ದಾಖಲೆ ಇಲ್ಲದೆ ದಾವಣಗೆರೆಗೆ ತರುತ್ತಿದ್ದ ಕೊಟ್ಯಾಂತರ ರೂ. ಮೌಲ್ಯದ ಚಿನ್ನಾಭರಣ ಹಾವೇರಿಯಲ್ಲಿ ಜಪ್ತಿ
ಹಾವೇರಿ: ದಾಖಲೆ ಇಲ್ಲದೆ ಸಾಗಿಸುತ್ತಿದ್ದ 11 ಕೆ.ಜಿ.ಯಷ್ಟು ಚಿನ್ನ, 70 ಕೆ.ಜಿ.ಯಷ್ಟು ಬೆಳ್ಳಿಯ ಆಭರಣಗಳನ್ನು ನಗರದ ಹೊರವಲಯದಲ್ಲಿರುವ ಅಜ್ಜಯ್ಯನ ಗುಡಿ ಚೆಕ್ ಪೋಸ್ಟ್ ನಲ್ಲಿ ಮಂಗಳವಾರ ಜಪ್ತಿ ಮಾಡಲಾಗಿದೆ.
ಹಾವೇರಿ ಎಸ್.ಎಸ್.ಟಿ ತಂಡದ ಅಧಿಕಾರಿಗಳು 6 ಕೋಟಿ 90 ಲಕ್ಷ ಮೌಲ್ಯದ ಚಿನ್ನಾಭರಣಗಳು ಎಂದು ಅಂದಾಜಿಸಿದ್ದಾರೆ. ಈ ಬಂಗಾರ ಮತ್ತು ಬೆಳ್ಳಿಯ ಆಭರಣಗಳನ್ನು ಚುನಾವಣಾ ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ.
ಹುಬ್ಬಳ್ಳಿಯಿಂದ ಹಾವೇರಿ ಮತ್ತು ದಾವಣಗೆರೆಯ ಚಿನ್ನದ ಅಂಗಡಿಗಳಿಗೆ ಚಿನ್ನ ಮತ್ತು ಬೆಳ್ಳಿಯ ಆಭರಣಗಳನ್ನು ಸಾಗಿಸಲಾಗುತ್ತಿತ್ತು. ಚುನಾವಣೆ ಅಧಿಕಾರಿಯಿಂದ ಯಾವುದೇ ಅನುಮತಿಯನ್ನ ಪಡೆದಿರಲಿಲ್ಲ.
ನಿಖರವಾಗಿ ಚಿನ್ನಾಭರಣಗಳನ್ನು ಯಾವ ಊರಿಗೆ ತೆಗೆದುಕೊಂಡು ಹೋಗುತ್ತಿದ್ದಾರೆ ಅನ್ನುವ ದಾಖಲೆಗಳು ಇರಲಿಲ್ಲ.ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ನೇತೃತ್ವದ ಸಮಿತಿಗೆ ಚಿನ್ನಾಭರಣ ವರ್ಗಾವಣೆ ಮಾಡಲಾಗಿದೆ. ಹಾವೇರಿ ಗ್ರಾಮೀಣ ಠಾಣೆಯ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.