ಸಿಲಿಂಡರ್ ಬೆಲೆ ಏರಿಕೆ ವಿರುದ್ಧ ಸಿಡಿದೆದ್ದ ಮಹಿಳೆಯರು: ಜಿಲ್ಲಾ ಮಹಿಳಾ ಕಾಂಗ್ರೆಸ್ ನಿಂದ ಪ್ರತಿಭಟನೆ
![IMG-20210908-WA0014](https://garudavoice.com/wp-content/uploads/2021/09/IMG-20210908-WA0014.jpg)
ದಾವಣಗೆರೆ: ಸಿಲಿಂಡರ್, ಅಡುಗೆ ಎಣ್ಣೆ ಮತ್ತು ಅಗತ್ಯ ದಿನಬಳಕೆಯ ವಸ್ತುಗಳ ನಿರಂತರ ಬೆಲೆ ಏರಿಕೆ ಖಂಡಿಸಿ ಜಿಲ್ಲಾ ಮಹಿಳಾ ಕಾಂಗ್ರೆಸ್‌ನಿಂದ ಬುಧವಾರ ನಗರದ ಅರಳಿಮರ ವೃತ್ತದಲ್ಲಿ ಪ್ರತಿಭಟನೆ ನಡೆಸಲಾಯಿತು.
ಮಹಿಳಾ ಕಾಂಗ್ರೆಸ್ ಪದಾಧಿಕಾರಿಗಳು ಬೆಲೆ ಏರಿಕೆ ಮಾಡುತ್ತಿರುವ ಕೇಂದ್ರ ಸರ್ಕಾರದ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿ, ಜಿಲ್ಲಾಧಿಕಾರಿಗಳ ಕಚೇರಿಗೆ ತೆರಳಿ ಮನವಿ ಸಲ್ಲಿಸಿದರು.
ಈ ವೇಳೆ ಜಿಲ್ಲಾ ಮಹಿಳಾ ಕಾಂಗ್ರೆಸ್ ಅಧ್ಯಕ್ಷರಾದ ಅನಿತಾಬಾಯಿ ಮಾಲತೇಶ್, ಸರ್ಕಾರ ವಿಧಿಸಿದ್ದ ಲಾಕ್‌ಡೌನ್‌ನಿಂದ ದುಡಿಮೆ ಇಲ್ಲದೆ ಜನಸಾಮಾನ್ಯರು ಸಂಕಷ್ಟದಲ್ಲಿದ್ದಾರೆ. ಇಂತಹ ಸಂದರ್ಭದಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಅಗತ್ಯ ವಸ್ತುಗಳ ಬೆಲೆ ಏರಿಕೆ ಮಾಡುವ ಮೂಲಕ ಮತ್ತಷ್ಟು ಜನರನ್ನು ಆರ್ಥಿಕ ಸಂಕಷ್ಟಕ್ಕೆ ದೂಡುತ್ತಿವೆ ಎಂದು ಆರೋಪಿಸಿದರು.
ಜಿಲ್ಲಾ ಕಾಂಗ್ರೆಸ್ ವಕ್ತಾರರಾದ ನಾಗರತ್ನಮ್ಮ ಮಾತನಾಡಿ, ಬಿಜೆಪಿ ಅಧಿಕಾರಕ್ಕೆ ಬಂದರೆ ದೇಶದ ಜನರಿಗೆ ಅಚ್ಛೆ ದಿನ್ ತರುವುದಾಗಿ ಪ್ರಧಾನಿ ನರೇಂದ್ರ ಮೋದಿ ಹೇಳಿದ್ದರು. ಆದರೆ, ಅಧಿಕಾರಕ್ಕೆ ಬಂದ ನಂತರದಲ್ಲಿ ಅಗತ್ಯ ವಸ್ತುಗಳ ಬೆಲೆಯನ್ನು ನಿರಂತರವಾಗಿ ಏರಿಕೆ ಮಾಡುವ ಮೂಲಕ ದೇಶದ ಜನರನ್ನು ದುಸ್ಥಿತಿಗೆ ತಳ್ಳುತ್ತಿದ್ದಾರೆ. ಮೋದಿ ಅವರ ಅಚ್ಛೆ ದಿನ್ ಇದೇನಾ ಎಂದು ಪ್ರಶ್ನಿಸಿದರು.
