ಕಾಂಗ್ರೆಸ್ ಸದಸ್ಯ ವಿನಾಯಕ್ ಪೈಲ್ವಾನ್ ಬಿಜೆಪಿ ತೆಕ್ಕೆಗೆ.! ಪಾಲಿಕೆ ಮೇಯರ್ ಚುನಾವಣೆ ಹೈಡ್ರಾಮ.!

ಕಾಂಗ್ರೆಸ್ ಸದಸ್ಯ ವಿನಾಯಕ್ ಪೈಲ್ವಾನ್ ಬಿಜೆಪಿ ತೆಕ್ಕೆಗೆ.! ಪಾಲಿಕೆ ಮೇಯರ್ ಚುನಾವಣೆ ಹೈಡ್ರಾಮ.!
ದಾವಣಗೆರೆ: ಮಹಾನಗರ ಪಾಲಿಕೆಯ ಮೇಯರ್ ಹಾಗೂ ಉಪ ಮೇಯರ್ ಚುನಾವಣೆ ಹಿನ್ನೆಲೆಯಲ್ಲಿ ಶನಿವಾರ ಪಾಲಿಕೆ ಆವರಣದಲ್ಲಿ ಹೈಡ್ರಾಮ ನಡೆಯಿತು.
ಎಸ್.ಟಿ.ಗೆ ಮೀಸಲಾದ ಮೇಯರ್ ಸ್ಥಾನಕ್ಕೆ ಬಿಜೆಪಿಯಲ್ಲಿ ಯಾವ ಅಭ್ಯರ್ಥಿಯೂ ಇರಲಿಲ್ಲ. ಕಳೆದ ಎರಡು ಬಾರಿ ಚುನಾವಣೆಯಲ್ಲೂ ಕಾಂಗ್ರೆಸ್ ಸದಸ್ಯರಿಗೆ ಗಾಳ ಹಾಕಿ, ಭಾರೀ ಪೆಟ್ಟು ನೀಡಿ ಅಧಿಕಾರ ಅನುಭವಿಸಿದ್ದ ಬಿಜೆಪಿ ಈ ಬಾರಿ ಕಾಂಗ್ರೆಸ್ ಸದಸ್ಯ ವಿನಾಯಕ ಪೈಲ್ವಾನ್ ಗೆ ಗಾಳ ಬೀಸಿದೆ.
ಕಾಂಗ್ರೆಸ್ ವರಿಷ್ಠರು ಸವಿತಾ ಹುಲ್ಲಮನಿ ಅವರನ್ನು ಮೇಯರ್ ಮಾಡುವುದಾಗಿ ಭರವಸೆ ನೀಡಿದ್ದರ ಬೆನ್ನಹಿಂದೆಯೇ ವಿನಾಯಕ ಪೈಲ್ವಾನ್ ಅಸಮಾಧಾನಗೊಂಡು ಬಿಜೆಪಿ ಕಡೆ ವಾಲಿದ್ದಾರೆ.
ಶನಿವಾರ ಬೆಳಿಗ್ಗೆ 12 ಗಂಟೆಗೆ ವಿನಾಯಕ ಪೈಲ್ವಾನ್ ಅವರನ್ನು ನಾಮಪತ್ರ ಸಲ್ಲಿಸಲು ಬಿಜೆಪಿ ಸದಸ್ಯರು ಭದ್ರತೆ ನಡುವೆ ಕರೆ ತಂದಿದ್ದರು. ಬಿಜೆಪಿ ಸದಸ್ಯರಾದ ಎಸ್.ಟಿ. ವೀರೇಶ್, ಕೆ.ಪ್ರಸನ್ನಕುಮಾರ್, ಸೋಗಿ ಶಾಂತಕುಮಾರ್ ವಿನಾಯಕ ಪೈಲ್ವಾನ್ ಅವರನ್ನು ಸುತ್ತುವರೆದು ಭದ್ರತೆ ನೀಡಿ ನಾಮಪತ್ರ ಸಲ್ಲಿಸುವಂತೆ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ.
ವಿನಾಯಕ ಪೈಲ್ವಾನ್ ಬಿಜೆಪಿ ಕಡೆ ವಾಲಿದ ಸುದ್ದಿ ನಿನ್ನೆಯೇ ಅರಿತ ಕಾಂಗ್ರೆಸ್ ಸದಸ್ಯರ ಮುಖಗಳು ಕಳೆಗುಂದಿದ್ದವು. ಪೈಲ್ವಾನ್ ನಾಮಪತ್ರ ಸಲ್ಲಿಸಲು ಆಗಮಿಸುತ್ತಿದ್ದ ಅಸಮಾಧಾನಗೊಂಡ ಕೈ ಪಡೆ ಸದಸ್ಯರು ಬಿಜೆಪಿಯ ನಡೆಗೆ ಧಿಕ್ಕಾರ ಕೂಗಿದರು. ಪಾಲಿಕೆ ವಿಪಕ್ಷ ಗಡಿಗುಡಾಳ್ ಮಂಜುನಾಥ್, ಎ.ನಾಗರಾಜ್, ಚಮನ್ ಸಾಬ್ ಮುಂತಾದವರು ವಿನಾಯಕ ಪೈಲ್ವಾನ್ ಅವರನ್ನು ಮನವೊಲಿಸಲು ಪ್ರಯತ್ನಿಸಿದರು. ಪಕ್ಷಕ್ಕೆ ದ್ರೋಹ ಬಗೆಯಬೇಡ ಎಂದು ಅಂಗಲಾಚಿದರು. ಕೊನೆಗೆ ವಿಪ್ ಗೆ ಸಹಿ ಮಾಡುವಂತೆ ಹೇಳಿದರು. ಇದಾವುದಕ್ಕೂ ಬಗ್ಗದ ವಿನಾಯಕ ಪೈಲ್ವಾನ್ ನಾಮಪತ್ರ ಸಲ್ಲಿಸಿ ಕಾರಿನಲ್ಲಿ ತೆರಳಿಯೇ ಬಿಟ್ಟರು.
ಒಟ್ಟಿನಲ್ಲಿ ಮೇಯರ್ ಸ್ಥಾನಕ್ಕೆ ನಾಮಪತ್ರ ಸಲ್ಲಿಸಿರುವ ವಿನಾಯಕ ಪೈಲ್ವಾನ್ ಬಿಜೆಪಿ ಸದಸ್ಯರ ಬೆಂಬಲದಿಂದಾಗಿ ಪಾಲಿಕೆಯ ಮೇಯರ್ ಆಗುವುದು ಖಿಚಿತವಾಗಿದೆ. ಬಿಜೆಪಿಯಿಂದ ಉಪಮೇಯರ್ ಸ್ಥಾನಕ್ಕೆ ಯಶೋಧ ನಾಮಪತ್ರ ಸಲ್ಲಿಸಿದ್ದಾರೆ.
ಕಾಂಗ್ರೆಸ್ ನಿಂದ ಮೇಯರ್ ಸ್ಥಾನಕ್ಕೆ ಸವಿತಾ ಗಣೇಶ್ ಹುಲ್ಮನಿ, ಉಪ ಮೇಯರ್ ಸ್ಥಾನಕ್ಕೆ ಶಿವಲೀಲಾ ಕೊಟ್ರಯ್ಯ ನಾಮಪತ್ರ ಸಲ್ಲಿಸಿದ್ದಾರೆ.