ್ದಾರೆ.
ಎಐಟಿಯುಸಿ ಸಂಘಟನೆಯು 102 ವರ್ಷಗಳ ಸುದೀರ್ಘ ಹಿನ್ನಲೆಯುಳ್ಳ ದೇಶದ ಪ್ರಪ್ರಥಮ ಕಾರ್ಮಿಕ ಸಂಘಟನೆಯಾಗಿದ್ದು ದೇಶದ ಸ್ವಾತಂತ್ರ್ಯ ಹೋರಾಟದಲ್ಲೂ ಪ್ರಮುಖ ಪಾತ್ರವಹಿಸಿದ್ದ ಸಂಘಟನೆಯಾಗಿದೆ. ಈ ಸಂಘಟನೆಯ ಅಧ್ಯಕ್ಷತೆಯನ್ನು ಲಾಲಾ ಲಜಪತ ರಾಯ್, ಸುಭಾಷ್‌ಚಂದ್ರ ಭೋಸ್, ಜವಾಹರಲಾಲ್ ನೆಹರು, ಎಂ.ಎಸ್.ಕೃಷ್ಣನ್ ಮುಂತಾದ ಅನೇಕ ಪ್ರಭಾವಶಾಲಿ ನಾಯಕರು ವಹಿಸಿಕೊಂಡು ಮುನ್ನಡೆಸಿದ್ದರು. ಕೇರಳದ ಅಳಪುಝಾದಲ್ಲಿ ನಡೆದ ರಾಷ್ಟ್ರೀಯ ಸಮ್ಮೇಳನದಲ್ಲಿ ಕರ್ನಾಟಕ ರಾಜ್ಯದ 54 ಜನ ಪ್ರತಿನಿಧಿಗಳು ಸೇರಿದಂತೆ ದೇಶದ ಮೂಲೆ ಮೂಲೆಗಳಿಂದ ಬಂದ 1400 ಪ್ರತಿನಿಧಿಗಳು ಭಾಗವಹಿಸಿದ್ದರು. ವಿಶ್ವದ ವಿವಿಧ ದೇಶಗಳಿಂದ ಸುಮಾರು 26 ಪ್ರತಿನಿಧಿಗಳು, ಇಎಲ್‌ಓ, ಡಬ್ಲ್ಯೂಎಫ್‌ಟಿಯು ಪ್ರತಿನಿಧಿಗಳು ಭಾಗವಹಿಸಿದರು ಹಾಗೂ ಸಮ್ಮೇಳನದಲ್ಲಿ ಕಾರ್ಮಿಕ ಕ್ಷೇತ್ರಕ್ಕೆ, ದೇಶದ ಹಿತಾಸಕ್ತಿಗೆ ಸಂಬಂಧಿಸಿದ ಪ್ರಮುಖ 16 ನಿರ್ಣಯಗಳನ್ನು ಕೈಗೊಳ್ಳಲಾಯಿತು ಎಂದು ಎಐಟಿಯುಸಿ ದಾವಣಗೆರೆ ಜಿಲ್ಲಾ ಸಮಿತಿ ಪ್ರಕಟಣೆಯಲ್ಲಿ ತಿಳಿಸಿದೆ.
ಧನ್ಯವಾದಗಳೊಂದಿಗೆ
ವರದಿ:
ಕೆ.ರಾಘವೇಂದ್ರ ನಾಯರಿ
ಅಧ್ಯಕ್ಷರು
ಎಐಟಿಯುಸಿ ದಾವಣಗೆರೆ ಜಿಲ್ಲಾ ಸಮಿತಿ.