ದಾವಣಗೆರೆ: ಉತ್ತರ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಎಸ್.ಎಸ್.ಮಲ್ಲಿಕಾರ್ಜುನ್ ಮಂಗಳವಾರ ಡಿಸಿಸಿ ಬ್ಯಾಂಕ್ ನಿರ್ದೇಶಕ, ಸಹಕಾರ ರತ್ನ ಪ್ರಶಸ್ತಿ ಪುರಸ್ಕೃತ ಷಣ್ಮುಖಪ್ಪ ಹಾಗೂ ಇತರೆ ಕಾಂಗ್ರೆಸ್ ಮುಖಂಡರೊಂದಿಗೆ ಕ್ಷೇತ್ರದ ಹಲವೆಡೆ ಬಿರುಸಿನ ಮತ ಪ್ರಚಾರ ನಡೆಸಿದರು.
ದೊಡ್ಡಬಾತಿ, ನೀಲಾನಹಳ್ಳಿ ಸೇರಿದಂತೆ ಉತ್ತರ ಕ್ಷೇತ್ರದ ಅನೇಕ ಗ್ರಾಮೀಣ ಪ್ರದೇಶಗಳಲ್ಲಿ ಸುಡುವ ಬಿಸಿಲನ್ನು ಲೆಕ್ಕಿಸದೇ ತಮ್ಮ ಅಪಾರ ಬೆಂಬಲಿಗರೊಂದಿಗೆ ಮತ ಯಾಚನೆ ಮಾಡಿದರು. ಈ ವೇಳೆ ಬಾತಿಯ ದರ್ಗಾ ಮತ್ತು ಚರ್ಚೆಗೆ ಭೇಟಿ ನೀಡಿ ಪ್ರಾರ್ಥನೆ ಸಲ್ಲಿಸಿದರು.
ದಾರಿಯೂದ್ದಕ್ಕೂ ಮೆರವಣಿಗೆ ನಡೆಸಿದ ಎಸ್‌ಎಸ್ ಮಲ್ಲಿಕಾರ್ಜುನ್‌ಗೆ ಸ್ಥಳೀಯರು ಅದ್ದೂರಿ ಸ್ವಾಗತ ಕೋರಿದರು. ಮಹಿಳೆಯರು ಆರತಿ ಎತ್ತುವ ಮೂಲಕ ಅವರಿಗೆ ಬೆಂಬಲ ಸೂಚಿಸಿದರು. ಮೆರವಣಿಗೆ ವೇಳೆ ಡೊಳ್ಳಿನ ನಾದ ಪ್ರಚಾರಕ್ಕೆ ಸಾಥ್ ನೀಡಿತ್ತು.
ಇನ್ನು ರಸ್ತೆಯ ಇಕ್ಕೆಲಗಳಲ್ಲಿ ಜನರು ಸಾಲಾಗಿ ನಿಂತು ಮಾಜಿ ಸಚಿವರಿಗೆ ಕೈ ಬೀಸಿದರು. ಊರಿನ ಮುಖಂಡರು, ಕಾಂಗ್ರೆಸ್ ಕಾರ್ಯಕರ್ತರು ಸೇರಿದಂತೆ ಹಲವರು ಮೆರವಣಿಗೆಗೆ ಸಾಥ್ ನೀಡಿದರು. ಕಾಂಗ್ರೆಸ್ ಬಾವುಟ, ಟೋಪಿ, ಶಾಲುಗಳನ್ನು ಹಾಕಿಕೊಂಡ ಕಾರ್ಯಕರ್ತರು ಮಾಜಿ ಸಚಿವರ ಜತೆ ಹೆಜ್ಜೆ ಹಾಕಿದರು.
ಇದೇ ಸಂದರ್ಭದಲ್ಲಿ ದೊಡ್ಡಬಾತಿಯ ಅಂಬೇಡ್ಕರ್ ಸಂಘದ ಯುವಕರು ಬೃಹತ್ ಹಾರ ಹಾಕುವ ಮೂಲಕ ಅವರನ್ನು ಸನ್ಮಾನಿಸಿದರು. ಸಹಕಾರ ಯೂನಿಯನ್ ಉಪಾಧ್ಯಕ್ಷ ಬೇತೂರು ರಾಜಣ್ಣ, ಮಾಗಾನಹಳ್ಳಿ ಪರಶುರಾಮ್, ಎಪಿಎಂಸಿ ಮಾಜಿ ಅಧ್ಯಕ್ಷ ಮುದೇಗೌಡರ ಗಿರೀಶ್, ಬೇತೂರು ಕರಿಬಸಪ್ಪ ಸೇರಿದಂತೆ ಕಾಂಗ್ರೆಸ್ ಪಕ್ಷದ ಅನೇಕ ಮುಖಂಡರು, ಕಾರ್ಯಕರ್ತರು ಉಪಸ್ಥಿತರಿದ್ದರು.
