ಚಡ್ಡಿಯಲ್ಲಿ ಹಾವು, ಹಲ್ಲಿ ಇಟ್ಟುಕೊಂಡ ಭೂಪ ಅಧಿಕಾರಿಗಳ ಕೈಗೆ ಸಿಕ್ಕಿಬಿದ್ದಿದ್ದೇಗೆ ಗೊತ್ತಾ?
ಬೆಂಗಳೂರು : ಒಂದು ದೇಶದಿಂದ ಮತ್ತೊಂದು ದೇಶಕ್ಕೆ ಯಾವುದಾದರೂ ವಸ್ತುವನ್ನು ಕಳ್ಳ ಸಾಗಾಣಿಕೆ ಮೂಲಕ ಸಾಗಿಸುವುದು ನಾವು ಕೇಳಿದ್ದೇವೆ ಮತ್ತು ನೋಡಿದ್ದೇವೆ. ಆಯಾ ದೇಶಗಳು ಕಳ್ಳ ಸಾಗಾಣಿಕೆ ತಡೆಗಟ್ಟಲು ಎಷ್ಟೇ ಪ್ರಯತ್ನಪಟ್ಟರೂ ಕಳ್ಳಸಾಗಾಣಿಕೆದಾರರು ವಿಭಿನ್ನ ರೀತಿಯಲ್ಲಿ ಪ್ರಯತ್ನಿಸುತ್ತಲೇ ಇರುತ್ತಾರೆ. ಹೊಸ ಮಾರ್ಗದ ಮೂಲಕ ಕಳ್ಳ ಸಾಗಾಣಿಕೆ ಮಾಡುತ್ತಲೇ ಇರುತ್ತಾರೆ. ಸಾಮಾನ್ಯವಾಗಿ ಹಣ, ಮಾದಕ ವಸ್ತುಗಳು, ಪ್ರಾಣಿಗಳು, ಪ್ರಾಣಿಗಳ ಚರ್ಮ ಮತ್ತು ಇತರ ಅತ್ಯಂತ ಬೆಲೆ ಬಾಳುವ ವಸ್ತುಗಳು ಕಳ್ಳ ಸಾಗಾಣಿಕೆ ಮಾಡಲ್ಪಡುವುದು ಸರ್ವೇಸಾಮಾನ್ಯ. ಆದರೆ ಕೆಲವೊಮ್ಮೆ ಕಳ್ಳ ಸಾಗಾಣಿಕೆ ಮಾಡಲ್ಪಟ್ಟ ವಸ್ತುಗಳು ಮತ್ತು ಕಳ್ಳಸಾಗಾಣಿಕೆ ಆಯ್ಕೆ ಮಾಡಿಕೊಂಡ ಉಪಾಯಗಳು ನೋಡುಗರ ಮತ್ತು ಕೇಳುಗರ ಕೂತೂಹಲ ಕೆರಳಿಸುವುದುಂಟು, ಒಮ್ಮೊಮ್ಮೆ ಬೆಚ್ಚಿ ಬೀಳಿಸುವುದುಂಟು.
ಗುದದ್ವಾರದೊಳಗೆ ಚಿನ್ನ ಅಡಗಿಸಿಟ್ಟುಕೊಂಡು ಬರುವುದು, ಧರಿಸಿದ ವಸ್ತçದಲ್ಲಿ ವಜ್ರಗಳನ್ನು ಅಡಕ ಮಾಡಿಸಿ ಪ್ರಯಾಣಿಸುವುದು ಇತ್ಯಾದಿ ನೋಡುಗರ ಹುಬ್ಬೇರುವಂತೆ ಮಾಡುತ್ತದೆ. ಇಂತದ್ದೇ ವಿಚಿತ್ರವಾದ ಕಳ್ಳ ಸಾಗಾಣಿಕೆಯ ಪ್ರಯತ್ನವೊಂದು ಇತ್ತೀಚೆಗೆ ಯುಎಸ್‌ನಲ್ಲಿ ನಡೆದಿದೆ. ಅದೇನೆಂದರೆ, ವ್ಯಕ್ತಿಯೊಬ್ಬ 52 ಜೀವಂತ ಸರಿಸೃಪಗಳನ್ನು ಬಚ್ಚಿಟ್ಟುಕೊಂಡು ದೇಶವನ್ನು ಪ್ರವೇಶಿಸಲು ಪ್ರಯತ್ನಿಸಿ, ಗಡಿ ಅಧಿಕಾರಿಗಳ ಕೈಗೆ ಸಿಕ್ಕಿ ಬಿದ್ದಿದ್ದಾನೆ. ಆ ವ್ಯಕ್ತಿ ಫೆಬ್ರವರಿ 25 ರಂದು, ಮೆಕ್ಸಿಕೋದೊಂದಿಗಿನ ಸ್ಯಾನ್ ಯಿಸಿಡ್ರೋ ಗಡಿ ದಾಟಲು ಪ್ರಯತ್ನಿಸಿದ್ದ ಎಂದು ಯುಎಸ್ ಕಸ್ಟಮ್ ಮತ್ತು ಗಡಿ ಭದ್ರತಾ ಅಧಿಕಾರಿಗಳು ತಿಳಿಸಿದ್ದಾರೆ. ಟ್ರಕ್ ಚಲಾಯಿಸಿಕೊಂಡು ಬರುತ್ತಿದ್ದ ಆತನನ್ನು ಕಸ್ಟಮ್ಸ್ ಅಧಿಕಾರಿಗಳು, ತಡೆದು ನಿಲ್ಲಿಸಿ ತಪಾಸಣೆಗೆ ಒಳಪಡಿಸಿದ್ದರು.”ಫೆಬ್ರವರಿ 25ರಂದು ಬೆಳಗ್ಗಿನ ಜಾವ ಸುಮಾರು 3 ಗಂಟೆಗೆ ಈ ಘಟನೆ ಸಂಭವಿಸಿತು. 2018 ಜಿಎಂಸಿ ಟ್ರಕ್ ಅನ್ನು ಚಲಾಯಿಸಿಕೊಂಡು, ಸ್ಯಾನ್ ಯಿಸಿಡ್ರೋ ಗಡಿಯ ಕ್ರಾಸಿಂಗ್ ಬಳಿ ಬರುತ್ತಿದ್ದ 30 ವರ್ಷ ವಯಸ್ಸಿನ ಯುಎಸ್ ನಾಗರೀಕನನ್ನು ಸಿಬಿಪಿ ಅಧಿಕಾರಿಗಳು ತಡೆದರು” ಎಂದು ಯುಎಸ್ ಕಸ್ಟಮ್ಸ್ ಮತ್ತು ಗಡಿ ಭದ್ರತಾ ಅಧಿಕಾರಿಗಳು ತಿಳಿಸಿದ್ದಾರೆ.