ಜಿಲ್ಲಾ ಮಹಿಳಾ ಕಾಂಗ್ರೆಸ್ ಪ್ರಧಾನ ಕಾರ್‍ಯದರ್ಶಿ ಸುಷ್ಮಾ ಪಾಟೀಲ್, ದಾವಣಗೆರೆ ದಕ್ಷಿಣ ಮಹಿಳಾ ಕಾಂಗ್ರೆಸ್ ಘಟಕದ ಅಧ್ಯಕ್ಷೆ ಶ್ರೀಮತಿ ಶುಭಮಂಗಳ ಮಾತನಾಡಿ, ಕೋವಿಡ್ ನೆಪದಲ್ಲಿ ಜನರನ್ನು ಮನೆಯಲ್ಲಿ ಲಾಕ್‌ಮಾಡಿ, ಸಂಸತ್ತಿನಲ್ಲಿ ಚರ್ಚಿಸದೆ ಹಲವು ಜನವಿರೋಧಿ ಕಾಯ್ದೆಗಳನ್ನು ಜಾರಿಗೆ ತಂದು ದಿನಬಳಕೆ ವಸ್ತುಗಳ ಬೆಲೆ ಏರಿಕೆ ಮಾಡಿ, ಮೇಲಿಂದ ಮೇಲೆ ಪೆಟ್ರೋಲ್, ಡೀಸೆಲ್ ಮತ್ತು ವಿದ್ಯುತ್ ದರ ಏರಿಸಿದೆ. ಅಲ್ಲದೆ, ಈಗ ಅಡುಗೆ ಅನಿಲದ ಬೆಲೆಯನ್ನು ಹೆಚ್ಚಳ ಮಾಡುವ ಮೂಲಕ ಕೇಂದ್ರ ಸರ್ಕಾರ ದುಡಿಯುವ ವರ್ಗದ ಜನರನ್ನು ಸಂಕಷ್ಟಕ್ಕೆ ತಳ್ಳಿದೆ ಎಂದು ಕಿಡಿಕಾರಿದರು.
ಅಡುಗೆ ಅನಿಲ ದರ ತಿಂಗಳಿಗೊಮ್ಮೆ ಪರಿಷ್ಕರಣೆಯಾದರೆ, ಪೆಟ್ರೋಲ್, ಡೀಸೆಲ್ ದರ ಪ್ರತಿದಿನ ಪರಿಷ್ಕರಣೆಯಾಗುತ್ತಿದೆ. ಆದರೆ, ದುಡಿಯುವ ವರ್ಗದ ಜನರ ವೇತನ, ರೈತರು ಬೆಳೆಯುವ ದವಸ-ಧಾನ್ಯಗಳಿಗೆ ಸರ್ಕಾರ ವೈಜ್ಞಾನಿಕ ಬೆಲೆ ನಿಗದಿ ಮಾಡುತ್ತಿಲ್ಲ. ಈ ಬಗ್ಗೆ ಸರ್ಕಾರಗಳಿಗೆ ಆಸಕ್ತಿಯೂ ಇಲ್ಲ. ಈ ದೇಶದ ಜನರ ಕಣ್ಣಿಗೆ ಮಂಕು ಬೂದಿ ಎರಚುತ್ತಿದ್ದಾರೆಂದು ಆಪಾದಿಸಿದರು.
ಜನರಿಗೆ ಬೆಲೆ ಏರಿಕೆ ಬಿಸಿ ಮುಟ್ಟಿಸಿರುವ ಕೇಂದ್ರ ಸರ್ಕಾರದ ಆಡಳಿತ ಹಿಡಿದಿರುವ ಚುನಾಯಿತ ಪ್ರತಿನಿಧಿಗಳು ಜನಸೇವಕರೋ ಅಥವಾ ಕಾರ್ಪೋರೇಟ್ ಕಂಪನಿಗಳ ಏಜೆಂಟರೋ ಎಂಬುದನ್ನು ಕೇಂದ್ರ ಸರ್ಕಾರ ಸ್ಪಷ್ಟಪಡಿಸಬೇಕು. ಅಡುಗೆ ಅನಿಲ, ಪೆಟ್ರೋಲ್, ಡೀಸೆಲ್‌ಸೇರಿದಂತೆ ಅಗತ್ಯ ವಸ್ತುಗಳ ಬೆಲೆಯನ್ನು ತಕ್ಷಣವೇ ನಿಯಂತ್ರಿಸಬೇಕು ಎಂದು ಪ್ರತಿಭಟನಾನಿರತರು ಒತ್ತಾಯಿಸಿದರು.
ಪ್ರತಿಭಟನೆಯಲ್ಲಿ ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್‍ಯದರ್ಶಿ ದಿನೇಶ್ ಕೆ.ಶೆಟ್ಟಿ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಅಯೂಬ್ ಪೈಲ್ವಾನ್, ಮೈನುದ್ದೀನ್, ದಾದಾಪೀರ್, ದ್ರಾಕ್ಷಾಯಣಮ್ಮ, ರಹಜಾನ್ ದಾದಾಪೀರ್, ದಿಲ್ ಷಾ, ರಾಜೇಶ್ವರಿ, ಆಶಾ, ಸುನೀತಾ, ರುದ್ರಮ್ಮ, ಯಶೋಧ, ಸಲ್ಮಾಬಾನು, ಗೀತಾ, ಕಲಾ, ಕವಿತಾ, ಮಂಗಳಮ್ಮ, ಇಂದ್ರಮ್ಮ, ಮಂಜುಳಾ, ರಾಧಾಬಾಯಿ, ಸಂಗೀತಾ, ಉಮಾ, ಜಯಶ್ರೀ, ಸಂಗಮ್ಮ, ಕಿಶಾನ್ ಕಾಂಗ್ರೆಸ್‌ನ ಸುರೇಶ್ ಜಾಧವ್, ಮಹಮ್ಮದ್ ಜಿಕ್ರಿಯಾ ಮತ್ತಿತರರು ಭಾಗವಹಿಸಿದ್ದರು.