ಕೃಷಿ ಪಂಪ್‌ಸೆಟ್‌ಗಳಿಗೆ ಟಿಸಿ ಅಳವಡಿಕೆಗೆ ಸರ್ಕಾರದ ಶುಲ್ಕವೆಷ್ಟು ಗೊತ್ತಾ?

ದಾವಣಗೆರೆ : ರೈತರ ಕೃಷಿ ಪಂಪ್‌ಸೆಟ್‌ಗಳಿಗೆ ಅವಶ್ಯಕತೆವಿರುವೆಡೆ ಪರಿವರ್ತಕಗಳನ್ನು ಅಳವಡಿಸಲು ರೈತರಿಂದ ಯಾವುದೇ ಶುಲ್ಕವನ್ನು ತೆಗೆದುಕೊಳ್ಳುವುದಿಲ್ಲ ಇಂಧನ ಹಾಗೂ ಕನ್ನಡ ಮತ್ತು ಸಂಸ್ಖೃತಿ ಸಚಿವ ವಿ. ಸುನೀಲ್ ಕುಮಾರ್ ವಿಧಾನಸಭೆ ಕಲಾಪದಲ್ಲಿ ಕೆ.ವಿ. ನಾರಾಯಣಸ್ವಾಮಿ ಕೇಳಿದ ಪ್ರಶ್ನೆಗೆ ಉತ್ತರಿಸಿದ್ದಾರೆ. ರೈತರಿಗೆ ತಮ್ಮ ಹೊಲದಲ್ಲಿ ಕೊರೆಸಿರುವ ಕೊಳವೆ ಬಾವಿಗಳಿಗೆ ವಿದ್ಯುತ್ ಸಂಪರ್ಕ ಪಡೆಯಲು ಮತ್ತು ಹೊಸದಾಗಿ ವಿದ್ಯುತ್ ಕಂಬ ಮತ್ತು ಟ್ರಾನ್ಸ್ಫಾರ್ಮರ್, ಅಳವಡಿಸಲು ಇಂಧನ ಇಲಾಖೆಯಿಂದ ವಿಧಿಸುತ್ತಿರುವ ಶುಲ್ಕವೆಷ್ಟು ಎಂದು ಕೆ.ವಿ. ನಾರಾಯಣಸ್ವಾಮಿ ಕೇಳಿದ ಪ್ರಶ್ನೆಗೆ ಉತ್ತರಿಸಿರುವ ವಿ. ಸುನೀಲ್ ಕುಮಾರ್ “ಅಕ್ರಮ ಸಕ್ರಮ ಹಾಗೂ ಹೊಸದಾಗಿ ನೊಂದಾಯಿಸಲ್ಪಡುವ ಎಲ್ಲಾ ಅರ್ಜಿಗಳಿಗೆ ವಿದ್ಯುತ್ ಸಂಪರ್ಕ ಕಲ್ಪಿಸಲು ಸೂಚಿಸಲಾಗಿರುತ್ತದೆ.
ಸದರಿ ಆದೇಶದಂತೆ ರೂ. 10 ಸಾವಿರ ಹಾಗೂ ಠೇವಣಿ ಹಣ ಪಾವತಿಸಿರುವ ರೈತರ ಸ್ಥಳ ಪರಿಶೀಲನೆ ಮಾಡಿದ ನಂತರ ಪಂಪ್‌ಸೆಟ್‌ಗೆ ಸನಿಹ ಇರುವ ವಿದ್ಯುತ್ ಮಾರ್ಗದ ಲಭ್ಯತೆ ಮತ್ತು ಪರಿವರ್ತಕದ ಹಾಲಿ ಇರುವ ಹೊರೆಯನ್ನು ಪರಿಶೀಲಿಸಿ ತಾಂತ್ರಿಕ ಸಾಧ್ಯತೆಗೆ ಅನುಗುಣವಾಗಿ ಸರ್ವಿಸ್ ಮೇನ್ ಮೂಲಕ/ಎಲ್.ಟಿ. ಮಾರ್ಗ ವಿಸ್ತರಣೆ/ ಅವಶ್ಯಕತೆ ಇರುವಲ್ಲಿ ಹೊಸ ಪರಿವರ್ತಕ ಅಳವಡಿಸಲು ಜೇಷ್ಠತಾಪಟ್ಟಿ ಅನುಸಾರ ವಿದ್ಯುತ್ ಸಂಪರ್ಕ ಕಲ್ಪಿಸಲಾಗುತ್ತಿದೆ. ರೈತರ ಕೃಷಿ ಪಂಪ್‌ಸೆಟ್‌ಗಳಿಗೆ ಅವಶ್ಯಕತೆವಿರುವೆಡೆ ಪರಿವರ್ತಕಗಳನ್ನು ಅಳವಡಿಸಲು ರೈತರಿಂದ ಯಾವುದೇ ಶುಲ್ಕವನ್ನು ತೆಗೆದುಕೊಳ್ಳುವುದಿಲ್ಲ ಎಂದು ಉತ್ತರಿಸಿದ್ದಾರೆ.
14-07-2014ರ ಸರ್ಕಾರದ ಆದೇಶದನ್ವಯ ಕೃಷಿ ಪಂಪ್‌ಸೆಟ್‌ಗಳಿಗೆ ವಿದ್ಯುತ್ ಸಂಪರ್ಕ ಪಡೆಯಲು ರೈತರು ಅರ್ಜಿ ಶುಲ್ಕ 50 ರೂ. ಮೂಲಭೂತ ಸೌಕರ್ಯ ಶುಲ್ಕ 10 ಸಾವಿರ ರೂ.ಭದ್ರತಾ ಠೇವಣಿ ಶುಲ್ಕವನ್ನು ಪಾವತಿಸಬೇಕಾಗುತ್ತದೆ. ಬೆಸ್ಕಾಂ ವ್ಯಾಪ್ತಿಯಲ್ಲಿ ಭದ್ರತಾ ಠೇವಣಿ ಶುಲ್ಕ 1290 ರೂ. ಮೆಸ್ಕಾಂ 1770 ರೂ. ಸೆಸ್ಕ್ 1230 ರೂ, ಹೆಸ್ಕಾಂ 1390 ರೂ, ಜೆಸ್ಕಾಂ 1280 ರೂ. ಠೇವಣಿ ಮೊತ್ತ ಮತ್ತು ಇತರೆ ಶುಲ್ಕಗಳನ್ನು ಪಾವತಿಸಿದ ನಂತರ ಜೇಷ್ಠತೆಯ ಆಧಾರದಲ್ಲಿ ಮೂಲಭೂತ ಸೌಕರ್ಯವನ್ನು ರಚಿಸಿ ವಿದ್ಯುತ್ ಸಂಪರ್ಕ ಕಲ್ಪಿಸಲಾಗುವುದು ಎಂದು ತಿಳಿಸಿದ್ದಾರೆ.