ಡಿ. 17 ರಿಂದ ಕಾಲುಬಾಯಿ ರೋಗ ವಿರುದ್ಧದ ಲಸಿಕಾ ಅಭಿಯಾನ : ದಾವಣಗೆರೆ ಡಿಸಿ
ದಾವಣಗೆರೆ: ಡಿ. 17 ರಿಂದ ಜ. 11 ರವರೆಗೆ ಜಿಲ್ಲೆಯಾದ್ಯಂತ ಜಾನುವಾರುಗಳಿಗೆ ಕಾಲುಬಾಯಿ ರೋಗ ವಿರುದ್ಧದ ಲಸಿಕಾ ಅಭಿಯಾನ ನಡೆಯಲಿದ್ದು ಎಲ್ಲಾ ಪಶುಪಾಲಕರಿಗೆ ಇದರ ಪ್ರಯೋಜನ ಸಿಗುವಂತೆ ಪಶುಪಾಲನಾ ಇಲಾಖೆ ಕ್ರಮ ವಹಿಸಬೇಕೆಂದು ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ ಹೇಳಿದರು.
ಪಶುಪಾಲನ ಮತ್ತು ಪಶುವೈದ್ಯ ಸೇವಾ ಇಲಾಖೆ ವತಿಯಿಂದ ಜಿಲ್ಲಾಡಳಿತ ಭವನದಲ್ಲಿ ನಡೆದ ರಾಷ್ಟ್ರೀಯ ಜಾನುವಾರು ರೋಗ ನಿಯಂತ್ರಣ ಕಾರ್ಯಕ್ರಮದಡಿಯಲ್ಲಿ ಕಾಲುಬಾಯಿ ರೋಗ ಲಸಿಕಾ ಅಭಿಯಾನದ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಜಾನುವಾರುಗಳಲ್ಲಿ ಕಾಣಿಸಿಕೊಳ್ಳುವ ಕಾಲುಬಾಯಿ ರೋಗ, ರೈತರಿಗೆ ಆರ್ಥಿಕ ಸಂಕಷ್ಟಗಳನ್ನು ತಂದೊಡ್ಡುತ್ತದೆ. ಈ ರೋಗ ನಿಯಂತ್ರಿಸಿ, ನಿರ್ಮೂಲನೆ ಮಾಡಲು ಪ್ರತಿ 6 ತಿಂಗಳಿಗೊಮ್ಮೆ ರೋಗದ ವಿರುದ್ದದ ಲಸಿಕೆಯನ್ನು ಹಾಕಿಸಬೇಕು. ಸರ್ಕಾರ ಈ ಲಸಿಕೆಗಳನ್ನು ಉಚಿತವಾಗಿ ನೀಡುತ್ತಿದ್ದು ಲಸಿಕಾಕಾರರು ನಿಮ್ಮ ಗ್ರಾಮಕ್ಕೆ ಮತ್ತು ನಿಮ್ಮ ಮನೆ ಬಾಗಿಲಿಗೆ ಬಂದಾಗ ಅವರಿಗೆ ಸಹಕಾರ ನೀಡಿ ಪಶುಪಾಲಕರು ಜಾನುವಾರುಗಳಿಗೆ ಲಸಿಕೆ ಹಾಕಿಸಬೇಕು ಎಂದು ಮನವಿ ಮಾಡಿದರು.
ಪಶು ಸಂಗೋಪನ ಇಲಾಖೆಯ ಉಪನಿರ್ದೇಶಕ ಡಾ. ಚಂದ್ರಶೇಖರ ಸುಂಕದ್ ಮಾತನಾಡಿ, ಜಿಲ್ಲೆಯಲ್ಲಿ 3,29,697 ಜಾನುವಾರುಗಳಿದ್ದು 3,29,800 ಡೋಸ್ ಲಸಿಕೆ ಜಿಲ್ಲೆಗೆ ಬಂದಿದೆ. ಎಲ್ಲಾ ಜಾನುವಾರುಗಳಿಗೂ ಲಸಿಕೆ ನೀಡಲಾಗುವುದು ಇದಕ್ಕಾಗಿ 579 ಬ್ಲಾಕ್ಸ್ ರಚಿಸಿದ್ದು, ಪ್ರತಿ ಬ್ಲಾಕ್ ನಲ್ಲಿ 50 ರಿಂದ 100 ಜಾನುವಾರುಗಳಿಗೆ ಲಸಿಕೆ ನೀಡಲಾಗುವುದೆಂದರು.
ಸಭೆಯಲ್ಲಿ ಕೃಷಿ ಇಲಾಖೆ ಜಂಟಿ ನಿರ್ದೇಶಕ ಶ್ರೀನಿವಾಸ್ ಚಿಂತಾಲ್, ಡಾ,ವೀರೇಶ್, ಕೃಷಿ ವಿಜ್ನಾನ ಕೇಂದ್ರದ ಜಯದೇವಪ್ಪ, ದೇವರಾಜು ಉಪಸ್ಥಿತರಿದ್ದರು.