ವಿಶ್ವವಿದ್ಯಾಲಯಗಳು ರಾಜಕೀಯ ಕೇಂದ್ರಗಳಾಗಿ ಬದಲಾಗುತ್ತಿರುವುದು ಆತಂಕಕಾರಿ ಬೆಳವಣಿಗೆ – ಸಚಿವ ಭಗವಂತ ಖೂಬಾ ಕಳವಳ

ದಾವಣಗೆರೆ: ದೇಶದಲ್ಲಿ ವಿಶ್ವವಿದ್ಯಾಲಯಗಳು ರಾಜಕೀಯ ಕೇಂದ್ರಗಳಾಗಿ ಬದಲಾಗುತ್ತಿರುವುದು ಆತಂಕಕಾರಿ ಬೆಳವಣಿಗೆ ಎಂದು ಕೇಂದ್ರದ ರಾಸಾಯನಿಕ ಮತ್ತು ರಸಗೊಬ್ಬರ ಹಾಗೂ ನವ್ಯ ಮತ್ತು ನವೀಕರಿಸಬಹುದಾದ ಇಂಧನ ಖಾತೆ ರಾಜ್ಯ ಸಚಿವ ಭಗವಂತ ಖೂಬಾ ಕಳವಳ ವ್ಯಕ್ತಪಡಿಸಿದ್ದಾರೆ.

ದಾವಣಗೆರೆ ವಿಶ್ವವಿದ್ಯಾನಿಲಯದ 13ನೇ ಸಂಸ್ಥಾಪನಾ ದಿನಾಚರಣೆ, ಚಿತ್ರದುರ್ಗ ಜಿಲ್ಲೆ ಗುಡ್ಡದರಂಗವ್ವನಹಳ್ಳಿ ಸ್ನಾತಕೋತ್ತರ ಕೇಂದ್ರದ ಪುರುಷರ ವಸತಿ ನಿಲಯದ ಉದ್ಘಾಟನಾ ಸಮಾರಂಭ ಉದ್ಘಾಟಿಸಿ ಮಾತನಾಡಿದರು.

ವಿಶ್ವವಿದ್ಯಾನಿಲಯಗಳು ಶೈಕ್ಷಣಿಕ ಕೇಂದ್ರಗಳಾಗಿ ವಿದ್ಯಾರ್ಥಿಗಳ ಭವಿಷ್ಯಕ್ಕೆ ಭದ್ರ ಬುನಾದಿ ಹಾಕುವ ಕೆಲಸ ಮಾಡಬೇಕು. ಆದರೆ ದೇಶದ ಕೆಲವೆಡೆ ಕೋಮು ರಾಜಕೀಯಕ್ಕೆ, ದೇಶ ವಿರೋಧಿ ಕೃತ್ಯಗಳಿಗೆ ವಿಶ್ವವಿದ್ಯಾನಿಲಯಗಳನ್ನೇ ಕೇಂದ್ರ ಮಾಡಿಕೊಂಡಿರುವುದು ದುರದೃಷ್ಟಕರ ಎಂದು‌ ವಿಷಾದಿಸಿದರು.

ವಿವಿಗಳಲ್ಲಿ ರಾಜಕೀಯ ಮುಕ್ತ ವಾತಾವರಣ ನಿರ್ಮಿಸಿ, ಸಮುದಾಯ ಅಭಿವೃದ್ಧಿ ಕೇಂದ್ರಿತ ಶೈಕ್ಷಣಿಕ ವಾತಾವರಣ ನಿರ್ಮಿಸುವುದು ಸರ್ಕಾರದ ಮೊದಲ ಆದ್ಯತೆ ಆಗಿದೆ ಎಂದು ತಿಳಿಸಿದರು.

ದೇಶ ಮತ್ತು ವಿದ್ಯಾರ್ಥಿಗಳ ಏಳಿಗೆಯನ್ನು ಸಹಿಸದ ಕಾಂಗ್ರೆಸ್ ಮತ್ತು ಎಡಪಂಥೀಯ ವರ್ಗದವರು ಹೊಸ ಶಿಕ್ಷಣ ನೀತಿ ಬಗ್ಗೆ ನಕಾರಾತ್ಮಕ ಚಿಂತನೆಯಿಂದ ಸಮಾಜಕ್ಕೆ ಭ್ರಮೆಹುಟ್ಟಿಸುವ ಕೆಲಸ ಮಾಡುತ್ತಿದ್ದಾರೆ. ಇದೆಲ್ಲದರ ಹಿಂದೆ ರಾಜಕೀಯ ಅಥವಾ ವೈಯಕ್ತಿಕ ಹಿತಾಸಕ್ತಿ ಇದೆ ಎಂದು ದೂರಿದರು.

