90 ಕೇಂದ್ರಗಳಲ್ಲಿ ಎಸ್.ಎಸ್.ಎಲ್.ಸಿ ಪರೀಕ್ಷೆ ಪರೀಕ್ಷಾ ಕೇಂದ್ರಗಳಿಗೆ ಜಿಲ್ಲಾಧಿಕಾರಿ ಭೇಟಿ, ಪರಿಶೀಲನೆ
ದಾವಣಗೆರೆ:
ಸೋಮವಾರದಿಂದ ಆರಂಭಗೊಂಡ ಎಸ್.ಎಸ್.ಎಲ್.ಸಿ ಪರೀಕ್ಷೆಗಳ ಕೆಲ ಕೇಂದ್ರಗಳಿಗೆ ಜಿಲ್ಲಾಧಿಕಾರಿ ಮಹಾಂತೇಶ್ ಬೀಳಗಿ ಭೇಟಿ ಪರಿಶೀಲಿಸಿದರು ಹಾಗೂ ಆತ್ಮಸ್ಥೈರ್ಯದಿಂದ ಪರೀಕ್ಷೆ ಬರೆಯುವಂತೆ ವಿದ್ಯಾರ್ಥಿಗಳನ್ನು ಹುರಿದುಂಬಿಸಿದರು.
ದಾವಣಗೆರೆ ನಗರದ ಪರೀಕ್ಷಾ ಕೇಂದ್ರಗಳಾದ ಮೋತಿವೀರಪ್ಪ ಕಾಲೇಜು, ಸರ್ಕಾರಿ ಪ್ರೌಢಶಾಲೆ ಹಾಗೂ ಸೀತಮ್ಮ ಹೈಸ್ಕೂಲ್‍ಗಳಿಗೆ ಭೇಟಿ ನೀಡಿದ ಅವರು ವಿದ್ಯಾರ್ಥಿಗಳು ಒತ್ತಡ ರಹಿತವಾಗಿ ಸುಲಲಿತವಾಗಿ ಪರೀಕ್ಷೆಗಳನ್ನು ಎದುರಿಸುವಂತೆ ವಿದ್ಯಾರ್ಥಿಗಳಿಗೆ ಪ್ರೋತ್ಸಾಹಿಸಿದರು.
ನಂತರ ಸುದ್ದಿಗಾರರೊಂದಿಗೆ ಮಾತನಾಡಿ, ಜಿಲ್ಲೆಯ 90 ಕೇಂದ್ರಗಳಲ್ಲಿ ಪರೀಕ್ಷೆಗಳು ಅತ್ಯಂತ ಸುಗಮವಾಗಿ ನಡೆಯುತ್ತಿದ್ದು, ಯಾವುದೇ ರೀತಿಯ ಸಮಸ್ಯೆಗಳಿಲ್ಲ ಒಟ್ಟು 22226 ವಿದ್ಯಾರ್ಥಿಗಳು ಪರೀಕ್ಷೆ ಬರೆಯುತ್ತಿದ್ದು ಹರಿಹರದಲ್ಲಿ ಎಸ್.ಪಿ ಅವರು ಚನ್ನಗಿರಿ ಭಾಗದಲ್ಲಿ ಸಿ.ಇ.ಓ ಹಾಗೂ ದಾವಣಗೆರೆ ನಗರದಲ್ಲಿ ನಾನು ಪರೀಕ್ಷೆ ಕೇಂದ್ರಗಳ ಉಸ್ತುವಾರಿ ಗಮನಿಸುತ್ತಿದ್ದೇವೆ.
ಹಿಜಾಬ್ ಸಂಬಂಧ ಎಲ್ಲಿಯೂ ಗದ್ದಲ ಗೋಜಲು ಉಂಟಾಗಿಲ್ಲ ಇಂದು ಪ್ರಥಮ ಭಾಷೆ ಪರೀಕ್ಷೆಯನ್ನು ವಿದ್ಯಾರ್ಥಿಗಳು ಬರೆಯುತ್ತಿದ್ದಾರೆ, ಮುಂದಿನ 5 ವಿಷಯದ ಪರೀಕ್ಷೆಗಳು ಸರಾಗವಾಗಿ ನಡೆಸಲು ಸಿದ್ದತೆ ಮಾಡಿಕೊಂಡಿದ್ದೇವೆ. ಧಾರ್ಮಿಕ ವಸ್ತ್ರಗಳ ಸಮಸ್ಯೆಗಳು ಎಲ್ಲಿಯೂ ಉದ್ಭವಿಸಿಲ್ಲ ಹಾಗೂ ಆ ವಿಚಾರವಾಗಿ ಪರೀಕ್ಷೆಯಿಂದ ಹೊರಹೋದ ವರದಿಗಳಿಲ್ಲ ಎಲ್ಲರೂ ಪರೀಕ್ಷೆಯೇ ಮುಖ್ಯ ಎಂದು ಆತ್ಮ ವಿಶ್ವಾಸದಿಂದ ಪರೀಕ್ಷೆ ಬರೆಯುತ್ತಿದ್ದಾರೆ. ಪರೀಕ್ಷಾ ನಿಯೋಜಿತ ಸಿಬ್ಬಂದಿಗಳು ವಿದ್ಯಾರ್ಥಿಗಳಿಗೆ ಎಲ್ಲಾ ರೀತಿಯ ಸಹಕಾರ ನೀಡುತ್ತಿದ್ದಾರೆ, ಎಲ್ಲಾ ಕಡೆಯಲ್ಲೂ ಸೂಕ್ತ ಪೊಲೀಸ್ ಬಂದೋಬಸ್ತ್ ವ್ಯವಸ್ಥೆಯನ್ನು ಮಾಡಲಾಗಿದ್ದು, ಪ್ರತೀ ಕೇಂದ್ರಕ್ಕೂ ಒಬ್ಬ ಸ್ಕ್ವಾಡ್‍ಗಳನ್ನು ನೇಮಿಸಲಾಗಿದೆ. ವಿದ್ಯಾರ್ಥಿಗಳು ಯಾವುದೇ ಭಯವಿಲ್ಲದೆ ಪರೀಕ್ಷೆ ಬರೆಯುವಂತೆ ಆತ್ಮಸ್ಥೈರ್ಯ ತುಂಬಲಾಗಿದೆ ಎಂದು ಮಾಹಿತಿ ನೀಡಿದರು.
ಇದೇ ಸಂದರ್ಭದಲ್ಲಿ ಹೆಚ್ಚುವರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಆರ್.ಬಿ. ಬಸರಗಿ, ಡಿ.ಡಿ.ಪಿ.ಐ ಜಿ.ಆರ್ ತಿಪ್ಪೇಶಪ್ಪ, ಬಿಇಓ ನಿರಂಜನ ಮೂರ್ತಿ, ವಿಷಯ ಪರಿವೀಕ್ಷಕ ಕುಮಾರ ಹನುಮಂತಪ್ಪ ಸಾರಥಿ, ಹಾಗೂ ಕಾಲೇಜಿನ ಪ್ರಾಚಾರ್ಯರು ಹಾಜರಿದ್ದರು.