ಕೆ ಎಸ್ ಆರ್ ಟಿ ಸಿ ಬಸ್ ನಿಲ್ದಾಣಕ್ಕೆ ಪಂಪಾಪತಿ ನಾಮಕರಣ ಮಾಡಲು ಒತ್ತಾಯ

ದಾವಣಗೆರೆ : ನಗರದಲ್ಲಿ ನೂತನವಾಗಿ ನಿರ್ಮಿಸಿರುವ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಬಸ್ಸು ನಿಲ್ದಾಣಕ್ಕೆ ಕಾರ್ಮಿಕ ಮುಖಂಡ ಎಂ.ಪಂಪಾಪತಿ ಅವರ ಹೆಸರನ್ನು ನಾಮಕರಣ ಮಾಡಲು ಒತ್ತಾಯಿಸಿ ಭಾರತೀಯ ಕಮ್ಯೂನಿಷ್ಟ ಪಕ್ಷ, ದಾವಣಗೆರೆ ಜಿಲ್ಲಾ ಸಮಿತಿಯ ಪದಾಧಿಕಾರಿಗಳು ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಿದರು.
ಜಿಲ್ಲಾಡಳಿತ ಭವನದ ಅಪರ ಜಿಲ್ಲಾಧಿಕಾರಿಗಳನ್ನು ಭೇಟಿ ಮಾಡಿದ ನಿಯೋಗವು ಮನವಿ ಸಲ್ಲಿಸಿ, ಕಾರ್ಮಿಕ ಮುಖಂಡರಾದ ಪಂಪಾಪತಿ ಅವರು ಶಾಸಕರಾದ ಸಂದರ್ಭದಲ್ಲಿ ಪ್ರಸ್ತುತ ನೂತನವಾಗಿ ನಿರ್ಮಾಣವಾಗಿರುವ ಬಸ್ ನಿಲ್ದಾಣ ಮಂಜೂತಾತಿ ಪಡೆದು ನಿರ್ಮಾಣವಾಗಿತ್ತು ಎಂಬುದು ಸ್ಮರಣೀಯ. ದಾವಣಗೆರೆಯಲ್ಲಿ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ ಸ್ವಂತ ಡಿಪೋ ಇಲ್ಲದ ಕಾಲದಲ್ಲಿ ತಮ್ಮ ಅವಿರತ ಹೋರಾಟದಿಂದ ಡಿಪೋ ಮಂಜೂರಾತಿಗೆ ಪ್ರಯತ್ನ ನಡೆಸಿ, ಅವರ ಕಾಲದಲ್ಲೇ ಬಸ್ ನಿಲ್ದಾಣ ನಿರ್ಮಾಣ ಆಯಿತು. ಕಾರಣ ಇದೀಗ ನೂತನವಾಗಿ ನವೀಕರಣಗೊಳ್ಳುತ್ತಿರುವ ಬಸ್‌ನಿಲ್ದಾಣಕ್ಕೆ ಪಂಪಾಪತಿ ಹೆಸರಿಡಬೇಕೆಂದು ಆಗ್ರಹಿಸಿದರು.
ದಾವಣಗೆರೆ ನಗರದ ಪ್ರಗತಿಗೆ ತಕ್ಕಂತೆ ನಗರ ಸಾರಿಗೆ, ಉತ್ತಮ ಬಸ್ ನಿಲ್ದಾಣಕ್ಕಾಗಿ ಅಮರಣ ಉಪವಾಸ ಸತ್ಯಗ್ರಹ ನಡೆಸಿ ಕೊನೆಗೆ ಕೆ ಎಸ್ ಆರ್ ಟಿ ಸಿ ಬಸ್‌ನಿಲ್ದಾಣ, ನಗರ ಸಾರಿಗೆ ಒದಗಿಸಲು ಪಂಪಾಪತಿ ಅವರ ಅವಿರತ ಶ್ರಮ ಯಾರೂ ಮರೆಯುವಂತಿಲ್ಲ. ಕಾರಣ ಅವರ ಹೆಸರನ್ನು ನೂತನವಾಗಿ ನಿರ್ಮಾಣ ಆಗುತ್ತಿರುವ ಬಸ್ ನಿಲ್ದಾಣಕ್ಕೆ ನಾಮಕರಣ ಮಾಡಬೇಕಾಗಿದೆ. ಈ ಕುರಿತು ಪಾಲಿಕೆಯಲ್ಲಿ ನಿರ್ಣಯ ಕೈಗೊಂಡು,ಸರ್ಕಾರಕ್ಕೆ ಶಿಫಾರಸ್ಸು ಮಾಡಬೇಕೆಂದು ಆಗ್ರಹಿಸಿದರು.