ದಾನೇಶ್ವರಿ ಅನುಮಾನಾಸ್ಪದ ಸಾವು : ಆರೋಪಿಗೆ ಜೀವಾವಧಿ ಶಿಕ್ಷೆ ವಿಧಿಸಲು ಆವರಗೆರೆ ವಾಸು ಒತ್ತಾಯ
ದಾವಣಗೆರೆ : ವಿಜಯಪುರ ಜಿಲ್ಲೆಯ ತಾಳಿಕೋಟೆಯ ಉಪತಹಶೀಲ್ದಾರ್ ಅಶೋಕ್ ಶರ್ಮಾ ಅವರ ಮಗಳು ದಾನೇಶ್ವರಿ (23 ವರ್ಷ) ಅನುಮಾನಾಸ್ಪದ ರೀತಿಯಲ್ಲಿ ಬೆಂಗಳೂರು ನಗರದಲ್ಲಿ ಮೃತಪಟ್ಟಿದ್ದಾಳೆ. ಮೈ ಮೇಲೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿ ಕೊಲೆ ಮಾಡಿರುವ ಶಂಕೆ ವ್ಯಕ್ತಪಡಿಸಿ ಅವರ ಸಹೋದರಿ ಪೊಲೀಸರಿಗೆ ದೂರು ನೀಡಿದ್ದಾರೆ. ವಿಜಯಪುರ ಬಿ.ಎಲ್.ಡಿ.ಎ. ಇಂಜಿನಿಯರ್ ಕಾಲೇಜಿನಲ್ಲಿ ಪದವಿ ಮುಗಿಸಿದ್ದ ದಾನೇಶ್ವರಿ ಉದ್ಯೋಗಕ್ಕೆ ಪೂರಕ ಕೋರ್ಸ್ ಅಧ್ಯಯನಕ್ಕಾಗಿ ಬೆಂಗಳೂರಿಗೆ ಬಂದಿದ್ದರು. ಬಿ.ಟಿ.ಎಂ. ಲೇಔಟಿನ ಪೇಯಿಂಗ್ ಗೆಸ್ಟ್ ಕಟ್ಟಡವೊಂದರಲ್ಲಿ ವಾಸವಿದ್ದರು. ಶೇ.75ರಷ್ಟು ಸುಟ್ಟ ಗಾಯಗಳಾಗಿದ್ದ ಅವರನ್ನು ಮಾರ್ಚ್ 15ರಂದು ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆಗೆ ಸ್ಪಂದಿಸದೇ ಮೃತಪಟ್ಟರು.
ಪರಿಶಿಷ್ಟ ಜಾತಿಯ ದಾನೇಶ್ವರಿ ಹಾಗೂ ಲಿಂಗಾಯತ ಸಮುದಾಯದ ಶಿವಕುಮಾರ ಹಿರೇಹಾಳ್ ಪರಸ್ಪರ ಪ್ರೀತಿಸುತ್ತಿದ್ದರು. ಮದುವೆಯಾಗುವಂತೆ ಕೇಳಿದ್ದಕ್ಕಾಗಿ ಸಿಟ್ಟಾದ ಶಿವಕುಮಾರ್ ಕೊಲೆ ಮಾಡಿ ಪರಾರಿಯಾಗಿರುವ ಬಗ್ಗೆ ಯುವತಿಯ ಸಹೋದರಿ ದೂರು ನೀಡಿದ್ದಾರೆ. ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಮತ್ತು ದೌರ್ಜನ್ಯ ತಡೆ ಕಾಯ್ದೆ ಹಾಗೂ ಕೊಲೆ ಆರೋಪದಡಿ ಶಿವಕುಮಾರ ವಿರುದ್ಧ ಎಫ್.