ಮಾಯಕೊಂಡದಲ್ಲಿ ಕಾರ್ಪೊರೆಟರ್ ಶಿವಪ್ರಕಾಶ್ ಕಣಕ್ಕೆ: ಒಂದಾದ ಬಿಜೆಪಿಯ 11 ಬಂಡಾಯ ಅಭ್ಯರ್ಥಿಗಳು
ದಾವಣಗರೆ: ಮಾಯಕೊಂಡ ಕ್ಷೇತ್ರದಲ್ಲಿ ಭಾರತೀಯ ಜನತಾಪಕ್ಷದದಿಂದ ಬಂಡಾಯ ಅಭ್ಯರ್ಥಿಯಾಗಿ ಜಿಲ್ಲಾ ಯುವ ಮೋರ್ಚಾ ಅಧ್ಯಕ್ಷ ಆರ್.ಎಲ್. ಶಿವಪ್ರಕಾಶ್ ಕಣಕ್ಕಿಳಿಯಲಿದ್ದಾರೆ.
ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ರಾಜ್ಯ ಬಿಜೆಪಿ ಮಾಜಿ ಕಾರ್ಯದರ್ಶಿ ಹೆಚ್.ಕೆ. ಬಸವರಾಜ್, ಮಾಯಕೊಂಡ ಕ್ಷೇತ್ರದ ಎಲ್ಲಾ 11 ಬಂಡಾಯ ಅಭ್ಯರ್ಥಿಗಳೂ ಒಟ್ಟಾಗಿ ಶಿವಪ್ರಕಾಶ್ ಅವರನ್ನು ಕಣಕ್ಕಿಳಿಸಲಿದ್ದೇವೆ ಎಂದು ಹೇಳಿದರು.
ಶಿವಪ್ರಕಾಶ್ ಅವರನ್ನು ಎಲ್ಲರೂ ಒಟ್ಟಾಗಿ ಗೆಲ್ಲಿಸುತ್ತೇವೆ. ನಂತರ ಅವರು ಬಿಜೆಪಿಗೆ ಸೇರ್ಪಡೆಯಾಗಲಿದ್ದಾರೆ. ನಮ್ಮ ಬಂಡಾಯ ಕೇವಲ ಮಾಯಕೊಂಡ ಕ್ಷೇತ್ರಕ್ಕಾಗಿ ಮಾತ್ರ ಎಂದು ಸ್ಪಷ್ಟಪಡಿಸಿದರು.
ಹೊಸಬರಿಗೆ ಟಿಕೆಟ್ ನೀಡದ ಮುಖಂಡರ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ ಅವರು, ಆರಂಭದ ದಿನಗಳಿಂದಲೂ ನಾವು ಪ್ರಾಮಾಣಿಕವಾಗಿ ಪಕ್ಷ ಸಂಘಟನೆಯಲ್ಲಿ ತೊಡಗಿಸಿಕೊಂಡಿದ್ದೆವು. ಹೊಸ ಮುಖಗಳಿಗೆ ಆದ್ಯತೆ ನೀಡುವುದಾಗಿ ಪಕ್ಷದ ವರಿಷ್ಠರು ಭರವಸೆ ನೀಡಿದ್ದರು. ಆದರೆ ಇದೀಗ ಮಾಜಿ ಶಾಸಕ ಬಸವರಾಜ ನಾಯ್ಕ ಅವರಿಗೆ ಟಿಕೆಟ್ ಘೋಷಣೆ ಮಾಡಿರುವುದು ನಮಗೆ ಅಸಮಾಧಾನ ತಂದದೆ ಎಂದರು.
ಜಿಲ್ಲಾ ಉಪಾಧ್ಯಕ್ಷ ಜಿ.ಮಂಜನಾಯ್ಕ ಮಾತನಾಡಿ, ಪಕ್ಷದ ವರಿಷ್ಠರು ಯಾರನ್ನೂ ವಿಶ್ವಾಸಕ್ಕೆ ತೆಗೆದುಕೊಳ್ಳದೆ ಟಿಕೆಟ್ ಘೋಷಣೆ ಮಾಡಿದ್ದಾರೆ ಎಂದು ಆರೋಪಿಸಿದರು.
ಸುದ್ದಿಗೋಷ್ಠಿಯಲ್ಲಿ ಆರ್.ಎಲ್. ಶಿವಪ್ರಕಾಶ್, ಎನ್. ಹನುಮಂತನಾಯ್ಕ, ಬಿ.ರಮೇಶ್ ನಾಯ್ಕ, ಆಲೂರು ನಿಂಗರಾಜ್, ಶಶಿ, ಮೋಹನ್ ಕುಮಾರ್, ಗಂಗಾಧರ್ ಇದ್ದರು.