ರಾಜ್ಯ ಸುದ್ದಿ

ಚುನಾವಣಾ ರಣತಂತ್ರ; ಬಿಜೆಪಿಯಿಂದ ಪ್ರಣಾಳಿಕೆ ಕಾರ್ಯತಂತ್ರ

ಬೆಂಗಳೂರು: ಭಾರತೀಯ ಜನತಾ ಪಕ್ಷಕ್ಕೆ ಪ್ರಣಾಳಿಕೆ ಕೇವಲ ಘೋಷಣೆಗೆ ಸೀಮಿತವಾದ ಕಾರ್ಯಕ್ರಮಗಳಲ್ಲ. ಬದಲಾಗಿ ಇದು ಅಭಿವೃದ್ಧಿಗೆ ಪೂರಕ ಹಾಗೂ ಜನರ ಆಶೋತ್ತರಗಳಿಗೆ ಸ್ಪಂದಿಸುವ ಭಗವದ್ಗೀತೆಗೆ ಸಮನಾಗಿರುವ ಯೋಜನೆಗಳು ಎಂದು ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ. ಕೆ. ಸುಧಾಕರ್ ಹೇಳಿದ್ದಾರೆ.
ಬೆಂಗಳೂರಿನಲ್ಲಿ ನಡೆದ ಪ್ರಣಾಳಿಕೆ ಸಲಹಾ ಸಂಗ್ರಹ ಅಭಿಯಾನದ ಸಮಿತಿಯ ಜಿಲ್ಲಾ ಸಂಚಾಲಕರು ಮತ್ತು ಸಹ ಸಂಚಾಲಕರ ಸಭೆಯ ಬಳಿಕ ಮಾತನಾಡಿದ ಅವರು, ರಾಜ್ಯದ ಜನರ ಸದಾಶಯಗಳನ್ನು ಪೂರೈಸುವ ಪ್ರಣಾಳಿಕೆ ಹೊರತರಲು ಯೋಜನೆ ಸಿದ್ಧವಾಗಿದೆ. 31 ಜಿಲ್ಲೆಗಳ ಸಂಚಾಲಕರು, ಸಹ ಸಂಚಾಲಕರು, ಪ್ರಣಾಳಿಕೆ ಸಮಿತಿ ಸದ್ಯರು ಸೇರಿದಂತೆ ಎಲ್ಲರೂ ಮುಂದಿನ ಬಿಜೆಪಿ ಸರ್ಕಾರದ ಗುರಿ ಯಾವುದಿರಬೇಕು ಅನ್ನುವ ಬಗ್ಗೆ ತಮ್ಮ ಅಭಿಪ್ರಾಯಗಳನ್ನು ತಿಳಿಸಿದ್ದಾರೆ ಎಂದರು.

ಬಿಜೆಪಿಗೆ ಪ್ರಣಾಳಿಕೆ ಭಗವದ್ಗೀತೆಯಷ್ಟೇ ಪವಿತ್ರವಾಗಿದೆ. ಪಕ್ಷ ಘೋಷಿಸುವ ಪ್ರತಿಯೊಂದು ಕಾರ್ಯಕ್ರಮಗಳು ಕೂಡ ವಿಭಿನ್ನವಾಗಿರಲಿದ್ದು, ನೈಜವಾಗಿರಲಿದೆ. ರಾಜ್ಯದ ವಸ್ತುಸ್ಥಿತಿ, ಆರ್ಥಿಕ ಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು ಅಭಿವೃದ್ಧಿಯ ನೀಲನಕಾಶೆ ಸಿದ್ಧಪಡಿಸಲಾಗುವುದು. ರಾಜ್ಯದ ಜನರ ಸದಾಶಗಳು ಪ್ರಣಾಳಿಕೆಯಲ್ಲಿ ಇರಲಿದ್ದು, ಪ್ರತಿಯೊಂದು ಯೋಜನೆಗಳ ಅನುಷ್ಠಾನಕ್ಕೆ ನಿಗದಿತ ಸಮಯವನ್ನು ಕೂಡ ಫಿಕ್ಸ್ ಮಾಡಲಾಗುವುದು ಎಂದು ಹೇಳಿದರು.