ಐ.ಆರ್. ದಾಖಲಿಸಿ, ತನಿಖೆ ಮುಂದುವರಿಸಲಾಗಿದೆ ಎಂದು ಅಧಿಕಾರಿ ತಿಳಿಸಿದ್ದಾರೆ. ದಾನೇಶ್ವರಿ ಕುಟುಂಬಕ್ಕೆ ರಕ್ಷಣೆ ಕೊಡಬೇಕು. 1 ಕೋಟಿ ಪರಿಹಾರ ಕೊಡಿಸಬೇಕು, ಕುಟುಂಬದ ಒಬ್ಬರಿಗೆ ಸರ್ಕಾರಿ ನೌಕರಿ ಕೊಡಬೇಕು. ಆರೋಪಿಯನ್ನು ಕೂಡಲೇ ಬಂಧಿಸಿ ಜೀವಾವಧಿ ಶಿಕ್ಷೆಯ ಕೇಸ್ ದಾಖಲಿಸಿ ರಾಜ್ಯ ಸರ್ಕಾರ ದಾನೇಶ್ವರಿ ಹಾಗೂ ಕುಟುಂಬಕ್ಕೆ ನ್ಯಾಯ ಒದಗಿಸಬೇಕೆಂದು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ಹಕ್ಕುಗಳ ಹೋರಾಟ ಸಮಿತಿ ಜಿಲ್ಲಾಧ್ಯಕ್ಷ ಕಾಂ|| ಆವರಗೆರೆ ವಾಸು ಒತ್ತಾಯಿಸಿದ್ದಾರೆ.
ಈ ಸಂದರ್ಭದಲ್ಲಿ ಕಾರ್ಯದರ್ಶಿ ಕಾಂ|| ಮಂಜುನಾಥ ಡಿ. ಜಿಲ್ಲಾ ಉಪಾಧ್ಯಕ್ಷ ಕಾಂ|| ರಾಜು ಕೆರೆಯಾಗನಹಳ್ಳಿ, ಜಿಲ್ಲಾ ಉಪಾಧ್ಯಕ್ಷ ಕಾಂ|| ಜೀವನ್ ನಿಟುವಳ್ಳಿ, ಜಿಲ್ಲಾ ಉಪಾಧ್ಯಕ್ಷ ಕಾಂ|| ಗುರುಮೂರ್ತಿ ಸಿ., ಸಂಘಟನಾ ಕಾರ್ಯದರ್ಶಿ ಕಾಂ|| ಮಂಜುನಾಥ ಮಳಲ್ಕೆರೆ, ಜಿಲ್ಲಾ ಉಪಾಧ್ಯಕ್ಷ ಕಾಂ|| ರುದ್ರೇಶ್ ಮಳಲ್ಕೆರೆ, ಕಾಂ|| ಹನುಮಂತಪ್ಪ ನಿಟ್ಟುವಳ್ಳಿ, ಕಾಂ|| ಅರುಣ ನಿಟುವಳ್ಳಿ, ಕಾಂ|| ಬಸಣ್ಣ ನಿಟುವಳ್ಳಿ, ಕಾಂ|| ಮಂಜುನಾಥ ಓಬಳಾಪುರ, ಕಾಂ|| ಪರಶುರಾಮ ಎ.ಕೆ. ನಿಟುವಳ್ಳಿ, ಕಾಂ|| ಮಂಜುನಾಥ ಆರ್. ಪಿಗ್ನಿ, ಕಾಂ|| ನಿಟುವಳ್ಳಿ ರಾಮಣ್ಣ, ಕಾಂ|| ಲಕ್ಷ್ಮಣ ವಿ., ಕಾಂ|| ಸಿ. ರಮೇಶ್, ಕಾಂ|| ನರೇಗಾ ರಂಗನಾಥ, ಕಾಂ|| ಮಧು ಭಟ್ಟರ, ಕಾಂ|| ಪರಶುರಾಮ ಗುದ್ದಾಳ್, ಕಾಂ|| ಸ್ವಾಮಿ, ಕಾಂ|| ಮಂಜುನಾಥ ದೊಡ್ಮನಿ ಇತರರು ಉಪಸ್ಥಿತರಿದ್ದರು.