ಲೋಕಲ್ ಸುದ್ದಿ

ದೆಹಲಿ ಸಿಎಂ ಅರವಿಂದ ಕೇಜ್ರಿವಾಲ್ ಮಾರ್ಚ್ ನಾಲ್ಕರಂದು ದಾವಣಗೆರೆಗೆ

ದಾವಣಗೆರೆ: ಆಮ್ ಆದ್ಮಿ ಪಾರ್ಟಿ ನಾಯಕ ಹಾಗೂ ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಅವರು ಮಾರ್ಚ್ 4ರ ಬೆಳಿಗ್ಗೆ 11 ಗಂಟೆಗೆ ನಗರದ ಹೈಸ್ಕೂಲ್ ಮೈದಾನದಲ್ಲಿ ನಡೆಯಲಿರುವ ಸಮಾವೇಶದಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದು ಪಕ್ಷದ ಪ್ರಚಾರ ಸಮಿತಿ ಅಧ್ಯಕ್ಷ ಮುಖ್ಯಮಂತ್ರಿ ಚಂದ್ರು ತಿಳಿಸಿದ್ದಾರೆ.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಸಮಾವೇಶದಲ್ಲಿ ಪಂಜಾಬ್ ಮುಖ್ಯಮಂತ್ರಿ ಭಗವಂತ್ ಮಾನ್ ಅವರು ಪಾಲ್ಗೊಳ್ಳಲಿದ್ದಾರೆ. ಪಕ್ಷದ 25 ಸಾವಿರ ಕಾರ್ಯಕರ್ತರಿಗೆ ಸಮಾವೇಶದಲ್ಲಿ ಪಕ್ಷ ಹಾಗೂ ರಾಜ್ಯಕ್ಕಾಗಿ ಕಾರ್ಯನಿರ್ವಹಿಸುವ ಪ್ರಮಾಣ ವಚನ ಬೋಧಿಸಲಾಗುವುದು ಎಂದು ಹೇಳಿದರು.

ಈ ಸಮಾವೇಶದ ಮೂಲಕ ರಾಜ್ಯದಲ್ಲಿ ಮುಂಬರುವ ವಿಧಾನಸಭಾ ಚುನಾವಣೆಯ ಪ್ರಚಾರಕ್ಕೆ ಚಾಲನೆ ನೀಡಲಾಗುವುದು. ರಾಜ್ಯದ ಎಲ್ಲಾ 224 ಕ್ಷೇತ್ರಗಳಲ್ಲಿ ಆಮ್ ಆದ್ಮಿ ಪಾರ್ಟಿ ಅಭ್ಯರ್ಥಿಗಳು ಕಣಕ್ಕಿಳಿಯಲಿದ್ದಾರೆ ಎಂದು ಹೇಳಿದರು.

ವಿಧಾನಸಭಾ ಚುನಾವಣೆಯಷ್ಟೇ ಅಲ್ಲದೇ, ಮುಂಬರುವ ತಾಲ್ಲೂಕು ಪಂಚಾಯ್ತಿ, ಜಿಲ್ಲಾ ಪಂಚಾಯ್ತಿ ಹಾಗೂ ಲೋಕಸಭಾ ಚುನಾವಣೆಗೂ ಸಮಾವೇಶ ನೆರವಾಗಲಿದೆ ಎಂದು ಹೇಳಿದರು.

ಇದುವರೆಗೂ ರಾಜ್ಯದಲ್ಲಿ ಆಡಳಿತ ನಡೆಸಿರುವ ಕಾಂಗ್ರೆಸ್, ಬಿಜೆಪಿ ಹಾಗೂ ಜೆಡಿಎಸ್‌ಗಳು ಜನರಿಗೆ ಸಮಪಾಲು ಸಮಬಾಳು ಕೊಟ್ಟಿಲ್ಲ. ರೈತರಿಗೆ ಅನುಕೂಲ ಮಾಡಿಕೊಟ್ಟಿಲ್ಲ. ಜನರಿಗೆ ಮೂಲಭೂತ ಸೌಲಭ್ಯ ಕಲ್ಪಿಸಿಲ್ಲ ಎಂದು ಹೇಳಿದರು.

