ಕಾಂಗ್ರೆಸ್ನಂತಹ ಗುಜರಿ ಇಂಜಿನ್ನಿಂದ ಅಭಿವೃದ್ದಿ ಅಸಾಧ್ಯ: ಪ್ರಧಾನಿ ಮೋದಿ
ಬೆಂಗಳೂರು: ಕಾಂಗ್ರೆಸ್ನಂತಹ ಗುಜರಿ ಇಂಜಿನ್ನಿಂದ ಅಭಿವೃದ್ದಿಯಾಗುವುದಿಲ್ಲ. ಕೇಂದ್ರದಲ್ಲಿರುವ ಪ್ರಬಲವಾದ ಬಿಜೆಪಿ ಇಂಜಿನ್ ತರಹ ಕರ್ನಾಟಕದಲ್ಲೂ ಗಟ್ಟಿಯಾದ ಇಂಜಿನ್ ಅಧಿಕಾರಕ್ಕೆ ಬಂದಾಗ ಮಾತ್ರ ಅಭಿವೃದ್ಧಿ ಸಾಧ್ಯ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.
ಕರ್ನಾಟಕವನ್ನು ನಂ.1 ರಾಜ್ಯವಾಗಿ ಮಾಡುವುದು ನಮ್ಮ ಉದ್ದೇಶವಾಗಿದೆ. ಡಬಲ್ ಇಂಜಿನ್ ಸರ್ಕಾರವಿದ್ದರೇ ಸಾಕಷ್ಟು ಅಭಿವೃದ್ದಿಯಾಗುತ್ತದೆ ಎಂದರು.
ಚಿನ್ನದ ನಾಡು ಕೋಲಾರಕ್ಕೆ ಭೇಟಿ ನೀಡಿರುವ ಅವರು, ಬಿಜೆಪಿ ಸಮಾವೇಶದಲ್ಲಿ ರಾಜ್ಯದ ಜನತೆಯನ್ನುದ್ದೇಶಿಸಿ ಭಾಷಣ ಮಾಡಿದರು.
ಡಬಲ್ ಇಂಜಿನ್ ಸರ್ಕಾರದ ಮೂಲಕ ಕೋಲಾರಕ್ಕೆ ಅನೇಕ ಕೈಗಾರಿಕೆಗಳು ಬರುತ್ತಿವೆ. ಮುಳಬಾಗಿಲಿನ ದೋಸೆ ಸಾಕಷ್ಟು ಪ್ರಸಿದ್ಧಿ ಪಡೆದಿದೆ. ಕಾಂಗ್ರೆಸ್ನ ಸುಳ್ಳು ಗ್ಯಾರೆಂಟಿ ಯೋಜನೆ ಜಾರಿಗೆ ಬರುವುದಿಲ್ಲ. 2005 ರಿಂದ 2014ರವರೆಗೂ 10 ವರ್ಷ ಸುಳ್ಳು ಆಶ್ವಾಸನೆಗಳನ್ನು ನೀಡಿದೆ. ಕಾಂಗ್ರೆಸ್ ದೇಶದ 18 ಸಾವಿರ ಹಳ್ಳಿಗಳಿಗೆ ವಿದ್ಯುತ್ ನೀಡುತ್ತೇವೆ ಎಂದು ಆಶ್ವಾಸನೆ ನೀಡಿತ್ತು. ಆದರೆ, ಅನೇಕ ಹಳ್ಳಿಗಳು ವಿದ್ಯುತ್ ಇಲ್ಲದೆ ಕತ್ತಲಿನಲ್ಲಿ ಕಾಲ ಕಳೆದವು. ಕಾಂಗ್ರೆಸ್ ದೇಶದ ಜನಕ್ಕೆ ಮೋಸ ಮಾಡಿದೆ. ನಂತರ ನಾವು ಸಾವಿರ ದಿನಗಳಲ್ಲಿ 18 ಸಾವಿರ ಹಳ್ಳಿಗಳಿಗೆ ವಿದ್ಯುತ್ ಪೂರೈಸಿದ್ದೆವು ಎಂದರು.
2004ರಲ್ಲಿ ಹೊರಡಿಸಿದ ಪ್ರಣಾಳಿಕೆಯಂತೆ ಕಾಂಗ್ರೆಸ್ ನಡೆಯಲಿಲ್ಲ. ಭರವಸೆಗಳನ್ನು ಈಡೇರಿಸಲಿಲ್ಲ. ಜನರಿಗೆ ಮೋಸ ಮಾಡಿತು. ಆದರೆ, ನಾವು ಅಧಿಕಾರಕ್ಕೆ ಬಂದ ಮೇಲೆ ಕಿಸಾನ್ ಸಮ್ಮಾನ್ ಯೋಜನೆ ಜಾರಿಗೆ ತಂದೆವು. ಇದರಿಂದ ಅನೇಕ ರೈತರಿಗೆ ಅನುಕೂಲವಾಗಿದೆ. ಕಾಂಗ್ರೆಸ್ ಎಂದಿಗೂ ರೈತರ ಬಗ್ಗೆ ಆಲೋಚಿಸಲಿಲ್ಲ. ನಾವು ರೈತರು ಬಿತ್ತುವ ಬೀಜದಿಂದ ವ್ಯಾಪಾರದವರೆಗೆ ಚಿಂತನೆ ನಡೆಸಿದ್ದೇವೆ. ಪಿಎಂ ಕಿಸಾನ್ ಸಮ್ಮಾನ ಯೋಜನೆ ಮೂಲಕ ರೈತರ ಖಾತೆಗೆ ನೇರವಾಗಿ ಹಣ ತಲುಪಿಸುತ್ತಿದ್ದೇವೆ ಎಂದರು.