Dhuda Site: ದುಡಾ ನಿವೇಶನ ಅರ್ಜಿಗೆ ಮಧ್ಯವರ್ತಿಗಳ ಹಾವಳಿ| ಅರ್ಜಿಗೆ 3 ರಿಂದ 5 ಸಾವಿರವಂತೆ.!

IMG-20210904-WA0004

 

ದಾವಣಗೆರೆ: ಸ್ವಂತಕ್ಕೊಂದು ಸೂರು ಇರಬೇಕೆನ್ನುವ ಆಸೆ ಯಾರಿಗಿಲ್ಲ ಹೇಳಿ? ಅದರಲ್ಲೂ ಬಾಡಿಗೆ ಕಟ್ಟಿ ಜೀವನ ಸಾಗಿಸುವ ಬಡ ಮಧ್ಯಮ ವರ್ಗದವರಿಗೆ ಸ್ವಂತಕ್ಕೊಂದು ಸೂರಿದ್ದರೆ ಅದಕ್ಕಿಂತ ಅವರಿಗೆ ಬೇರಿನ್ನೇನು ಬೇಡ. ಹಾಗಾಗಿ, ವಸತಿ ನಿರ್ಮಿಸಿಕೊಳ್ಳಲಿಕ್ಕೆ ಬೇಕಾದ ಎಲ್ಲಾ ಕಸರತ್ತನ್ನು ಅವರು ಮಾಡುತ್ತಾರೆ.

ಆದರೆ, ಇಂದಿನ ದುಬಾರಿ ಜೀವನದಲ್ಲಿ ಸ್ವಂತದ ಸೂರು ಕಲ್ಪಿಸಿಕೊಳ್ಳುವುದೇ ಒಂದು ಬಹುದೊಡ್ಡ ಸವಾಲಾಗಿದೆ. ಎರಡ್ಮೂರು ಸಾವಿರಕ್ಕಿಂತ ಅಧಿಕ ಬೆಲೆಗೆ ಒಂದು ಚದರಡಿ ಜಾಗ ಮಾರಾಟವಾಗುತ್ತಿದ್ದು, ಕನಿಷ್ಟ 20*30 ಅಡಿ ನಿವೇಶನ ಕೊಳ್ಳಲು ಕನಿಷ್ಟವೆಂದರೂ 25 ಲಕ್ಷ ಹಣ ತೆರಬೇಕಿದೆ. ಇಷ್ಟು ಹಣ ಹೊಂದಿಸಲು ಅವರು ಜೀವನ ಪರ್ಯಂತ ಹಗಲು-ರಾತ್ರಿ ಎನ್ನದೇ ದುಡಿಯಬೇಕಿರುತ್ತದೆ‌. ಇಂತಹ ಹೊತ್ತಲ್ಲಿ ಅತ್ಯಂತ ಕಡಿಮೆ ಬೆಲೆಗೆ ಸೈಟು ಸಿಗುತ್ತದೆ ಎಂದರೆ ಕೊಂಡುಕೊಳ್ಳಲು ಮುಗಿಬೀಳದೆ ಮತ್ತಿನ್ನೇನು ಮಾಡಲು ಸಾಧ್ಯ?

ಇಂತಹ ಬಡ ಜನರ ಆಕಾಂಕ್ಷೆಯನ್ನೇ ಕೆಲ ಮಧ್ಯವರ್ತಿಗಳು ಬಂಡವಾಳ ಮಾಡಿಕೊಳ್ಳಲು ಹೊರಟಿದ್ದಾರೆ. ಕಳೆದ ತಿಂಗಳಷ್ಟೇ ದೂಡಾ ಇಂದು ಸೆ.4 ರವರೆಗೆ ನಿವೇಶನ ಬೇಡಿಕೆ ಸಮೀಕ್ಷೆಗೆ ಅರ್ಜಿ ಆಹ್ವಾನಿಸಿತ್ತು. ಇದನ್ನು ಬಂಡವಾಳ ಮಾಡಿಕೊಂಡಿರುವ ಕೆಲ ದಳ್ಳಾಳಿಗಳು ದೂಡಾದ ಅಧಿಕಾರಿ ವರ್ಗದವರ ಜತೆ ಸೇರಿ ಬಡ ಜನರ ಹಣವನ್ನ ಲೂಟಿ ಹೊಡೆಯಲು ಮುಂದಾಗಿದ್ದಾರೆ.

