Covide guidelines violation: ಕೊವಿಡ್ ರೂಲ್ಸ್ | ಜನ ಪ್ರತಿನಿಧಿಗಳಿಗೆ ಹಾಗೂ ಸಾರ್ವಜನಿಕರಿಗೆ ಕಾನೂನುಗಳು ಬೇರೆನಾ.! ಕೇಳುವರು ಯಾರು.?
ದಾವಣಗೆರೆ: ಕೋವಿಡ್ ಮೂರನೇ ಅಲೆ ಬರುವ ಸಂಭವವಿದ್ದು, ಜನರು ಕೊಂಚವೂ ಮೈಮರೆಯದೆ ನಿಯಮ ಪಾಲನೆ ಮಾಡುವಂತೆ ಸರ್ಕಾರ ಜಾಗೃತಿ ಮೂಡಿಸುತ್ತಲೇ ಇದೆ. ಆದರೆ, ಅವರದ್ದೇ ಸರ್ಕಾರದ ಮಾತನ್ನು ಶಾಸಕ ಎಂ.ಪಿ. ರೇಣುಕಾಚಾರ್ಯ ಗಾಳಿಗೆ ತೂರಿದ್ದಾರೆ.
ಜಿಲ್ಲೆಯ ಹೊನ್ನಾಳಿ ತಾಲ್ಲೂಕಿನ ಕ್ರೀಡಾಂಗಣದಲ್ಲಿ ಕಾರ್ಮಿಕ ಇಲಾಖೆ ವತಿಯಿಂದ ಹಮ್ಮಿಕೊಂಡಿದ್ದ ಕಟ್ಟಡ ಕಾರ್ಮಿಕ ಹಾಗೂ ಅಸಂಘಟಿತ ಕಾರ್ಮಿಕರಿಗೆ ಫುಡ್ ಕಿಟ್ ವಿತರಣೆ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ರೇಣುಕಾಚಾರ್ಯ ಮಾಸ್ಕ್ ಧರಿಸದೆ, ಸಾಮಾಜಿಕ ಅಂತರ ಕಾಯ್ದುಕೊಳ್ಳದೆ ಇರುವುದು ಸಾರ್ವಜನಿಕರ ಕೆಂಗಣ್ಣಿಗೆ ಗುರಿಯಾಗಿದೆ.
ಕೋವಿಡ್ ಮಾರ್ಗಸೂಚಿಯನ್ನು ಪಾಲಿಸದೆ ಸಾಮಾಜಿಕ ಅಂತರ ಕಾಯದೆ ನೂರಾರು ಜನರನ್ನು ಸೇರಿಸಿಕೊಂಡು ಶಾಸಕ ರೇಣುಕಾಚಾರ್ಯ ಫುಡ್ ಕಿಟ್ ವಿತರಣೆ ಮಾಡಿದ್ದಾರೆ. ಸರ್ಕಾರದ ನಿಯಮಗಳೇನಿದ್ದರೂ ಸಾರ್ವಜನಿಕರಿಗೆ ಮಾತ್ರವಾ ಜನಪ್ರತಿನಿಧಿಗಳಿಗೆ ಯಾವುದೇ ಕಾನೂನು ಅನ್ವಯಿಸುವುದಿಲ್ಲವೇ ಎಂಬ ಪ್ರಶ್ನೆ ಸಾರ್ವಜನಿಕ ವಲಯದಲ್ಲಿ ಕೇಳಿಬರುತ್ತಿದೆ.
ಶಾಸಕ ಎಂ ಪಿ ರೇಣುಕಾಚಾರ್ಯ ಮಾಸ್ಕ್ ಧರಿಸದೆ,ನೂರಾರು ಜನರ ಮಧ್ಯೆ ಗುಂಪು ಗುಂಪಾಗಿ ಕಾರ್ಯಕ್ರಮ ಆಯೋಜಿಸಿ ಸರ್ಕಾರಿ ಅಧಿಕಾರಿಗಳ ಹಾಗೂ ತಹಸೀಲ್ದಾರ್ ಸರ್ಕಲ್ ಇನ್ಸ್‌ಪೆಕ್ಟರ್ ಸಮ್ಮುಖದಲ್ಲಿ ಕೊವಿಡ್ ನಿಯಮಾವಳಿ ಉಲ್ಲಂಘನೆ ಮಾಡಿರುವ ವೀಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ಸದ್ದು ಮಾಡುತ್ತಿದೆ.