ಪುನೀತ್ ರಾಜಕುಮಾರ್ ಅವರ ಜೇಮ್ಸ್ ಚಿತ್ರವನ್ನು ಯಾವ ಕಾರಣಕ್ಕಾಗಿ ನೋಡಬೇಕು ಗೊತ್ತಾ?
ಬೆಂಗಳೂರು : ಪುನೀತ್ ರಾಜ್‌ಕುಮಾರ್ ಇನ್ನೂ ನೆನಪು ಮಾತ್ರ. ಅವರ ಆದರ್ಶಗಳನ್ನು ತಮ್ಮಲ್ಲಿ ಅಳವಡಿಸಿಕೊಂಡು ಅದೆಷ್ಟೋ ಯುವಕರು, ಹಿರಿಯ ನಾಗರಿಕರು ಒಟ್ಟಾರೆ ದೇಶದ ಜನ ಅವರ ದಾರಿಯಲ್ಲಿಯೇ ನಡೆಯುತ್ತಿದ್ದಾರೆ. ಇನ್ನೂ ದಿವಂಗತ ಪುನೀತ್ ರಾಜ್‌ಕುಮಾರ್ ಅವರು ಪೂರ್ಣ ಪ್ರಮಾಣದ ನಾಯಕನಾಗಿ ನಟಿಸಿರುವ ಕೊನೆಯ ಚಿತ್ರ ಜೇಮ್ಸ್. ಈ ಜೇಮ್ಸ್ ಚಿತ್ರ ತೆರೆಕಂಡು ರಾಜ್ಯಾದ್ಯಂತ ಭರ್ಜರಿ ಸದ್ದಿನೊಂದಿಗೆ ಯಶಸ್ವಿ ಪ್ರದರ್ಶನ ಕಾಣುತ್ತಿದೆ. ಇದರ ಜೊತೆಗೆ ಹಲವಾರು ಇಂಟರೆಸ್ಟಿಂಗ್ ಮಾಹಿತಿಗಳು ಜೇಮ್ಸ್ ಚಿತ್ರದಲ್ಲಿದ್ದು ಜೇಮ್ಸ್ ಚಿತ್ರ ಯಾಕೆ ನೋಡಬೇಕು ಎಂಬ ಕೆಲವರ ಅನುಮಾನಕ್ಕೆ ತೆರೆ ಬೀಳಬಹುದು.
• ಸೈನಿಕನಾಗಿ ಪುನೀತ್ ರಾಜ್‌ಕುಮಾರ್
ಮೊದಲ ಬಾರಿಗೆ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಸೈನಿಕನ ಪಾತ್ರದಲ್ಲಿ ನಟಿಸಿದ್ದಾರೆ. ಬಹದ್ದೂರ್ ಚೇತನ್ ನಿರ್ದೇಶನದಲ್ಲಿ ಮೂಡಿಬಂದ ಈ ಚಿತ್ರ ಅಪ್ಪು ದೇಶ ಕಾಯುವ ಸೈನಿಕನ ಪಾತ್ರದಲ್ಲಿ ನಟಿಸಿದ್ದಾರೆ. ಹಾಗಾಗಿ ಇದು ವಿಶೇಷತೆಯನ್ನು ಹೊಂದಿದೆ.
• ತ್ರಿವಳಿ ಸಹೋದರರು
ಶಿವರಾಜಕುಮಾರ್, ರಾಘವೇಂದ್ರ ರಾಜಕುಮಾರ್ ಮತ್ತು ಪುನೀತ್‌ರನ್ನು ಒಂದೇ ಚಿತ್ರದಲ್ಲಿ ನೋಡಬೇಕೆಂಬುದು ಅಭಿಮಾನಿಗಳ ಬಹುದಿನಗಳ ಆಸೆಯಾಗಿತ್ತು. ಜೇಮ್ಸ್ ಪುನೀತ್ ನಾಯಕನಾಗಿ ನಟಿಸಿದ ಕೊನೆಯ ಚಿತ್ರವಾಗಿರುವುದರಿಂದ ಚೇತನ್ ಕುಮಾರ್ ಈ ಚಿತ್ರದಲ್ಲಿ ಶಿವಣ್ಣ ಮತ್ತು ರಾಘಣ್ಣ ವಿಶೇಷ ಪಾತ್ರಗಳಲ್ಲಿ ತೋರಿಸಿದ್ದಾರೆ.