ದಾವಣಗೆರೆ-ಹರಿಹರ ನಗರಾಭಿವೃದ್ಧಿ ಪ್ರಾಧಿಕಾರದಿಂದ ಕರೆದಿರುವ ನಿವೇಶನಕ್ಕೆ ಅರ್ಜಿ ಸಲ್ಲಿಸಲು ಜನರು ಬೆಳಿಗ್ಗೆಯಿಂದ ಸಂಜೆಯವರೆಗೆ ಸಾಲುಗಟ್ಟಿ ನಿಂತು ಅರ್ಜಿ ಸಲ್ಲಿಸುತ್ತಿದ್ದಾರೆ. ಕೆಲವರಿಗೆ ಸಮಯದ ಕೊರತೆ, ಕಚೇರಿಗಳಲ್ಲಿ‌ ರಜೆ ಸಿಗದ ಕಾರಣ ಅವರಿಗೆ ದಲ್ಲಾಳಿಗಳ ಮೊರೆ ಹೋಗಬೇಕಾದ ಅನಿವಾರ್ಯತೆ ಇದೆ. ಜನರ ಅನಿವಾರ್ಯತೆಯನ್ನ ಇವರು ಸುಲಿಗೆ ಮಾಡಲು ಹೊರಟಿದ್ದಾರೆ ಈ ಕಿರಾತಕರು‌.

ಈಗ ಮಧ್ಯವರ್ತಿಯೊಬ್ಬ ಅರ್ಜಿದಾರನ ಜತೆಗೆ ಮಾತಾಡಿ ವ್ಯವಹಾರ ಕುದುರಿಸಿರುವ ಆಡೀಯೋವೊಂದು ಫುಲ್ ವೈರಲ್ ಆಗಿದ್ದು, ಆ ಮೂಲಕ ದೂಡಾದ ಕರ್ಮಕಾಂಡ ಹೊರಬಿದ್ದಿದೆ.

ಜನರು ದೂಡಾಕ್ಕೆ ಛೀಮಾರಿ ಹಾಕುತ್ತಿದ್ದಾರೆ. 20*30, 30*40, 30*50 ಹೀಗೆ ಇಂತಿಷ್ಟು ಅಡಿ ನಿವೇಷನಕ್ಕೆ ಇಷ್ಟು ಹಣ ನೀಡಬೇಕೆಂದು ದಲ್ಲಾಳಿಯೊಬ್ಬ ವ್ಯಕ್ತಿಯ ಜತೆಗೆ ಮಾತಾಡಿದ್ದಾನೆ.

ಒಂದು ಅರ್ಜಿ ಸಲ್ಲಿಕೆಗೆ 3,500 ಸಾವಿರದಿಂದ 5 ಸಾವಿರದವರೆಗೆ ಹಣ ನೀಡುವಂತೆ ಬೇಡಿಕೆ ಇಟ್ಟಿದ್ದಾನೆ. ಇದರಲ್ಲಿ ಅಧಿಕಾರಿಗಳಿಗೆ ಪಾಲು ನೀಡಬೇಕಿರುವುದಾಗಿಯೂ ಆತ ಹೇಳಿದ್ದಾನೆ.

ಸರ್ಕಾರಿ ನೌಕರಿಯಲ್ಲಿದ್ದು ಕೈತುಂಬಾ ಸಂಬಳ ಪಡೆದರೂ ಈ ಅಧಿಕಾರಿ ವರ್ಗದವರು ಜನರ ಹಣವನ್ನು ಲೂಟಿ ಹೊಡೆಯುವುದನ್ನು ಮಾತ್ರ ನಿಲ್ಲಿಸುತ್ತಿಲ್ಲ. ಜನರಿಂದ ಛೀಮಾರಿ ಹಾಕಿಸಿಕೊಳ್ಳುತ್ತಿರುವುದು ಇವರಿಗೆ ತಪ್ಪುತ್ತಿಲ್ಲ.

ಕೂಡಲೇ ದೂಡಾದಲ್ಲಿ ಮಧ್ಯವರ್ತಿಗಳ ಹಾವಳಿ ತಪ್ಪಿಸಿ ಜನರ ಹಣವನ್ನು ದಲ್ಲಾಳಿಗಳ ಮೂಲಕ ಲೂಟಿ ಹೊಡೆಯುತ್ತಿರುವ ಅಧಿಕಾರಿ ವರ್ಗಕ್ಕೆ ಸರ್ಕಾರ ಬಿಸಿ ಮುಟ್ಟಿಸಬೇಕಿದೆ.

Leave a Reply

Your email address will not be published. Required fields are marked *

error: Content is protected !!