ವಿವಿಧ ಬೇಡಿಕೆಗಾಗಿ ಕರ್ನಾಟಕ ದಲಿತ ಸಂಘರ್ಷ ಜಿಲ್ಲಾ ಸಮಿತಿ ಪದಾಧಿಕಾರಿಗಳಿಂದ ತಾಲೂಕು ಕಚೇರಿ ಬಳಿ ಧರಣಿ

IMG-20211025-WA0130

ದಾವಣಗೆರೆ: ಬಗರ್ ಹುಕುಂ ಸಾಗುವಳಿದಾರರಿಗೆ ಸಾಗುವಳಿ ಚೀಟಿ, ದಲಿತರಿಗೆ ಪ್ರತ್ಯೇಕ ಸ್ಮಶಾನ ಸೇರಿದಂತೆ ವಿವಿಧ ಬೇಡಿಕೆ ಈಡೇರಿಸುವಂತೆ ಒತ್ತಾಯಿಸಿ ಕರ್ನಾಟಕ ದಲಿತ ಸಂಘರ್ಷ ಜಿಲ್ಲಾ ಸಮಿತಿ ಪದಾಧಿಕಾರಿಗಳು ತಾಲೂಕು ಕಚೇರಿ ಮುಂಭಾಗದಲ್ಲಿ ಪ್ರತಿಭಟನೆ ನಡೆಸಿ ತಹಸೀಲ್ದಾರ್ ಗಿರೀಶ್ ಅವರಿಗೆ ಮನವಿ ಸಲ್ಲಿಸಿದರು.

ದಾವಣಗೆರೆ ತಾಲೂಕಿನಾದ್ಯಂತ ಸುಮಾರು ೧೦ ಸಾವಿರಕ್ಕೂ ಹೆಚ್ಚು ಕುಟುಂಬಗಳು ಬಡತನ ರೇಖೆಗಿಂತ ಕೆಳಗಿರುವ ಜನರಿಗೆ ಸ್ವಂತ ಭೂಮಿ ಇಲ್ಲದೆ ಜೀವನ ಸಾಗಿಸುತ್ತಿದ್ದಾರೆ. ಸುಮಾರು ವರ್ಷಗಳಿಂದ ಸರ್ಕಾರಕ್ಕೆ ಸೇರಿದ ಖರಾಬು, ಸೇಂದಿವನ ಇಂತಹ ಜಮೀನುಗಳನ್ನು ಸಾಗುವಳಿ ಮಾಡಿಕೊಂಡು ಜೀವನ ಮತ್ತು ಬದುಕು ಕಟ್ಟಿಕೊಂಡಿದ್ದಾರೆ. ಸಾಗುವಳಿ ಪತ್ರ ಕೋರಿ ತಾಲೂಕಿನಾದ್ಯಂತ ಫಾರಂ ನಂ.೫೦ರಲ್ಲಿ ಸುಮಾರು ೩೫೦೦ ಅರ್ಜಿ ಸಲ್ಲಿಸಿದ್ದು, ಹಾಗೂ ಫಾರಂ ನಂ.೫೩ರಲ್ಲಿ ಸುಮಾರು ೪೨೫೦ ಅರ್ಜಿ ಸಲ್ಲಿಸಿ ೨೫ ರಿಂದ ೩೦ ಕಳೆದಿದೆ. ಒಟ್ಟು ಅರ್ಜಿ ಸಲ್ಲಿಸಿದವರ ಸಂಖ್ಯೆ ೭೮೫೦ ಇದ್ದು, ಇದರಲ್ಲಿ ಬೆರಳಣಿಕೆಯಷ್ಟು ಜನರಿಗೆ ಮಾತ್ರ ಹಕ್ಕುಪತ್ರ ನೀಡಲಾಗಿದೆ. ಉಳಿದವರಿಗೆ ನೀಡಿಲ್ಲ. ಸರ್ಕಾರ ಕೂಡಲೇ ಅರ್ಜಿ ಸಲ್ಲಿಸಿರುವ ಪ್ರತಿಯೊಬ್ಬರಿಗೂ ಹಕ್ಕುಪತ್ರ ನೀಡಬೇಕೆಂದು ಆಗ್ರಹಿಸಿದರು.

