ಮಾರ್ಚ್ ಅಂತ್ಯದೊಳಗೆ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನ: ಬಿ. ವಾಮದೇವಪ್ಪ

ದಾವಣಗೆರೆ : ರಾಜ್ಯ ಕಾರ್ಯಕಾರಿ ಸಮಿತಿ ಸಭೆಯಲ್ಲಿ ತೆಗೆದುಕೊಂಡ ನಿರ್ಣಯದಂತೆ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನವನ್ನು ಮಾರ್ಚ್ ಅಂತ್ಯದೊಳಗೆ ಮಾಡಲು ರಾಜ್ಯಾಧ್ಯಕ್ಷ ನಾಡೋಜ ಡಾ. ಮಹೇಶ್ ಜೋಶಿ ತಿಳಿಸಿದ್ದಾರೆ ಎಂದು ಬಿ. ವಾಮದೇವಪ್ಪ ಹೇಳಿದರು.
ದಾವಣಗೆರೆ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಪ್ರಥಮ ಕಾರ್ಯಕಾರಿ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು ಜಿಲ್ಲೆಯಲ್ಲಿ ಜಿಲ್ಲಾ ಸಾಹಿತ್ಯ ಸಮ್ಮೇಳನವನ್ನು ಹಮ್ಮಿಕೊಳ್ಳೋಣ ಎಂದು ತಿಳಿಸಿದರು.
ಎಲ್ಲಾ ತಾಲೂಕು ಅಧ್ಯಕ್ಷರುಗಳು ತಾಲೂಕಿನಲ್ಲಿ ಹಮ್ಮಿಕೊಳ್ಳಬಹುದಾದ ಸಾಹಿತ್ಯ ಚಟುವಟಿಕೆಗಳ ಕ್ರಿಯಾಯೋಜನೆಯನ್ನು ತಯಾರಿಸಿಕೊಂಡು 2021 -22 ನೇ ಸಾಲಿನ ದತ್ತಿ ಕಾರ್ಯಕ್ರಮಗಳನ್ನು ಮೇ. ಅಂತ್ಯದೊಳಗೆ ಮಾಡಲು ತಿಳಿಸಿದರು.
ಕಸಾಪದಲ್ಲಿ ಇಲ್ಲಿಯವರೆಗೂ ನಡೆದ ಕಾರ್ಯಚಟುವಟಿಕೆಗಳು ಮತ್ತು ಖರ್ಚು ವೆಚ್ಚಗಳ ವಿವರಗಳನ್ನು ಗೌರವ ಕಾರ್ಯದರ್ಶಿ ಬಿ. ದಿಳ್ಯಪ್ಪ ಸಭೆಗೆ ವಿವರವಾಗಿ ಮಂಡಿಸಿದರು.
ಸಭೆಯಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕರಾದ ರವಿಚಂದ್ರ, ಗೌರವ ಕಾರ್ಯದರ್ಶಿಗಳಾದ ರೇವಣಸಿದ್ದಪ್ಪ ಅಂಗಡಿ, ತಾಲೂಕ ಅಧ್ಯಕ್ಷರುಗಳಾದ ಸುಮತಿ ಜಯಪ್ಪ, ಮಂಜುನಾಥಯ್ಯ, ಹಾಲಾರಾಧ್ಯ, ಮಧುಕುಮಾರ್, ಸುಜಾತಮ್ಮ, ಸಮಿತಿ ಸದಸ್ಯರಾದ ಮಲ್ಲಮ್ಮ, ಜ್ಯೋತಿ ಉಪಾಧ್ಯಾಯ, ರುದ್ರಾಕ್ಷಿ ಬಾಯಿ, ಭೈರೇಶ್ವರ, ಸತ್ಯಭಾಮ, ರಾಜು ಮುಂತಾದವರು ಹಾಜರಿದ್ದರು.