ಕೊವಿಡ್ 3 ನೇ ಅಲೆಯಲ್ಲಿ 18 ವರ್ಷದೊಳಗಿನ ಮಕ್ಕಳಿಗೆ ಸೋಂಕು ಹರಡುವ ಸಾಧ್ಯತೆಯಿದೆ.! ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಎಸ್.ಆರ್. ಉಮಾಶಂಕರ್

IMG-20210812-WA0013

 

ದಾವಣಗೆರೆ: ಕರೊನಾ 3ನೇ ಅಲೆ ಯಾವಾಗ ಬೇಕಾದರೂ ಬರಬಹುದಾಗಿದ್ದು, ಅದನ್ನು ಸಮರ್ಥವಾಗಿ ಎದುರಿಸಲು ಜಿಲ್ಲಾಡಳಿತ ಸನ್ನದ್ಧವಾಗಿರಬೇಕು ಎಂದು ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿಗಳಾದ ಎಸ್.ಆರ್. ಉಮಾಶಂಕರ್ ಹೇಳಿದರು.

ಗುರುವಾರ ಜಿಲ್ಲಾಡಳಿತ ಭವನದ ತುಂಗಾಭದ್ರಾ ಸಂಭಾಗಣದಲ್ಲಿ ಏರ್ಪಡಿಸಿದ್ದ ಕೋವಿಡ್ 3ನೇ ಅಲೆ ತಡೆಗಟ್ಟಲು ತೆಗೆದುಕೊಳ್ಳಲಾದ ಕ್ರಮಗಳು ಹಾಗೂ ಜಿಲ್ಲಾ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದ ಅವರು ಈಗಾಗಲೇ ಕರೊನಾದ ಮೊದಲ ಹಾಗೂ ಎರಡನೇ ಅಲೆಯನ್ನು ಯಶಸ್ವಿಯಾಗಿ ನಿಭಾಯಿಸಿದ ಅನುಭವ ನಮಗಿದೆ. ಹಾಗಾಗಿ ಹಿಂದಿನ ಅನುಭವವನ್ನು ಬಳಸಿಕೊಂಡು ಸಂಭಾವ್ಯ 3ನೇ ಅಲೆಯನ್ನು ಮತ್ತಷ್ಟು ಪರಿಣಾಮಕಾರಿಯಾಗಿ ಎದುರಿಸಲು ಎಲ್ಲರೂ ಕೈಜೋಡಿಸಿ ಎಂದರು.

3ನೇ ಅಲೆ ತಡೆಯಲು ಆರಂಭದಲ್ಲಿ ಹೆಚ್ಚು ಹೆಚ್ಚು ಪರೀಕ್ಷೆಗಳನ್ನು ಮಾಡಬೇಕು ಹಾಗೂ ಹೋಮ್ ಐಸೋಲೇಶ್‌ನನ್ನು ಕಡ್ಡಾಯವಾಗಿ ನಿಲ್ಲಿಸಬೇಕು. ಮೊದಲನೇ ಅಲೆ ನಿಯಂತ್ರಣಕ್ಕೆ ಬರಲು ಹೋಮ್ ಐಸೋಲೇಶನ್ ಇಲ್ಲದಿದ್ದುದೆ ಕಾರಣ. ಹಾಗೂ 2ನೇ ಅಲೆ ವ್ಯಾಪಕವಾಗಿ ಹೆಚ್ಚಾಗಲು ಆರಂಭದಲ್ಲಿ ಪಾಸಿಟಿವ್ ಬಂದವರನ್ನ ಹೋಂ ಐಸೋಲೇಶನ್‌ನಲ್ಲಿ ಇರುವುದನ್ನು ಬಿಟ್ಟು ಕೋವಿಡ್ ಕೇರ್ ಸೆಂಟರ್‌ನಲ್ಲಿ ಇರಿಸಿದ್ದರೆ ಇಷ್ಟೊಂದು ಪ್ರಮಾಣದಲ್ಲಿ ಸೋಂಕು ಹರಡುತ್ತಿರಲಿಲ್ಲ ಎಂದರು.

ಕರೊನಾ ಆರಂಭವಾದಗಿನಿಂದ ಮಕ್ಕಳ ಮೇಲೆ ಹೆಚ್ಚು ಪರಿಣಾಮ ಬೀರಿದ್ದು, ಮಕ್ಕಳು ಕಲಿಕೆಯಿಂದ ಹಿಂದುಳಿಯುತ್ತಿದ್ದಾರೆ. ಕೆಲವರು ಕಲಿಕೆಯಿಂದ ದೂರವಾಗುತ್ತಿದ್ದಾರೆ. ಹಾಗೂ ಮಾನಸಿಕ ಒತ್ತಡಕ್ಕೆ ಒಳಗಾಗುತ್ತಿದ್ದು, ಆದಷ್ಟು ಬೇಗ ಶಾಲೆಗಳನ್ನು ಆರಂಭ ಮಾಡಬೇಕಾಗಿದೆ.