ತಾಲೂಕಿನಾದ್ಯಂತ ದಲಿತರು ಸತ್ತರೆ ಅಂತ್ಯಕ್ರಿಯೆ ನಡೆಸಲು ರುದ್ರಭೂಮಿ ಇಲ್ಲ. ಶವಸಂಸ್ಕಾರ ದಲಿತರರು ಪರದಾಡುವಂತಾಗಿದೆ. ಕೂಡಲೇ ದಲಿತರಿಗೆ ತಾಲೂಕಿನ ಪ್ರತಿ ಹಳ್ಳಿಗಳಲ್ಲಿ ಪ್ರತ್ಯೇಕ ರುದ್ರಭೂಮಿ ವ್ಯವಸ್ಥೆ ಕಲ್ಪಿಸಬೇಕು. ಜನಸಂಖ್ಯೆ ಹೆಚ್ಚಳದಿಂದ ಪ್ರತಿ ಗ್ರಾಮದಲ್ಲಿ ದಲಿತರು ಒಂದೇ ಮನೆಯಲ್ಲಿ ೨ರಿಂದ೩ ಕುಟುಂಬಗಳು ವಾಸ ಮಾಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಜನಸಂಖ್ಯೆ ಅನುಗುಣವಾಗಿ ನಿವೇಶನ ಖರೀದಿಸಿ ಹಂಚಿಕೆ ಮಾಡಲು ಅಧಿಕಾರವಿದ್ದರೂ, ಸಂಬಂಧಪಟ್ಟ ಅಧಿಕಾರಿಗಳು ಗಮನ ಹರಿಸುತ್ತಿಲ್ಲ. ಕೂಡಲೇ ಸಂಬಂಧಪಟ್ಟ ಅಧಿಕಾರಿಗಳು ಸೂಕ್ತ ನಿವೇಶನ ನೀಡಿ ವಸತಿ ಸೌಲಭ್ಯ ಕಲ್ಪಿಸಬೇಕೆಂದು ಒತ್ತಾಯಿಸಿದರು.

ಫಾರಂ ನಂ.೫೦, ೫೩, ೫೭ರಲ್ಲಿ ಅರ್ಜಿ ಸಲ್ಲಿಸಿದ ಸಾಗುವಳಿದಾರರಿಗೆ ಹಕ್ಕುಪತ್ರ, ದಲಿತರಿಗೆ ಪ್ರತ್ಯೇಕ ಸ್ಮಶಾನ, ಗುಮ್ಮನೂರು ಸ್ಮಶಾನಕ್ಕೆ ಮೀಸಲಿಟ್ಟ ಹಳ್ಳದ ಖರಾಬು ಒತ್ತುವರಿ ತೆರವು, ಹೂವಿನಮಡು ಗ್ರಾಮದಲ್ಲಿ ರಸ್ತೆ ಒತ್ತುವರಿ ತೆರವು, ಕೊಡಗನೂರು ಗ್ರಾಮದ ಗುಂಡುತೋಪಿನಲ್ಲಿ ವಾಸಿಸುವ ನಿವೇಶನ ರಹಿತರಿಗೆ ಕೂಡಲೇ ಹಕ್ಕುಪತ್ರ ವಿತರಣೆ, ಮತ್ತಿ ಗ್ರಾಮದ ಸ್ಮಶಾನ ಒತ್ತುವರಿ ತೆರವು ಸೇರಿದಂತೆ ವಿವಿಧ ಬೇಡಿಕೆ ಈಡೇರಿಸುವಂತೆ ಆಗ್ರಹಿಸಿದರು

ಪ್ರತಿಭಟನೆಯಲ್ಲಿ ಸಂಘದ ರಾಜ್ಯ ಸಂಚಾಲಕ ಕಬ್ಬಳ್ಳಿ ಮೈಲಪ್ಪ, ತಾಲೂಕು ಸಂಚಾಲಕ ಗುಮ್ಮನೂರು ರಾಮಚಂದ್ರಪ್ಪ, ಜಿಲ್ಲಾ ಸಂಚಾಲಕ ಹೂವಿನಮಡು ಅಂಜಿನಪ್ಪ, ಜಿಲ್ಲಾ ಸಂಘಟನಾ ಸಂಚಾಲಕರಾದ ಕೊಡಗನೂರು ಲಕ್ಷ್ಮಣ್, ವಾಸು ಗಾಂಧಿನಗರ, ಅಳಗವಾಡಿ ನಿಂಗರಾಜ್, ಆನಗೋಡು ಸುರೇಶ್, ತಾಲೂಕು ಸಂಘಟನಾ ಸಂಚಾಲಕ ರವಿಬಾಬು, ನಾಗನೂರು ರಾಜ, ಆನಗೋಡು ರಾಜು, ಹೊನ್ನೂರು ಮೋಹನ್, ಮುದಹದಡಿ ಮೈಲಪ್ಪ, ಬೇತೂರು ಕುಮಾರ್ ಇನ್ನಿತರರಿದ್ದರು.

Leave a Reply

Your email address will not be published. Required fields are marked *

error: Content is protected !!