ಜಗಳೂರಿನಲ್ಲಿ ಕೊರೊನಾ ಪ್ರಕರಣ ಪತ್ತೆ, ಒಮಿಕ್ರಾನ್ ರೂಪಾಂತರ ತಳಿ ಅಲ್ಲ : ದೃಢ ಪಡಿಸಿದ ಆರೋಗ್ಯ ಇಲಾಖೆ

ದಾವಣಗೆರೆ: ನೆರೆಯ ಚೀನಾ , ಪೂರ್ವ ಏಷ್ಯಾದ ವಿವಿಧ ದೇಶಗಳಲ್ಲೂ ಹೆಚ್ಚಾಗಿರುವ ಅತಂಕದ ಮಧ್ಯೆ ದಾವಣಗೆರೆ ಜಿಲ್ಲೆಯ ಜಗಳೂರು ಪಟ್ಟಣದ ವೃದ್ದರೊಬ್ಬರಿಗೆ ಕೊರೊನಾ ವೈರಸ್ ಇರುವುದು ಪತ್ತೆಯಾಗಿದೆ.
ಕೊರೊನಾ ವೈರೆಸ್‌ನ ಒಮಿಕ್ರಾನ್‌ನ ರೂಪಾಂತರಿ ತಳಿ ಬಿಎಫ್.೭ ಹರಡುವ ಭೀತಿಯ ಮಧ್ಯೆದಲ್ಲೇ ಜಗಳೂರಿನಲ್ಲಿ ಕೊರೊನಾ ಪ್ರಕರಣ ಪತ್ತೆಯಾಗಿದೆ. ಆದರೆ, ಅದು ಒಮಿಕ್ರಾನ್‌ನ ರೂಪಾಂತರಿ ತಳಿ ಬಿಎಫ್.೭ ಅಲ್ಲ ಎಂದು ಆರೋಗ್ಯ ಇಲಾಖೆ ದೃಢಪಡಿಸಿದೆ.
ಜಗಳೂರು ಪಟ್ಟಣದ ೭೪ ವರ್ಷದ ವಯೋವೃದ್ಧಿರಿಗೆ ಶೀತ, ಜ್ವರ,ಉಸಿರಾಟದ ತೊಂದರೆ ಕಾಣಿಸಿಕೊಂಡಿತ್ತು. ಗಂಟಲು ದ್ರವ ಮಾದರಿ ಪರೀಕ್ಷೆಗೆ ಒಳಪಡಿಸಿದಾಗ ಕೊರೊನಾ ದೃಢಪಟ್ಟಿದೆ. ಆತನಿಗೆ ಜಗಳೂರು ಸಾರ್ವಜನಿಕ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.
ವೃದ್ಧನ ಪತ್ನಿ ಡಿಸೆಂಬರ್ ೧೩ ರಿಂದ ೧೬ರ ವರೆಗೆ ತುಮಕೂರು ಜಿಲ್ಲೆಗೆ ಹೋಗಿ ಬಂದ ನಂತರದಲ್ಲಿ ವೃದ್ಧನಿಗೆ ಶೀತ, ಜ್ವರ, ಉಸಿರಾಟದ ಕಾಣಿಸಿಕೊಂಡಿದೆ. ಪತ್ನಿಯ ಟ್ರಾವೆಲ್ ಹಿಸ್ಟರಿ ಬಗ್ಗೆ ಹೆಚ್ಚಿನ ವಿವರ ಸಂಗ್ರಹಿಸಲಾಗುತ್ತಿದೆ. ಸೋಂಕಿತನ ಪ್ರಾಥಮಿಕ ಸಂಪರ್ಕದಲ್ಲಿದ್ದ ೭ ಹಾಗೂ ದ್ವಿತೀಯ ಸಂಪರ್ಕದಲ್ಲಿದ್ದ ಮೂವರ ಗಂಟಲು ದ್ರವ ಮಾದರಿ ಸಂಗ್ರಹಿಸಿ, ಪರೀಕ್ಷೆಗೆ ಕಳಿಸಲಾಗಿದೆ.
ಮಾರ್ಗಸೂಚಿ ಪ್ರಕಾರ ಸೋಂಕಿತರ ವರದಿಯಲ್ಲಿ ಸಿಟಿ ದರ ೨೫ಕ್ಕಿಂತಲೂ ಹೆಚ್ಚು (೨೭)ಇರುವುದರಿಂದ ಜಿನಾಮಿಕ್ ಪರೀಕ್ಷೆಗೆ ಕಳಿಸುವ ಅಗತ್ಯ ಇಲ್ಲದೆ ಇರುವುದರಿಂದ ಬಿಎಫ್.೭ ಅಲ್ಲದೆ ಸ್ಥಳೀಯವಾಗಿ ಸಾಮಾನ್ಯ ಕೋವಿಡ್‌ಗೆ ನೀಡುವ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಜಿಲ್ಲಾ ಆರೋಗ್ಯ ಇಲಾಖೆ ತಿಳಿಸಿದೆ.