ಆ ಅನಾಮಿಕ ವ್ಯಕ್ತಿಯನ್ನು ತಪಾಸಣೆ ನಡೆಸಿದಾಗ, ಅಧಿಕಾರಿಗಳಿಗೆ ಅಚ್ಚರಿಯೊಂದು ಕಾದಿತ್ತು. “ಮನುಷ್ಯನ ಜಾಕೆಟ್, ಪ್ಯಾಂಟ್ ಪಾಕೆಟ್ ಮತ್ತು ತೊಡೆ ಸಂಧಿಯ ಜಾಗದಲ್ಲಿ ಮರೆಯಾಗಿ ಇಟ್ಟುಕೊಂಡಿದ್ದ 52 ಜೀವಂತ ಸರಿಸೃಪಗಳು ಅಧಿಕಾರಿಗಳ ಕಣ್ಣಿಗೆ ಬಿದ್ದವು. ಆ ಸರಿಸೃಪಗಳಲ್ಲಿ 43 ಕೊಂಬಿನ ಹಲ್ಲಿಗಳು ಮತ್ತು 9 ಹಾವುಗಳು ಸೇರಿದ್ದು, ಅವುಗಳನ್ನು ಚೀಲಗಳಲ್ಲಿ ಮುಚ್ಚಿಡಲಾಗಿತ್ತು. ಗಡಿಯಾಚೆಗಿನಿಂದ ಜೀವಂತ ಸರೀಸೃಪಗಳನ್ನು ಕಳ್ಳಸಾಗಾಣಿಕೆ ಮಾಡಲು ಪ್ರಯತ್ನಿಸಿದ ಆರೋಪದ ಮೇಲೆ ಆ ವ್ಯಕ್ತಿಯನ್ನು ಸ್ಥಳದಲ್ಲೇ ಬಂಧಿಸಲಾಯಿತು. ಕಳ್ಳ ಸಾಗಾಣಿಕೆ ಮಾಡಲು ಆತ ಬಳಸಿದ ವಾಹನ ಮತ್ತು ಆತನ ಬಳಿಕ ಇದ್ದ ಆ ಎಲ್ಲಾ ಸರಿಸೃಪಗಳನ್ನು ವಶಕ್ಕೆ ಪಡೆದುಕೊಳ್ಳಲಾಯಿತು. ಬಳಿಕ ಅವನನ್ನು ಅಲ್ಲಿಂದ ಸ್ಥಳಾಂತರಿಸಲಾಯಿತು ಮತ್ತು ಮೆಟ್ರೋಪಾಲಿಟನ್ ಕರೆಕ್ಷನಲ್ ಸೆಂಟರ್‌ಗೆ ಕರೆದೊಯ್ಯಲಾಯಿತು. ಆ ಕಳ್ಳ ಸಾಗಾಣಿಕೆದಾರನಿಂದ ವಶಕ್ಕೆ ಪಡೆಯಲಾದ 52 ಸರೀಸೃಪಗಳಲ್ಲಿ, ಕೆಲವು ಅಳಿವಿನ ಅಂಚಿನಲ್ಲಿರುವ ಪ್ರಬೇಧಗಳು ಎಂದು ಗುರುತಿಸಲ್ಪಟ್ಟಿವೆ. ಅವುಗಳನ್ನು ಸುರಕ್ಷಿತವಾದ ಪ್ರದೇಶದಲ್ಲಿ ಇರಿಸಲಾಗುವುದು ಮತ್ತು ಅವು ಕ್ವಾರಂಟೈನ್‌ನಲ್ಲಿ ಉಳಿಯಲಿವೆ ಎಂದು ಕಸ್ಟಮ್ ಅಧಿಕಾರಿಗಳು ಹೇಳಿದ್ದಾರೆ.