ವಿಶ್ವವಿದ್ಯಾನಿಲಯಗಳು ವಿದ್ಯಾರ್ಥಿಗಳಿಗೆ ಶಿಕ್ಷಣ ನೀಡುವುದರ ಜೊತೆಗೆ, ಸಮಾಜಕ್ಕೆ ಅಗತ್ಯವಿರುವ ನೂತನ ಸಂಶೋಧನೆಗಳನ್ನು ಕೈಗೊಳ್ಳಲು ಹೆಚ್ಚು ಉತ್ತೇಜನ ನೀಡಬೇಕು. ಈಗಿನ ದಿನಗಳಲ್ಲಿ ದೇಶವು ವಿಶ್ವವಿದ್ಯಾನಿಲಯಗಳಿಂದ ಇದನ್ನೇ ಅಪೇಕ್ಷಿಸುತ್ತದೆ ಎಂದರು.

ವಿದ್ಯಾರ್ಥಿಗಳಲ್ಲಿ ಕೌಶಲ್ಯ ಆಧಾರಿತ ಶಿಕ್ಷಣ ನೀಡಿ, ವೃತ್ತಿಪರತೆ, ಸಾಮಾಜಿಕ ಜವಾಬ್ದಾರಿ, ಸ್ವಾಭಿಮಾನದ ಬದುಕು ಮತ್ತು ದೇಶಾಭಿಮಾನ ಕಲಿಸುವ ಅನಿವಾರ್ಯತೆ ಎದುರಾಗಿದೆ. ಈ ಕೆಲಸವನ್ನು ಶಿಕ್ಷಣ ಸಂಸ್ಥೆಗಳು ಜವಾಬ್ದಾರಿಯಿಂದ ತುರ್ತಾಗಿ ಮಾಡಬೇಕಾಗಿದೆ ಎಂದು ಕರೆ ನೀಡಿದರು.

ಹಿಂದಿನ ಶಿಕ್ಷಣ ವ್ಯವಸ್ಥೆಯಲ್ಲಿದ್ದ ಹಲವಾರು ದೋಷಗಳನ್ನು ನೂತನ ರಾಷ್ಟ್ರೀಯ ಶಿಕ್ಷಣ ನೀತಿಯು ನಿವಾರಿಸಿ, ಆಧುನಿಕ ಸಮಾಜದ ಪರಿಕಲ್ಪನೆಯನ್ನು ಸಮಾಜದ ತಳಮಟ್ಟದಿಂದ ಭದ್ರಪಡಿಸಲು ಆದ್ಯತೆ ನೀಡಲಿದೆ. ವಿದ್ಯಾರ್ಥಿಯ ಆಸಕ್ತಿ ಆಧಾರಿತ, ಸಮುದಾಯ ಅಭಿವೃದ್ಧಿ ಪರಿಕಲ್ಪನೆಯ ಶಿಕ್ಷಣ ನೀಡುವ ಪ್ರಯತ್ನ ನಡೆದಿದೆ. ಈ ನಿಟ್ಟಿನಲ್ಲಿ ದೇಶದ 2.60 ಲಕ್ಷ ಶಿಕ್ಷಣ ಸಂಸ್ಥೆಗಳಲ್ಲಿ ಚಾಲನೆ ನೀಡಲಾಗಿದೆ. ಅದರ ಸಮರ್ಪಕ ಅನುಷ್ಠಾನದ ಜವಾಬ್ದಾರಿ ಶಿಕ್ಷಕರ ಮೇಲಿದೆ ಎಂದು ಹೇಳಿದರು.

ಸಂಸದ ಜಿ.ಎಂ. ಸಿದ್ದೇಶ್ವರ ಮಾತನಾಡಿ, ವಿದ್ಯಾರ್ಥಿಗಳು ಬಾವಿಯ ಕಪ್ಪೆಗಳಾಗದೆ ಸಮುದ್ರ ಸೇರುವ ಪ್ರಯತ್ನ ಮಾಡಬೇಕು. ಯಾವುದೇ ಕ್ಷೇತ್ರದಲ್ಲಿ ಆಸಕ್ತಿ ಇದ್ದರೂ ಅದರಲ್ಲಿ ಮುಂದುವರಿಯಬೇಕು. ಸಾಮರ್ಥ್ಯವನ್ನು ಸಕಾರಾತ್ಮಕವಾಗಿ ಕ್ರೋಡಿಕರಿಸಿಕೊಂಡು, ವಿಭಿನ್ನ ರೀತಿಯ ಚಿಂತನಾ ಕ್ರಮಗಳ ಮೂಲಕ ಸ್ವತಂತ್ರವಾಗಿ ಬದುಕು ಕಟ್ಟಿಕೊಳ್ಳಲು, ಸ್ವಾವಲಂಬನೆಯ ಕಾರ್ಯ ಯೋಜನೆಗಳತ್ತ ಗಮನ ಹರಿಸಬೇಕು ಎಂದು ಸಲಹೆ ನೀಡಿದರು.