• ಪುನೀತ್ ರಾಜ್‌ಕುಮಾರ್‌ಗೆ ಧ್ವನಿಯಾಗಿ ನಿಂತ ಶಿವರಾಜ್‌ಕುಮಾರ್
ಚಿತ್ರದ ಒಂದು ಗೀತೆ ಮತ್ತು ಡಬ್ಬಿಂಗ್ ಕೆಲಸ ಬಾಕಿಯಿರುವಾಗ ಪುನೀತ್ ದುರದೃಷ್ಟವಶಾತ್ ನಿಧನರಾದರು. ಹಾಗಾಗಿ ಪುನೀತ್ ಪಾತ್ರದ ಡಬ್ಬಿಂಗ್ ಕೆಲಸಗಳು ಹಾಗೆಯೇ ಉಳಿದು ಹೋಯಿತು. ಚಿತ್ರತಂಡ ಚಿತ್ರೀಕರಣ ಮಾಡುವಾಗಿನ ಪುನೀತ್ ಧ್ವನಿಯನ್ನು ಉಳಿಸಿಕೊಳ್ಳಲು ಮೊದಲು ಪ್ರಯತ್ನಿಸಿದರೂ, ಸಾಧ್ಯವಾಗಲಿಲ್ಲ. ಕಾರಣ ಶಿವರಾಜಕುಮಾರ್ ರವರು ತಮ್ಮ ಸಹೋದರನ ಕೊನೆಯ ಚಿತ್ರಕ್ಕೆ ತಾವೇ ಧ್ವನಿ ನೀಡಿದ್ದರು. ಈ ಘಟನೆ ನಾಗ್ ಸಹೋದರರನ್ನು ನೆನಪಿಸುತ್ತದೆ. ಶಂಕರ್ ನಾಗ್ ತೀರಿಕೊಂಡಾಗ, ಶಂಕರ್‌ರ ಕೊನೆಯ ಚಿತ್ರಗಳಿಗೆ ಅನಂತನಾಗ್ ಡಬ್ ಮಾಡಿದ್ದರು.
* ಅದ್ದೂರಿ ಸಾಹಸ ದೃಶ್ಯಗಳು :
ಚಿತ್ರದಲ್ಲಿ ಪುನೀತ್ ರಾಜ್‌ಕುಮಾರ್ ಸೈನಿಕನ ಪಾತ್ರದಲ್ಲಿ ನಟಿಸಿರುವುದರಿಂದ ಅದ್ಧೂರಿ ಸಾಹಸ ದೃಶ್ಯಗಳಿವೆ. ಸಾಮಾನ್ಯ ಪಾತ್ರಗಳಲ್ಲೇ ಅದ್ದೂರಿ ಸಾಹಸಗಳನ್ನು ಮಾಡಿ ಪ್ರೇಕ್ಷಕ್ಷರನ್ನು ರಂಜಿಸುತ್ತಿದ್ದ ಅಪ್ಪುಗೆ ಸೈನಿಕ ಪಾತ್ರ ಇನ್ನಷ್ಟು ಹುರುಪು ನೀಡಿರುತ್ತದೆ. ರವಿ ವರ್ಮಾ, ರಾಮ್ ಲಕ್ಷ್ಮಣ್, ಚೇತನ್ ಡಿಸೋಜಾ, ಅರ್ಜುನ್ ಮಾಸ್ಟರ್ ಮತ್ತು ವಿಜಯ್ ಮಾಸ್ಟರ್ ಈ ಚಿತ್ರಕ್ಕೆ ಹಾಲಿವುಡ್ ರೇಂಜಿಗೆ ಫೈಟ್ ಮತ್ತು ಚೇಸಿಂಗ್ ದೃಶ್ಯಗಳನ್ನು ಕಂಪೋಸ್ ಮಾಡಿದ್ದಾರೆ. ಪುನೀತ್ ಕೂಡ ರವಿವರ್ಮ ಜೊತೆಗಿನ ಕೊನೆಯ ಕರೆಯಲ್ಲಿ ಚಿತ್ರದ ಸಾಹಸ ದೃಶ್ಯಗಳನ್ನು ಹೊಗಳಿದ್ದರು.
* ಜೇಮ್ಸ್ ಬಾಂಡ್ ಕಲರ್ ಪ್ಯಾಲೇಟ್ :
ಚಿತ್ರದ ಛಾಯಾಗ್ರಾಹಕ ಸ್ವಾಮಿ ಜೆ. ಗೌಡ ಚಿತ್ರದಲ್ಲಿ ಹಾಲಿವುಡ್ ಚಿತ್ರ ಜೇಮ್ಸ್ ಬಾಂಡ್‌ನ ಕಲರ್ ಪ್ಯಾಲೇಟ್ ಬಳಸಿದ್ದಾರೆ. ಇದೊಂದು ಸ್ಪೈ ಆ್ಯಕ್ಷನ್ ಥ್ರಿಲ್ಲರ್ ಚಿತ್ರವಾಗಿದ್ದು, ಸೈನಿಕನೊಬ್ಬ ಸ್ಯೆಕುರಿಟಿ ಏಜೆನ್ಸಿ ನಡೆಸುವ ಮೂಲಕ ಹೇಗೆ ಅಂತಾರಾಷ್ಟ್ರೀಯ ಮಟ್ಟದ ಡ್ರಗ್ ಮಾಫಿಯಾವನ್ನು ಸೆದೆ ಬಡಿಯುತ್ತಾನೆ ಎಂಬುದು ಚಿತ್ರದ ಕಥೆ.