ಎಲ್ಲಾ ಕ್ಷೇತ್ರಗಳಲ್ಲಿ ಹರಿದಾಡುವ ಸಹಕಾರ ರಂಗ:ಡಾ.ಬಿ.ಡಿ.ಭೂಕಾಂತ್

ಡಾ.ಬಿ.ಡಿ.ಭೂಕಾಂತ್
ದಾವಣಗೆರೆ: ನಾವು ಎಷ್ಟೇ ಎತ್ತರಕ್ಕೆ ಬಳೆದಿದ್ದರೂ ಸಹ ತಿಳಿದುಕೊಳ್ಳುವುದು ಬಹಳಷ್ಟಿದೆ. ಅಂತೆಯೇ ಸಹಕಾರ ಕ್ಷೇತ್ರದ ಆಳವನ್ನು ಒಳಹೊಕ್ಕು ನೋಡಿದಾಗ ಮಾತ್ರ ಎಲ್ಲವನ್ನೂ ತಿಳಿಯಲು ಸಾಧ್ಯವಾಗುತ್ತದೆ. ಯಾವುದೇ ಕ್ಷೇತ್ರವಾಗಲೀ ಇಂದಿನ ದಿನಮಾನಗಳಲ್ಲಿ ತರಬೇತಿ ಅತ್ಯಗತ್ಯವಾಗಿ ಬೇಕಾಗಿದೆ ಎಂದು ಕರ್ನಾಟಕ ರಾಜ್ಯ ಸಹಕಾರ ತೋಟಗಾರಿಕೆ ಮಹಾಮಂಡಳದ ಅಧ್ಯಕ್ಷ ಡಾ.ಬಿ.ಡಿ.ಭೂಕಾಂತ್ ಅಭಿಪ್ರಾಯಪಟ್ಟರು.
ನಗರದ ಪಿ.ಬಿ.ರಸ್ತೆಯಲ್ಲಿನ ಹೋಟೆಲ್ ಸಾಯಿ ಇಂಟರ್‌ನ್ಯಾಷನಲ್‌ನಲ್ಲಿ ಸಹಕಾರ ಇಲಾಖೆ, ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಳ ನಿಯಮಿತ, ಬೆಂಗಳೂರು, ದಾವಣಗೆರೆ ಜಿಲ್ಲಾ ಸಹಕಾರ ಒಕ್ಕೂಟ ನಿಯಮಿತ, ದಾವಣಗೆರೆ ಜಿಲ್ಲಾ ಪಟ್ಟಣ ಸಹಕಾರ ಬ್ಯಾಂಕುಗಳ ಒಕ್ಕೂಟ, ದಾವಣಗೆರೆ ಜಿಲ್ಲೆ ಇವರ ಆಶ್ರಯದಲ್ಲಿ ಪಟ್ಟಣ ಸಹಕಾರು ಬ್ಯಾಂಕುಗಳ ಸರ್ವತೋಮುಖ ಅಭಿವೃದ್ದಿಗಾಗಿ ಪ್ರಧಾನ ವ್ಯವಸ್ಥಾಪಕರು, ವ್ಯವಸ್ಥಾಪಕರು ಹಾಗೂ ಅಧಿಕಾರಿ ವರ್ಗದವರಿಗೆ ಆಯೋಜಿಸಲಾಗಿದ್ದ ಒಂದು ದಿನದ ಹೈಟೆಕ್ ರಾಜ್ಯಮಟ್ಟದ ವಿಶೇಷ ಕಾರ್ಯದಕ್ಷತೆ ತರಬೇತಿ ಶಿಬಿರ ಉದ್ಘಾಟಿಸಿ ಮಾತನಾಡಿದರು.
ಸಹಕಾರ ರಂಗ ಎನ್ನುವುದು ಎಲ್ಲಾ ಕ್ಷೇತ್ರಗಳಲ್ಲಿ ಹರಿದಾಡುವ ರಂಗವಾಗಿದೆ. 120 ವರ್ಷಗಳ ಹಾದಿ ಸಹಕಾರ ರಂಗಕ್ಕೆ ಇದೆ. ಸ್ವಾತಂತ್ರ್ಯ ಪೂರ್ವದಿಂದಲೂ ಸಹಕಾರ ರಂಗ ತನ್ನ ಕೆಲಸ ಮಾಡಿದೆ. ಆಗಿನ ಕಾಲದಲ್ಲೇ ಸಂವಿಧಾನ ತಿದ್ದುಪಡಿ ಮಾಡಿದ ನಂತರ ಸಹಕಾರ ಕ್ಷೇತ್ರದಲ್ಲೂ ಹಲವಾರು ತಿದ್ದುಪಡಿ ಮಾಡಲಾಗಿದೆ. ಆಡಳಿತ ಯಂತ್ರಕ್ಕೆ ಸರಿಯಾದ ಮಾಹಿತಿ, ತಂತ್ರಜ್ಞಾನ ಕೊರತೆ ಇರುವ ಕಾರಣ ಇಂತಹ ತರಬೇತಿ ನೀಡಲಾಗುತ್ತಿದೆ. ಕರ್ನಾಟದಲ್ಲಿ 50ಸಾವಿರ ಸಹಕಾರ ಸಂಘಗಳು ಇದ್ದು, ಎಲ್ಲವೂ ಉತ್ತಮವಾಗಿ ಕೆಲಸ ಮಾಡುತ್ತಿವೆ. ಎಲ್ಲಾ ವಹಿವಾಟುಗಳನ್ನು ಸಹ ಸಹಕಾರ ಸಂಘದ ಅಡಿಯಲ್ಲೇ ನಡೆಸಲಾಗುತ್ತಿದೆ ಎಂದು ಹೇಳಿದರು.