ಈಗ ಚುನಾವಣೆ ಬಂದಿದೆ ಎಂದು ಆಮ್ ಆದ್ಮಿ ಪಾರ್ಟಿ ದೆಹಲಿ ಹಾಗೂ ಪಂಜಾಬ್‌ಗಳಲ್ಲಿ ಜಾರಿಗೆ ತಂದಿರುವ ಯೋಜನೆಗಳನ್ನು ಕಾಪಿ ಮಾಡುತ್ತಿವೆ. ಇವೇ ಯೋಜನೆಗಳನ್ನು ಇಷ್ಟು ದಿನ ಏಕೆ ಜಾರಿಗೆ ತರಲಿಲ್ಲ? ದೆಹಲಿಯಲ್ಲಿ ಜಾರಿಗೆ ತರಲಾಗಿರುವ ಯೋಜನೆಗಳನ್ನು ‘ರೇವಡಿ’ ಎಂದು ಪ್ರಧಾನ ಮಂತ್ರಿ ನರೇಂದ್ರ ಮೋದಿ ಲೇವಡಿ ಮಾಡಿದ್ದರು. ಈಗ ಅವರದೇ ಪಕ್ಷ ಉಚಿತ ಕೊಡುಗೆ ಕೊಡುತ್ತಿದೆ. ಈ ಬಗ್ಗೆ ಏಕೆ ಮೌನವಾಗಿದ್ದಾರೆ? ಎಂದು ಪ್ರಶ್ನಿಸಿದರು.

ರಾಜ್ಯ ಬಿಜೆಪಿ ಸರ್ಕಾರ ಒಂದೇ ದಿನದಲ್ಲಿ 6 ಸಾವಿರ ಕೋಟಿ ರೂ.ಗಳ ಗುತ್ತಿಗೆ ನೀಡಿದೆ. ಇದರಲ್ಲಿ ಎಷ್ಟು ಪರ್ಸೆಂಟ್ ಕಮೀಷನ್ ಆಗಿದೆ ಎಂದು ಪ್ರಶ್ನಿಸಿದ ಚಂದ್ರು, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನಿಶ್ಯಕ್ತರಾಗಿದ್ದಾರೆ. ಅವರನ್ನು ರಿಮೋಟ್ ಮೂಲಕ ನಡೆಸಲಾಗುತ್ತಿದೆ ಎಂದರು.

ಕಾಂಗ್ರೆಸ್ ಪಕ್ಷ ಸುದೀರ್ಘ ಆಡಳಿತ ನಡೆಸಿದರೂ ಜನರಿಗೆ ಸೌಲಭ್ಯಗಳನ್ನು ನೀಡಲಿಲ್ಲ. ಬಿಜೆಪಿ ಧಾರ್ಮಿಕ ವಿಷಯಗಳನ್ನು ಮುಂದಿಟ್ಟುಕೊಂಡು ಭ್ರಷ್ಟಾಚಾರದಲ್ಲಿ ತೊಡಗಿದೆ. ಜೆಡಿಎಸ್‌ನಲ್ಲಂತೂ ದೇವೇಗೌಡರ ಕುಟುಂಬದ 25 ತುಂಬಿದ ಎಲ್ಲರಿಗೂ ವಿಧಾನಸಭೆಗೆ ಹೋಗಬೇಕೆಂಬ ತವಕ ಇದೆ. ಇದಾ ಪ್ರಜಾಪ್ರಭುತ್ವ? ಎಂದು ಪ್ರಶ್ನಿಸಿದರು.

ಜನರಲ್ಲಿ ಈ ಮೂರೂ ‘ಜೆ.ಸಿ.ಬಿ.’ ಪಕ್ಷಗಳ ಬಗ್ಗೆ ಅಸಹನೆ ಇದೆ. ಮುಂಬರುವ ಚುನಾವಣೆಯಲ್ಲಿ ಆಮ್ ಆದ್ಮಿ ಪಾರ್ಟಿ ಗಣನೀಯ ಸ್ಥಾನಗಳನ್ನು ಗೆಲ್ಲಲಿದೆ. ದೆಹಲಿ ಹಾಗೂ ಪಂಜಾಬ್ ರೀತಿಯ ಫಲಿತಾಶ ಬರಬಹುದು ಎಂದವರು ಹೇಳಿದರು.

ಪತ್ರಿಕಾಗೋಷ್ಠಿಯಲ್ಲಿ ಆಮ್ ಆದ್ಮಿ ಪಾರ್ಟಿ ಮುಖಂಡರಾದ ರುದ್ರಯ್ಯ ನವಲಿ ಹಿರೇಮಠ್, ಗುರುಮೂರ್ತಿ, ಚಂದ್ರು ಬಸವಂತಪ್ಪ, ಮಂಜುನಾಥ್, ಗಣೇಶ್ ದುರ್ಗದ್, ಗೋವಿಂದ್ ರಾಜ್, ಧರ್ಮಾನಾಯ್ಕ, ರಾಜಶೇಖರ್, ಜಯಣ್ಣ, ಅರುಣ್ ಕುಮಾರ್, ಆದಿಲ್ ಖಾನ್, ರವೀಂದ್ರ, ಮಲ್ಲಿನಾಥ್, ಶ್ರೀಧರ ಪಾಟೀಲ್ ಮತ್ತಿತರರು ಉಪಸ್ಥಿತರಿದ್ದರು.

Click to comment

Leave a Reply

Your email address will not be published. Required fields are marked *

Most Popular

To Top
error: Content is protected !!