ದಾವಣಗೆರೆಯಲ್ಲಿ ವಿಶಿಷ್ಟ ರೀತಿಯ ವಿಶ್ವೇಶ್ವರ ತೀರ್ಥರ ಜ್ಞಾನ ಮುದ್ರ ಹೋಲಿಕೆಯ ಗಣೇಶ ಪ್ರತಿಷ್ಟಾಪನೆ
ದಾವಣಗೆರೆ: ಉಡುಪಿಯ ಅಷ್ಟಮಠಗಳಲ್ಲೊಂದಾದ ಪೇಜಾವರ ಮಠದ 33ನೆಯ ಮಠಾಧೀಶರಾಗಿದ್ದ ಶ್ರೀ ವಿಶ್ವೇಶ್ವರ ತೀರ್ಥರ ಜ್ಞಾನ ಮುದ್ರ ಹೋಲಿಕೆಯ ಗಣೇಶನ ಮೂರ್ತಿಯನ್ನು ಇಲ್ಲಿನ ಮಹಾರಾಜ ಪೇಟೆಯ ಇಜಾದರ್ ಗಲ್ಲಿಯಲ್ಲಿ ಪ್ರತಿಷ್ಠಾಪಿಸಲಾಗಿದೆ.
ಶ್ರೀ ವಿನಾಯಕ ಗೆಳೆಯರ ಬಳಗವು ಉಡುಪಿಯ ಶ್ರೀ ಪೇಜಾವರ ಮಠದ ಶ್ರೀ 108 ವಿಶ್ವೇಶ್ವರ ಶ್ರೀಪಾದಂಗಳವರ ಜ್ಞಾನ ಮುದ್ರೆಯ ವಿಶೇಷ ಗಣೇಶಮೂರ್ತಿಯನ್ನು ಪ್ರತಿಷ್ಠಾಪಿಸಿದೆ.
ವಿನಾಯಕ ಗೆಳೆಯರ ಬಳಗದಿಂದ ಇದು 22 ನೇ ವರ್ಷದ ಗಣೇಶ ಪ್ರತಿಷ್ಟಾಪನೆಯಾಗಿದ್ದು, ಸಮಾಜಕ್ಕೆ ಕೃಷ್ಣ ಮಠದ ಮೂಲಕ ಆಧ್ಯಾತ್ಮಿಕ ಸಂದೇಶ ಸಾರಿರುವುದರಲ್ಲಿ ಪೇಜಾವರ ಶ್ರೀಗಳ ಕೊಡುಗೆ ಅಪಾರ ಎನ್ನಬಹುದು. ಸಿದ್ದಗಂಗಾ ಶ್ರೀಗಳು ಅನ್ನದಾಸೋಹ, ಶಿಕ್ಷಣ ದಾಸೋಹದಲ್ಲಿ ಹೆಸರು ಮಾಡಿದರೆ, ಪೇಜಾವರ ಶ್ರೀಗಳು ಆಧ್ಯಾತ್ಮಿಕ ದಾಸೋಹ ನೀಡಿದವರೆನ್ನಬಹುದು. ಹಾಗಾಗಿ, ಪೇಜಾವರ ಶ್ರೀಗಳ ಜ್ಞಾನ ಮುದ್ರ ಹೋಲಿಕೆಯ ಗಣಪನನ್ನು ಪ್ರತಿಷ್ಟಾಪಿಸಲಾಗಿದೆ ಎನ್ನುತ್ತಾರೆ ಬಳಗದ ಕಾರ್ಯದರ್ಶಿ ಶಿವರಾಜ್.
ಭಾನುವಾರ ಬೆಳಿಗ್ಗೆ ಗಣಹೋಮ ನೆರವೇರಿಸಿ, ಅನ್ನ ಸಂತರ್ಪಣೆ ಮಾಡಿದ ನಂತರ ಸಂಜೆ 7 ಗಂಟೆಯ ಸುಮಾರಿಗೆ ಗಣೇಶ ಮೂರ್ತಿಯನ್ನು ವಿಸರ್ಜಿಸಲಾಗುವುದು ಅವರು ತಿಳಿಸಿದರು.