ಸಿದ್ದೇಶ್ವರ ಸ್ವಾಮೀಜಿಗಳ ಲಿಂಗೈಕ್ಯಕ್ಕೆ ಡಿಕೆಶಿ, ಸಿದ್ದರಾಮಯ್ಯ ಶೋಕ

ಬೆಂಗಳೂರು: ನಡೆದಾಡುವ ದೇವರು, ಜ್ಞಾನ ಯೋಗಿ ಎಂದೇ ಖ್ಯಾತರಾಗಿದ್ದ ಶ್ರೀ ಸಿದ್ದೇಶ್ವರ ಸ್ವಾಮೀಜಿ ಅವರ ಲಿಂಗೈಕ್ಯಕ್ಕೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರು ತೀವ್ರ ಸಂತಾಪ ಸೂಚಿಸಿದ್ದಾರೆ.

‘ಶ್ರೀ ಸಿದ್ದೇಶ್ವರ ಸ್ವಾಮೀಜಿಗಳು ಲಿಂಗೈಕ್ಯರಾದ ಸುದ್ದಿ ಕೇಳಿ ಮನಸ್ಸಿಗೆ ಬಹಳ ಬೇಸರವಾಗಿದೆ. ಅನಾರೋಗ್ಯದಿಂದ ಬಳಲುತ್ತಿದ್ದ ಅವರು ಗುಣಮುಖರಾಗಲಿ ಎಂದು ನಾನು ಸೇರಿದಂತೆ ಅವರ ಭಕ್ತವೃಂದ ದೇವರಲ್ಲಿ ಪ್ರಾರ್ಥನೆ ಮಾಡಿತ್ತು. ತಮ್ಮ ಪ್ರವಚನಗಳ ಮೂಲಕ ಅಸಂಖ್ಯ ಮಂದಿಯ ಮನಪರಿವರ್ತನೆ ಜತೆಗೆ ಸಮಾಜದ ಬದಲಾವಣೆಗೆ ಕಾರಣರಾಗಿದ್ದ ಸ್ವಾಮೀಜಿಗಳು ಮಹಾನ್ ಮಾನವತಾವಾದಿಗಳು. ಅವರ ಪ್ರವಚನಗಳಿಂದ ಅನೇಕರು ಪ್ರಭಾವಿತರಾಗಿ, ಸ್ಫೂರ್ತಿ ಪಡೆದು ಸಮಾಜಸೇವೆಯಲ್ಲಿ ತಮ್ಮನ್ನೂ ತೊಡಗಿಸಿಕೊಂಡಿದ್ದಾರೆ. ಅವರ ಪ್ರವಚನಗಳಿಂದ ಪ್ರಭಾವಿತನಾಗಿ ನಾನೂ ಸಹ ಅವರ ಭಕ್ತಗಣ ಸೇರಿದ್ದೆ ಎಂದಿದ್ದಾರೆ.

ಬಹುಭಾಷೆ ಪ್ರವೀಣರಾಗಿದ್ದ ಶ್ರೀಗಳು ದೇಶ-ವಿದೇಶಗಳಲ್ಲೂ ಭಕ್ತಸಮೂಹ ಹೊಂದಿದ್ದಾರೆ. ಅವರು ಬಿಟ್ಟು ಹೋಗಿರುವ ಮೌಲ್ಯಗಳು ಈ ಸಮಾಜಕ್ಕೊಂದು ದಾರಿದೀಪ ಎಂದಿರುವ ಡಿಕೆಶಿ, ಸ್ವಾಮೀಜಿಗಳ ಅಗಲಿಕೆ ಇಡೀ ಮಾನವ ಕುಲಕ್ಕೇ ತುಂಬಲಾರದ ನಷ್ಟ. ಅವರ ಅಗಲಿಕೆ ನೋವು ಭರಿಸುವ ಶಕ್ತಿಯನ್ನು ಅವರ ಅಸಂಖ್ಯ ಭಕ್ತರಿಗೆ ಭಗವಂತ ಕರುಣಿಸಲಿ ಎಂದು ಪ್ರಾರ್ಥಿಸಿದ್ದಾರೆ.

ಇದೇ ವೇಳೆ, ದುಃಖ ಹಂಚಿಕೊಂಡಿರುವ ವಿಧಾನಸಭೆಯ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ, ಜ್ಞಾನಯೋಗಾಶ್ರಮದ ಪೀಠಾಧೀಶರಾದ ಶ್ರೀ ಸಿದ್ದೇಶ್ವರ ಸ್ವಾಮೀಜಿಯವರು ಲಿಂಗೈಕ್ಯರಾದ ಸುದ್ದಿ ಅತೀವ ನೋವುಂಟುಮಾಡಿದೆ. ಧಾರ್ಮಿಕ ಪ್ರವಚನದ ಮೂಲಕ ಸಮಾಜವನ್ನು ಸನ್ಮಾರ್ಗದಲ್ಲಿ ನಡೆಸುತ್ತಿದ್ದ ದಾರ್ಶನಿಕ ಗುರುವಿನ ಅಗಲಿಕೆ ವೈಯಕ್ತಿಕವಾಗಿ ಮತ್ತು ನಾಡಿಗೆ ತುಂಬಿಬಾರದ ನಷ್ಟ ಎಂದಿದ್ದಾರೆ.

 

Leave a Reply

Your email address will not be published. Required fields are marked *

error: Content is protected !!