Dhuda Application: ದೂಡಾ ನಿವೇಶನ ಅರ್ಜಿ| ಮಧ್ಯವರ್ತಿಗಳ ವಿರುದ್ದ ದೂರು ದಾಖಲಿಸಿದ ಪ್ರಾಧಿಕಾರ: ಇಲಾಖೆಯ ಮಧ್ಯವರ್ತಿಗಳು ಯಾರು.?
ದಾವಣಗೆರೆ: ದಾವಣಗೆರೆ- ಹರಿಹರ ನಗರಾಭಿವೃದ್ಧಿ ಪ್ರಾಧಿಕಾರದಿಂದ ನಿವೇಶನ ಬೇಡಿಕೆ ಸಮೀಕ್ಷೆಗೆ ವಸತಿರಹಿತರಿಂದ ಅರ್ಜಿ ಆಹ್ವಾನಿಸಿದ್ದು, ಮಧ್ಯವರ್ತಿಗಳು ಜನರಿಂದ ಅರ್ಜಿ ಹಾಕಲಿಕ್ಕೆ ಸಾವಿರಾರು ರೂಪಾಯಿ ಹಣ ವಸೂಲಿ ಮಾಡುತ್ತಿದ್ದಾರೆ ಎಂದು ಪ್ರಾಧಿಕಾರದ ವ್ಯವಸ್ಥಾಪಕರು ಆರೋಪಿಸಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗೆ ದೂರು ಸಲ್ಲಿಸಿದ್ದಾರೆ.
ದೂಡಾದಿಂದ ಕುಂದುವಾಡ ಬಳಿ ಹೊಸ ಬಡಾವಣೆ ಮಾಡುತ್ತಿದ್ದು ನಿವೇಶನ ಬೇಡಿಕೆ ಸಮೀಕ್ಷೆಗೆ ವಸತಿರಹಿತರಿಂದ ಅರ್ಜಿ ಕಳೆದ ತಿಂಗಳಿಂದ ಸೆ.4 ರವರೆಗೆ ಅರ್ಜಿ ಹಾಕಲು ಆಹ್ವಾನಿಸಲಾಗಿತ್ತು. ಆದರೆ, ಜನಜಾತ್ರೆಯಂತೆ ಸೇರುತ್ತಿತ್ತು. ವಸತಿ ರಹಿತರಿಗೆ ಈ ರಾಶಿ ಜನರ ಮಧ್ಯೆ ಅರ್ಜಿ ಹಾಕಲು ಸಾಧ್ಯವಾಗದೆ ಬಹಳಷ್ಟು ಜನರು ನಿವೇಶನದ ಸಹವಾಸವೇ ಬೇಡ ಎಂದು ಹಿಂತಿರುಗುತ್ತಿದ್ದರು.
ಆದರೆ, ಇದನ್ನೇ ಬಂಡವಾಳ ಮಾಡಿಕೊಂಡ ದಲ್ಲಾಳಿಗಳು 20*30 ಅಡಿ ನಿವೇಶನಕ್ಕೆ 3,000, 30*40 ಅಡಿಗೆ 3,500, 30*50 ಅಡಿಗೆ 4,000, 40*60 ಕ್ಕೆ 4,300 ಹಾಗೂ 50*80 ಕ್ಕೆ 5,000 ದಂತೆ ಹಣ ಲೂಟಿ ಮಾಡುತ್ತಿದ್ದಾರೆ. ದೂಡಾದಿಂದ 300, 500, 1000 ಮತ್ತು 1500 ರೂ., ಆಯಾ ಗಾತ್ರದ ಮೇಲೆ ಹಣ ನಿಗಧಿ ಪಡಿಸಲಾಗಿದೆ. ಆಡೀಯೋ ಮೂಲಕ ಜನರಿಗೆ ದಲ್ಲಾಳಿಗಳು ಮೋಸ ಮಾಡುತ್ತಿರುವ ಬಗ್ಗೆ ತಿಳಿದು ಬಂದಿದೆ ಎಂದು ಅವರು ದೂರಿನಲ್ಲಿ ತಿಳಿಸಿದ್ದಾರೆ.
ಆದರೆ, ಮೊದಲೇ ದೂಡಾ ಈ ಬಗ್ಗೆ ಜನರಿಗೆ ಜಾಗೃತಿ ಮೂಡಿಸಬೇಕಿತ್ತು. ಅದೇ ಆವರಣದಲ್ಲಿ ನಡೆಯುವ ಇಂತಹ ನೌಟಂಕಿ ದಲ್ಲಾಳಿಗಳ ಬಗ್ಗೆ ಅವರಿಗೆ ಗೊತ್ತಿಲ್ಲ ಎಂದರೆ ಜನರಾದರೂ ಈ ಅಧಿಕಾರಿಗಳ ಮಾತನ್ನು ಒಪ್ಪುತ್ತಾರೆಯೇ ಎಂಬ ಪ್ರಶ್ನೆ ಇಲ್ಲಿ ಪ್ರಸ್ತುತ.