ಮೃತ ಗಂಡ ಬ್ಯಾಂಕ್‌ನಲ್ಲಿದ್ದ ಹಣ ವಿತ್‌ಡ್ರಾ ಮಾಡಿದ್ನಾ?
ಮೈಸೂರು: ವ್ಯಕ್ತಿಯೊಬ್ಬ ಮೃತಪಟ್ಟು ತಿಂಗಳುಗಳೇ ಉರುಳಿದವು ಆದರೂ ಅವರ ಖಾತೆಯಿಂದ ಹಣ ವಿತ್‌ಡ್ರಾ ಆಗುತ್ತಲೇ ಇತ್ತು.. ಪೊಲೀಸ್ ಇಲಾಖೆಗೆ ದೂರು ದಾಖಲಿಸಿದ ಮೇಲೆ ಅಸಲಿಯತ್ತು ಬೆಳಕಿಗೆ ಬಂತು. ಹೌದು, ಮೃತ ವ್ಯಕ್ತಿಯ ಹೆಸರಿನಲ್ಲಿ ನಕಲಿ ದಾಖಲೆ ಸೃಷ್ಟಿಸಿ ಬ್ಯಾಂಕ್ ಅಧಿಕಾರಿಗಳೇ 1.80 ಲಕ್ಷ ರೂ. ಕನ್ನ ಹಾಕಿರುವ ಘಟನೆ ಇಲ್ಲಿನ ಎಚ್.ಡಿ. ಕೋಟೆ ತಾಲೂಕಿನ ಎನ್. ಬೇಗೂರು ಕೃಷಿ ಪತ್ತಿನ ಸಹಕಾರ ಸಂಘದಲ್ಲಿ ನಡೆದಿದೆ. ಕೃಷಿಕ ಚಿಕ್ಕಬೊಮ್ಮ ಸತ್ತು ನಾಲ್ಕೂವರೆ ತಿಂಗಳಾಗಿತ್ತು. ಆದರೆ ಅವರ ಹೆಸರಿನಲ್ಲಿ ಬ್ಯಾಂಕಿಗೆ ವಿತ್‌ಡ್ರಾ ಅರ್ಜಿ ಬಂದಿತ್ತು. ನಂತರ 1.80 ಲಕ್ಷ ರೂಪಾಯಿಗಳನ್ನು ವಿತ್‌ಡ್ರಾ ಮಾಡಲಾಗಿತ್ತು. ಪತಿ ಸತ್ತು ನಾಲ್ಕು ತಿಂಗಳ ಬಳಿಕ ಹಣ ವಿತ್‌ಡ್ರಾ ಆಗಿದ್ದನ್ನು ಕಂಡು ಅವರ ಪತ್ನಿ ಕಂಗಾಲಾಗಿದ್ದಾರೆ. ಇದು ಹೇಗೆ ಸಾಧ್ಯ ಎಂದು ಅವರು ದೂರು ದಾಖಲು ಮಾಡಿದಾಗ ಪ್ರಕರಣ ಬೆಳಕಿಗೆ ಬಂದಿದೆ.
ಎಚ್.ಡಿ. ಕೋಟೆ ತಾಲೂಕಿನ ಎನ್. ಬೇಗೂರು ಕೃಷಿ ಪತ್ತಿನ ಸಹಕಾರ ಸಂಘದ ಸಿಇಒ ಪ್ರೇಮ್ ಕುಮಾರ್ ಈ ರೀತಿಯ ಸುಳ್ಳು ದಾಖಲಿ ಸೃಷ್ಟಿ ಮಾಡಿ ವಂಚನೆ ಮಾಡಿದ್ದಾರೆ. ಈ ವಿಷಯ ಬೆಳಕಿಗೆ ಬಂದು ಅವರ ವಿರುದ್ಧ ಎಫ್‌ಐಆರ್ ದಾಖಲಾಗಿದೆ. ದೊಣ್ಣೆಮಾದನ ಹಾಡಿಯ ಬೆಟ್ಟ ಕುರುಬ ಸಮುದಾಯದ ಚಿಕ್ಕಬೊಮ್ಮ ಕುಟುಂಬಕ್ಕೆ ವಂಚನೆಗೆ ಸಂಬಂಧಿಸಿದಂತೆ ಇವರ ವಿರುದ್ಧ ಈಗ ತನಿಖೆ ಶುರುವಾಗಿದೆ. ಎಚ್.ಡಿ. ಕೋಟೆ ತಾಲೂಕಿನ ಎಂಡಿಸಿಸಿ ಬ್ಯಾಂಕ್ ಅಕೌಂಟ್ನಿಂದ ಈ ಹಣವನ್ನು ವಿತ್‌ಡ್ರಾ ಮಾಡಿಕೊಳ್ಳಲಾಗಿದೆ. ಹೊಸಹಳ್ಳಿ ಸರ್ವೇ ನಂ. 48/157ರಲ್ಲಿ ಮೂರು ಎಕರೆ ಜಮೀನಿಗೆ ಸಂಬಂಧಿಸಿದಂತೆ ನಾಲ್ಕೂವರೆ ತಿಂಗಳ ಬಳಿಕ ಮೃತ ಆದಿವಾಸಿಯ ಹೆಸರಲ್ಲಿ ಹಣ ಡ್ರಾ ಮಾಡಲಾಗಿದೆ. ತನಿಖೆ ಮುಂದುವರೆದಿದೆ.