ಮುಖ್ಯಅತಿಥಿಯಾಗಿದ್ದ ಕರ್ನಾಟಕ ರಾಜ್ಯ ಸಹಕಾರ ಮಾರಾಟ ಮಹಾಮಂಡಳ ನಿಯಮಿತದ ನಿರ್ದೇಶಕ ಜೆ.ಆರ್.ಷಣ್ಮುಖಪ್ಪ ಮಾತನಾಡಿ, ಯಾವುದೇ ರಂಗವಾಗಲೀ ತರಬೇತಿ ಅಗತ್ಯ. ಅನುಭವದ ಜತೆ ತಿಳುವಳಿಕೆ ಕೂಡ ಅಗತ್ಯ. ಸಹಕಾರ ಮಹಾಮಂಡಲ ಬಲಿಷ್ಠಗೊಳ್ಳಲು ಪಟ್ಟಣ ಸಹಕಾರ ಬ್ಯಾಂಕುಗಳ ಕೊಡುಗೆ ಮಹತ್ತರ. ಯಾವುದೋ ಒಂದು ಸಹಕಾರ ಸಂಘ ನಷ್ಟ ಹೊಂದಿದರೆ ಎಲ್ಲಾ ಬ್ಯಾಂಕುಗಳು ಅದೇ ರೀತಿ ಎನ್ನುವ ಮನೋಭಾವ ಸಹಕಾರ ಇಲಾಖೆಯ ಅಧಿಕಾರಿಗಳಲ್ಲಿ ಇದೆ. ಆದಕಾರಣ ಅಲ್ಲಿ ಕೆಲಸ ಮಾಡುವವರು ಉತ್ತಮ ರೀತಿಯಲ್ಲಿ ಸೇವ ಸಲ್ಲಿಸುವ ಮೂಲಕ ಬದಲಾದ ಕಾನೂನು, ನಿಯಮಗಳ ಆಧಾರದಲ್ಲಿ ಸಹಕಾರ ಸಂಘಗಳನ್ನು ನಡೆಸಬೇಕೆಂದರು.
ಅಧ್ಯಕ್ಷತೆ ವಹಿಸಿದ್ದ ದಾವಣಗೆರೆ ಜಿಲ್ಲಾ ಸಹಕಾರ ಒಕ್ಕೂಟ ನಿಯಮಿತದ ಅಧ್ಯಕ್ಷ ಸಿರಿಗೆರೆ ರಾಜಣ್ಣ ಮಾತನಾಡಿ, ಕಾನೂನು ಮತ್ತು ಸಹಕಾರ ಕ್ಷೇತ್ರದ ತಿದ್ದುಪಡಿಗಳನ್ನು ಸರಿಯಾದ ರೀತಿಯಲ್ಲಿ ತಿಳಿದುಕೊಂಡು ಅವುಗಳನ್ನು ಅಳವಡಿಸಿಕೊಳ್ಳುವ ಮೂಲಕ ಯಶಸ್ವಿಯಾಗಿ ಕಾರ್ಯ ನಿರ್ವಹಿಸಬೇಕೆಂದು ಕರೆ ನೀಡಿದರು.
ವಿಶೇಷ ಆಹ್ವಾನಿತರಾಗಿದ್ದ ಸಹಕಾರ ಸಂಘಗಳ ಲೆಕ್ಕ ಪರಿಶೋಧನಾ ಉಪ ನಿರ್ದೇಶಕ ಕೆ.ಮಹೇಶ್ವರಪ್ಪ ಸಹಕಾರ ಕಾನೂನು, ದಾವಣಗೆರೆ ಜಿಲ್ಲೆಯ ಪಟ್ಟಣ ಸಹಕಾರ ಬ್ಯಾಂಕುಗಳ ಕುರಿತು ಮಾತನಾಡಿದರು.
ವೇದಿಕೆಯಲ್ಲಿ ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಳದ ನಿರ್ದೇಶಕ ಆರ್.ರಾಮರೆಡ್ಡಿ, ದಾವಣಗೆರೆ ಜಿಲ್ಲಾ ಸಹಕಾರ ಒಕ್ಕೂಟ ನಿಯಮಿತದ ಉಪಾಧ್ಯಕ್ಷ ಬೇತೂರು ಟಿ.ರಾಜಣ್ಣ, ನಿರ್ದೇಶಕರಾದ ಹೆಚ್.ಬಸವರಾಜಪ್ಪ, ಡಿ.ಎಂ. ಮುರಿಗೇಂದ್ರಯ್ಯ, ಬಿ.ಶೇಖರಪ್ಪ, ಕೆ.ಜಿ.ಸುರೇಶ್ ಇತರರು ಇದ್ದರು.
ಆರಂಭದಲ್ಲಿ ಸಂಗೀತ ರಾಘವೇಂದ್ರ ಪ್ರಾರ್ಥನೆ ಮಾಡಿದರೆ, ದಾಜಿಸಒ ನಿಯಮಿತದ ಪ್ರಭಾರ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಕೆ.ಹೆಚ್.ಸಂತೋಷ್‌ಕುಮಾರ್, ಕಾರ್ಯಕ್ರಮ ನಿರೂಪಿಸಿ, ಸ್ವಾಗತ ಮಾಡಿದರೆ, ವ್ಯವಸ್ಥಾಪಕ ಕೆ.ಎಂ.ಜಗದೀಶ್ ಕೊನೆಯಲ್ಲಿ ವಂದನಾರ್ಪಣೆ ಮಾಡಿದರು.