ಈ ರಸ್ತೆ ಮಾಡಿದ ಇಂಜಿನಿಯರ್ ಗಳಿಗೆ ಅವಾರ್ಡ್ ಕೊಡಬೇಕಂತೆ.! ಆದ್ರೂ ಡಿಸಿಗೆ ಯಾಕೆ ದೂರು ನೀಡಿದ್ರು.?

ದಾವಣಗೆರೆ: ನಗರದ ಎಸ್.ಎಸ್. ಬಡಾವಣೆ ಬಿ ಬ್ಲಾಕ್ ನ ರಸ್ತೆ ಕಾಮಗಾರಿ ಸಂಪೂರ್ಣ ಕಳಪೆ ಮಟ್ಟದಿಂದ ಕೂಡಿದ್ದ ಕಾರಣ ರಸ್ತೆ ಹಾಳಾಗಿದ್ದು, ಇದಕ್ಕೆ ಕಾರಣವಾಗಿರುವ ಅಧಿಕಾರಿಗಳ ವಿರುದ್ಧ ಅಲ್ಲಿನ ನಾಗರೀಕರು ಹರಿಹಾಯ್ದಿದ್ದಾರೆ.
ರಸ್ತೆಗೆ ಡಾಂಬರೀಕರಣ ಮಾಡಿ ಇನ್ನೂ ಒಂದೆರಡು ವರ್ಷ ಕಳೆದಿಲ್ಲ. ಆಗಲೇ ರಸ್ತೆ ದ್ವಿಚಕ್ರ ವಾಹನ ಓಡಿಸಲು ಸವಾರರು ಹರಸಾಹಸ ಪಡುವಂತಾಗಿದೆ. ಇನ್ನೂ ಮಳೆಗಾಲವಾದ್ದರಿಂದ ರಸ್ತೆಯಲ್ಲಿ ಮೊಣಕಾಲುದ್ದ ನೀರು ನಿಲ್ಲುವುದರಿಂದ ಪಾದಚಾರಿಗಳಿಗೂ ತೊಂದರೆಯುಂಟಾಗಿದೆ.
ಪಾಲಿಕೆಯ ವ್ಯಾಪ್ತಿಯ 44 ನೇ ವಾರ್ಡ್ ಇದಾಗಿದ್ದು, ನಿನ್ನೆಯಷ್ಟೆ ಇಲ್ಲಿನ ನಾಗರೀಕರು ರಸ್ತೆಯಲ್ಲಿ ಭತ್ತದ ಸಸಿ ನಾಟಿ ಮಾಡಿ, ಕಾಮಗಾರಿ ನಡೆಸಿರುವ ಇಂಜಿನಿಯರ್, ಪಾಲಿಕೆ ಅಧಿಕಾರಿಗಳ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದರು.
ದಾವಣಗೆರೆ ಮಹಾನಗರ ಪಾಲಿಕೆಯ ಸಹಾಯಕ ಇಂಜಿನಿಯರ್ ಅಣಜಿ ನಾಗರಾಜ್ ಎನ್.ಬಿ. ಮತ್ತು ಅಂದಿನ ಹಾಗೂ ಹಾಲಿ ದುಡಾ ಕಚೇರಿಯಲ್ಲಿ ಕಿರಿಯ ಎಂಜಿನಿಯರ್ ಆಗಿರುವ ಅಕ್ಷತಾ ಕೆ.ಟಿ. ಹಾಗೂ ಲಕ್ಷ್ಮೀ ಇವರು ಡಾಂಬರೀಕರಣ ರಸ್ತೆ ಅಭಿವೃದ್ಧಿ ಕೆಲಸದಲ್ಲಿ ಕಳಪೆ ಮಟ್ಟದ ಕಾಮಗಾರಿಯನ್ನು ನಡೆಸಿದ್ದು, ಕಂಟ್ರಾಕ್ಟರ್ ರಿಂದ ಲಂಚ ಪಡೆದು ಕಳಪೆ ಕಾಮಗಾರಿಯನ್ನು ಮಾಡಿದ್ದಾರೆ ಎಂದು ಸಾಮಾಜಿಕ ಕಾರ್ಯಕರ್ತ ಮಲ್ಲಿಕಾರ್ಜುನ್ ಇಂಗಳೇಶ್ವರ ಆರೋಪಿಸಿದ್ದಾರೆ.
ಇವರುಗಳ ಮೇಲೆ ಕಾನೂನು ಕ್ರಮ ತೆಗೆದುಕೊಳ್ಳಬೇಕಾಗಿ ಅವರು ಜಿಲ್ಲಾಧಿಕಾರಿಗೆ, ಮೇಯರ್ ಮತ್ತು ಪಾಲಿಕೆ ಆಯುಕ್ತರಿಗೆ ಮನವಿ ಮಾಡಿದ್ದಾರೆ.