ಗ್ರಾಮೀಣ ಪ್ರದೇಶಗಳಲ್ಲಿ ಬಾಲ್ಯವಿವಾಹಗಳು, ಬಾಲಕಾರ್ಮಿಕತೆ ಹೆಚ್ಚಾಗುತ್ತಿದ್ದು, ಗ್ರಾಮೀಣ ಬಡ ಮಕ್ಕಳ ಮೇಲೆ ದುಷ್ಪರಿಣಾಮಗಳು ಆಗುತ್ತಿರುವುದರಿಂದ ಶಾಲೆಗಳು ಬೇಗ ಆರಂಭವಾಗಬೇಕಿದೆ.
ಸಂಭವನೀಯ 3ನೇ ಅಲೆಯಲ್ಲಿ 18 ವರ್ಷದೊಳಗಿನ ಮಕ್ಕಳಿಗೆ ಸೋಂಕು ಹರಡುವ ಸಾಧ್ಯತೆಗಳಿದ್ದು, ಮ್ಯಾಮ್ ಮತ್ತು ಸ್ಯಾಮ್ ಮಕ್ಕಳನ್ನು ಗುರುತಿಸಿ ಅಂತಹ ಮಕ್ಕಳಿಗೆ ಪೌಷ್ಟಿಕ ಆಹಾರದ ವ್ಯವಸ್ಥೆ ಮಾಡಲು ಸೂಚನೆ ನೀಡಿದ ಅವರು ಮಕ್ಕಳ ಪೋಷಕರಿಗೆ ಲಸಿಕೆ ನೀಡಬೇಕು ಎಂದರು.

ಈಗಾಗಲೇ ಶ್ರಾವಣ ಮಾಸ ಆರಂಭವಾಗಿದ್ದು, ಸಾಲು-ಸಾಲು ಹಬ್ಬಗಳು ಮುಂದಿವೆ ಹಾಗಾಗಿ ಹೆಚ್ಚು ಜನಜಂಗುಳಿ ಸೇರದಂತೆ ಜಿಲ್ಲಾಡಳಿತ ಕ್ರಮ ವಹಿಸಬೇಕಾಗಿದೆ. ಆದರೊಂದಿಗೆ ಲಸಿಕೆ ನೀಡುವ ಕಾರ್ಯ ಚುರುಕುಗೊಳ್ಳಬೇಕಾಗಿದೆ ಎಂದರು.

ಜಿಲ್ಲಾಧಿಕಾರಿ ಮಹಾಂತೇಶ್ ಬೀಳಗಿ ಮಾತನಾಡಿ ಈ ಹಿಂದಿನ 2 ಅಲೆಗಳನ್ನು ನಿಭಾಯಿಸಿದ ಪರಿಣಿತರ ತಂಡ ನಮ್ಮಲ್ಲಿದ್ದು, ಮುಂದೆ ಬರಲಿರುವ 3ನೇ ಅಲೆಯನ್ನು ತಡೆಗಟ್ಟಲು ಸಮರ್ಥವಾಗಿ ನಿಭಾಯಿಸುವ ಅಧಿಕಾರಿಗಳು ನಮ್ಮಲಿದ್ದಾರೆ. ಈಗಾಗಲೇ ಮೂಲಭೂತ ಸೌಕರ್ಯ, ಔಷಧಿ, ಅಗತ್ಯ ಪರಿಕರಗಳೊಂದಿಗೆ ಸಾಕಷ್ಟು ಮಾನವ ಸಂಪನ್ಮೂಲಗಳನ್ನು ಹೆಚ್ಚಿಸಿಕೊಳ್ಳಲು ಪ್ರಯತ್ನಿಸಲಾಗುತ್ತಿದೆ. ಈ ನಿಟ್ಟಿನಲ್ಲಿ ಹಾಸ್ಟೆಲ್‌ಗಳು, ವಸತಿ ಶಾಲೆಗಳು, ಕಲ್ಯಾಣ ಮಂಟಪಗಳನ್ನು ಗುರುತಿಸಲಾಗಿದ್ದು, ಹಲವು ಸ್ವಯಂ ಸೇವಾ ಸಂಸ್ಥೆಗಳು ನಮ್ಮೊಂದಿಗೆ ಕೈಜೋಡಿಸಲು ಮುಂದೆ ಬಂದಿವೆ. ಅಗತ್ಯವಿರುವ ಬೆಡ್‌ಗಳು, ಆಕ್ಸಿಜನ್ ಸಲಕರಣೆಗಳು ಮುಂತಾದವುಗಳನ್ನ ಸಿಆರ್‌ಎಫ್ ನಿಧಿಯಿಂದ ಬಳಸಿಕೊಳ್ಳಲು ಕಾರ್ಯ ಪ್ರವೃತ್ತವಾಗಿದ್ದು, ಎಂತಹದೇ ಸಂದರ್ಭ ಬಂದರೂ ನಿಭಾಯಿಸಲು ನಮ್ಮ ತಂಡ ಸಿದ್ಧವಾಗಿದೆ ಎಂದು ವಿವರಿಸಿದರು.

ಜಿಲ್ಲಾ ಸರ್ವೇಕ್ಷಣಾಧಿಕಾರಿಗಳಾದ ಡಾ.ರಾಘವನ್ ಸಭೆಗೆ ಕರೊನಾ ನಿರ್ವಹಣೆ ಬಗೆಗೆ ಮಾಹಿತಿ ನೀಡಿದರು. ಸಭೆಯಲ್ಲಿ ಜಿ.ಪಂ ಸಿಇಒ ಡಾ.ವಿಜಯ ಮಹಾಂತೇಶ್ ದಾನಮ್ಮನವರ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಿ.ಬಿ ರಿಷ್ಯಂತ್, ಅಪರ ಜಿಲ್ಲಾಧಿಕಾರಿ ಪೂಜಾರ ವೀರಮಲ್ಲಪ್ಪ, ಡಿಹೆಚ್‌ಒ ಡಾ.ನಾಗರಾಜ್, ಆರ್‌ಸಿಹೆಚ್ ಡಾ.ಮೀನಾಕ್ಷಿ, ಜಿಲ್ಲಾ ಸರ್ಜನ್ ಡಾ.ಜಯಪ್ರಕಾಶ್ ಸೇರಿದಂತೆ ಜಿಲ್ಲಾ ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

ಇತ್ತೀಚಿನ ಸುದ್ದಿಗಳು

error: Content is protected !!