ಜೇಮ್ಸ್’ ಸಿನಿಮಾದಲ್ಲಿ ಶಿವಣ್ಣ, ರಾಘವೇಂದ್ರ ರಾಜ್‌ಕುಮಾರ್ ಪಾತ್ರವೇನು ಗೊತ್ತಾ?
ಬೆಂಗಳೂರು : ಸ್ನೇಹದ ಸಂದೇಶ ಸಾರುವ ಕತೆಯಲ್ಲಿ ಅಪ್ಪು ಒನ್‌ಮ್ಯಾನ್ ಶೋ ‘ಜೇಮ್ಸ್’ ಸಿನಿಮಾದಲ್ಲಿ ಇಂಟರ್ವೆಲ್ ಬಳಿಕ ಶಿವಣ್ಣ ಹಾಗೂ ರಾಘಣ್ಣ ಕಾಣಿಸಿಕೊಳ್ಳುತ್ತಾರೆ. ಅದರಲ್ಲಿಯೂ ಶಿವರಾಜ್ ಕುಮಾರ್ ತೆರೆಯ ಮೇಲೆ ಕಾಣಿಸಿಕೊಂಡಾಗ ಶಿಳ್ಳೆ, ಚಪ್ಪಾಳೆಗಳ ಭೋರ್ಗರೆತವೇ ಆಗುತ್ತದೆ. ‘ಜೇಮ್ಸ್’ ಸಿನಿಮಾದಲ್ಲಿ ಶಿವರಾಜ್ ಕುಮಾರ್ ಸೈನ್ಯಾಧಿಕಾರಿಯ ಪಾತ್ರದಲ್ಲಿ ನಟಿಸಿದ್ದಾರೆ. ಸಿನಿಮಾದಲ್ಲಿ ಪಿರಂಗಿ ಪಾತ್ರಧಾರಿ ರಂಗಾಯಣ ರಘು, ಸಂತೋಶ್ ಪಾತ್ರಧಾರಿ ಪುನೀತ್ ಅವರನ್ನು ಅವರ ಕುಟುಂಬದ ಬಗ್ಗೆ ಕೇಳುತ್ತಾರೆ. ಆಗ ಫ್ಲಾಶ್‌ಬ್ಯಾಕ್ ದೃಶ್ಯ ತೆರೆದುಕೊಳ್ಳುತ್ತದೆ. ಜೋರು ಮಳೆಯಿಂದ ಆದ ಅತಿವೃಷ್ಟಿಯಲ್ಲಿ ಸಂತೋಷ್ (ಪುನೀತ್) ಹಾಗೂ ಇನ್ನು ಕೆಲವು ಬಾಲಕರು ತಮ್ಮ ಪೋಷಕರನ್ನು ಕಳೆದುಕೊಂಡಿರುತ್ತಾರೆ. ಎಲ್ಲರೂ ಗಂಜಿ ಕೇಂದ್ರದಲ್ಲಿ ವಾಸ್ತವ್ಯ ಹೂಡಿರುತ್ತಾರೆ. ಅತಿವೃಷ್ಟಿಯಲ್ಲಿ ಸಿಲುಕಿದವರಿಗೆ ನೆರವಾಗುವ ಸೈನ್ಯದ ಗುಂಪಿನ ಮುಖ್ಯಸ್ಥನ ಪಾತ್ರದಲ್ಲಿ ನಟಿಸಿರುವ ಶಿವರಾಜ್ ಕುಮಾರ್ ಅದೇ ಗಂಜಿ ಕೇಂದ್ರದಲ್ಲಿ ವಾಸ್ತವ್ಯ ಹೂಡಿರುತ್ತಾರೆ.
ಶಿವಣ್ಣ ಆ ಮಕ್ಕಳನ್ನು ಕರೆದು ಕೂರಿಸಿಕೊಂಡು ಜೀವನ ಪಾಠ ಹೇಳುತ್ತಾರೆ. ”’ಯಾರ ಮೇಲೆ ಪ್ರೀತಿ ಹೆಚ್ಚು ಇರುತ್ತೊ ಅವರನ್ನು ಆ ದೇವರು ಬೇಗ ಕರೆದುಕೊಂಡು ಬಿಡುತ್ತಾರೆ” ಎಂದು ಸಂಭಾಷಣೆ ಹೇಳುವ ಶಿವಣ್ಣ ಅರೆ ಕ್ಷಣ ಆಕಾಶ ನೋಡುತ್ತಾರೆ. ಆ ದೃಶ್ಯ ಪ್ರೇಕ್ಷಕನ ಹೃದಯ ಕರಗಿಸಿಬಿಡುತ್ತದೆ. ಪೋಷಕರನ್ನು ಕಳೆದುಕೊಂಡ ಎಲ್ಲ ಹುಡುಗರನ್ನು ಆಶ್ರಮವೊಂದಕ್ಕೆ ಶಿವಣ್ಣ ಸೇರಿಸುತ್ತಾರೆ. ಆ ಆಶ್ರಮದ ಮುಖ್ಯ ಗುರುವಿನ ಪಾತ್ರದಲ್ಲಿ ರಾಘವೇಂದ್ರ ರಾಜ್‌ಕುಮಾರ್ ನಟಿಸಿದ್ದಾರೆ. ರಾಘವೇಂದ್ರ ರಾಜ್‌ಕುಮಾರ್ ಅವರಿಗೆ ಸಿನಿಮಾದಲ್ಲಿ ಹೆಚ್ಚಿನ ಸಂಭಾಷಣೆಗಳಿಲ್ಲ. ‘ಜೇಮ್ಸ್’ ಸಿನಿಮಾ ಶೂಟಿಂಗ್ ಮಾಡುವಾಗ ಶಿವರಾಜ್ ಕುಮಾರ್ ಹಾಗೂ ರಾಘವೇಂದ್ರ ರಾಜ್‌ಕುಮಾರ್ ಅವರಿಗೆ ಪಾತ್ರ ಇರಲಿಲ್ಲ. ಆದರೆ ಪುನೀತ್ ಕಾಲವಾದ ಬಳಿಕ ಇವರಿಬ್ಬರ ಪಾತ್ರಗಳನ್ನು ಸೃಷ್ಟಿಸಿ ಕತೆಗೆ ಹೊಂದಿಕೊಳ್ಳುವಂತೆ ಜಾಣತನದಿಂದ ಬಳಸಿಕೊಂಡಿದ್ದಾರೆ ನಿರ್ದೇಶಕ ಚೇತನ್.