ವಿಧಾನ ಪರಿಷತ್ ಮಾಜಿ ಸದಸ್ಯ ಡಾ. ಶಿವಯೋಗಿಸ್ವಾಮಿ ಮಾತನಾಡಿ, ಸಿರಿಗೆರೆಯ ತರಳಬಾಳುಮಠ ಡಾ. ಶಿವಮೂರ್ತಿ ಶಿವಮೂರ್ತಿ ಶಿವಾಚಾರ್ಯರ ಇಚ್ಛೆಯಂತೆ ದಾವಣಗೆರೆ ವಿಶ್ವವಿದ್ಯಾನಿಲಯ ಸ್ಥಾಪನೆಯಾಗಿದೆ. ಆಗಿನ ಮುಖ್ಯಮಂತ್ರಿಯಾಗಿದ್ದ ಬಿ.ಎಸ್. ಯಡಿಯೂರಪ್ಪ ಅವರು ಸ್ವಾಮೀಜಿ ಅವರ ಮಾತಿಗೆ ಬದ್ಧರಾಗಿ ಘೋಷಣೆ ಮಾಡಿದರು. 13 ವರ್ಷದಲ್ಲಿ ವಿಶ್ವವಿದ್ಯಾನಿಲಯ ದೇಶದ ಮಟ್ಟದಲ್ಲಿ ಗುರುತಿಸಿಕೊಂಡಿದ್ದು ಅಗಾಧವಾದ ಸಾಧನೆ ಎಂದರು.

ಇದೇ ಸಂದರ್ಭದಲ್ಲಿ ವಿಶ್ವವಿದ್ಯಾನಿಲಯ ಸಹಪ್ರಾಧ್ಯಾಪಕ ಮತ್ತು ಸ್ನಾತಕೋತ್ತರ ಕೇಂದ್ರದ ನಿರ್ದೇಶಕ ಡಾ. ಎಚ್. ವಿಶ್ವನಾಥ ಅವರ ಕನ್ನಡ ಸಾಹಿತ್ಯ ಸಿಂಚನ ಮತ್ತು ಸಹಪ್ರಾಧ್ಯಾಪಕ ಡಾ. ವೆಂಕಟರಾವ್ ಪಲಾಟಿ ಅವರ ಹ್ಯಾಂಡ್‌ಬುಕ್ ಆಫ್ ಅಕಾಡೆಮಿಕ್ ರೈಟಿಂಗ್ ಮತ್ತು ಕೊವಿಡ್-19: ಆರಿಜನ್ ಅಂಡ್ ಸ್ಪೆçಡ್ ಆಫ್ ಕೊರೊನಾ ವೈರಸ್ ಪುಸ್ತಕಗಳನ್ನು ಸಚಿವ ಖೂಬಾ ಬಿಡುಗಡೆ ಮಾಡಿದರು.

ಕುಲಪತಿ ಪ್ರೊ. ಶರಣಪ್ಪ ವಿ. ಹಲಸೆ ಅಧ್ಯಕ್ಷತೆ ವಹಿಸಿದ್ದರು, ಸಿಂಡಿಕೇಟ್ ಸದಸ್ಯರಾದ ಮಾಡಾಳು ಮಲ್ಲಿಕಾರ್ಜುನ, ಡಾ. ಶ್ರೀಧರ್, ವಿಜಯಲಕ್ಷಿ ಹಿರೇಮಠ, ಪವನ್ ಉಪಸ್ಥಿತರಿದ್ದರು. ಕುಲಸಚಿವೆ ಪ್ರೊ. ಗಾಯತ್ರಿ ದೇವರಾಜ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು. ಡಾ. ಜಯರಾಮಯ್ಯ ವಂದಿಸಿದರು. ಡಾ. ಭೀಮಾಶಂಕರ ಜೋಶಿ ಕಾರ್ಯಕ್ರಮ ನಿರೂಪಿಸಿದರು.

Leave a Reply

Your email address will not be published. Required fields are marked *

error: Content is protected !!