ಪ್ರಣಾಳಿಕೆ ಜನರ ಧ್ವನಿ ಯಾಗಿರಲಿದೆ. ಹಳ್ಳಿಯಿಂದ ಹಿಡಿದು ರಾಜಧಾನಿ ತನಕ ಎಲ್ಲಾ ಧರ್ಮದ, ಜಾತಿಯ ಸಂಘಟನೆಗಳು, ಚುನಾಯಿತ ಪ್ರತಿನಿಧಿಗಳು, ಪದಾಧಿಕಾರಿಗಳು, ವೃತ್ತಿಪರರು ಹೀಗೆ ಸಾಮಾನ್ಯರಿಂದ ಹಿಡಿದು ಎಲ್ಲರನ್ನೂ ಭೇಟಿ ಮಾಡಿ, ಸಂವಾದ ಮಾಡಿ ಅವರ ಅಭಿಪ್ರಾಯ ಶೇಖರಣೆ ಮಾಡಿ ನಿಗದಿತ ಕಾರ್ಯಕ್ರಮವನ್ನು ಸರ್ಕಾರ ಯಾವ ರೀತಿ ಕೊಡ್ಬೇಕು ಅನ್ನುವ ಬಗ್ಗೆ ಯೋಜನೆ ರೂಪಿಸಲಾಗಿದೆ. ವಾಟ್ಸ್ಆಪ್, ಇ-ಮೇಲ್, ಚಾಟ್ಬೋಟ್ ಸೇರಿದಂತೆ ತಂತ್ರಜ್ಞಾನದ ಸಹಕಾರ ಪಡೆದುಕೊಳ್ಳಲಾಗುವುದ ಎಂದರು.
ಪ್ರತಿಯೊಂದು ಮಂಡಲದಲ್ಲಿ 25 ಸಲಹಾ ಬಾಕ್ಸ್ಗಳನ್ನು ನಿರ್ದಿಷ್ಟ ಸ್ಥಳಗಳಲ್ಲಿ ಇಡಲಾಗಿದೆ. ಜನರು ಪತ್ರದ ಮೂಲಕ ಸಲಹೆ ಬರೆದು, ಅದರಲ್ಲಿ ಹಾಕಿದರೆ, ಅದನ್ನು ವಿಶ್ಲೇಷಣೆ ಮಾಡಿ ಪ್ರಣಾಳಿಕೆಯಲ್ಲಿ ಹೇಗೆ ತರಬೇಕು ಅನ್ನುವುದನ್ನು ಚರ್ಚೆ ಮಾಡಲಾಗುವುದು. ರಾಜ್ಯದ ಜನರ ಭವಿಷ್ಯ ರೂಪಿಸಲು ಎಲ್ಲಾ ರೀತಿಯ ಕಾರ್ಯತಂತ್ರಗಳನ್ನು ಮಾಡಲಾಗುವುದು ಎಂದರು.
ಈಗಾಗಲೇ ಪ್ರಣಾಳಿಕೆಗೆ ಸಂಬಂಧಿಸಿದಂತೆ ವಲಯವಾರು, ವಿಭಾಗವಾರು ಸಭೆ ಆಯೋಜನೆ ಮಾಡಿ ಜವಾಬ್ದಾರಿ ನಿಗದಿ ಮಾಡಲಾಗಿದೆ. ಆರೂವರೆ ಕೋಟಿ ಜನತೆಗೆ ಸುಭಿಕ್ಷೆಯ ಕರ್ನಾಟಕ, ಸಮೃದ್ಧಿ ಕರ್ನಾಟಕ ಜೊತೆಗೆ ಜನರ ಆಶೋತ್ತರಗಳಿಗೆ ಸ್ಪಂದಿಸುವ ಸೂಕ್ಷ್ಮತೆ ಇರುವಂತಹ ಪ್ರಣಾಳಿಕೆ ಇದಾಗಿರಲಿದೆ. ಕೆಲ ಅನ್ಯ ರಾಜ್ಯಗಳ ಒಳ್ಳೆಯ ಕಾರ್ಯಕ್ರಮಗಳು ಕೂಡ ಗಮನದಲ್ಲಿದ್ದು, ಕೇಂದ್ರಸರ್ಕಾರದ ಯೋಜನೆಗಳನ್ನು ಮತ್ತಷ್ಟು ಪರಿಣಾಮಕಾರಿಯಾಗಿ ಜನರಿಗೆ ಹೇಗೆ ತಲುಪಿಸಬೇಕು ಎನ್ನುವ ಬಗ್ಗೆಯೂ ಚರ್ಚೆ ನಡೆಸಲಾಗುವುದು ಎಂದರು.
ಪ್ರಣಾಳಿಕೆಯಲ್ಲಿ ಕಟ್ಟಕಡೆಯ ವ್ಯಕ್ತಿಗೆ ಸಮಾನತೆ, ಸಾಮಾಜಿಕ ನ್ಯಾಯ ಸಿಗುವ ಹಾಗೇ ಕೆಲಸ ಮಾಡಿ ಸಮೃದ್ಧಿ, ಸುಂದರ ಕರ್ನಾಟಕ್ಕೆ ಭದ್ರ ಬುನಾಧಿ ಹಾಕಲಾಗುವುದು. ನವ ಭಾರತದ ನವ ಕರ್ನಾಟಕಕ್ಕೆ ಇದು ನೀಲನಕಾಶೆಯಾಗಿದೆ. 2030ಕ್ಕೆ ಟ್ರಿಲಿಯನ್ ಡಾಲರ್ ಆರ್ಥಿಕ ಪ್ರಧಾನಿ ನರೇಂದ್ರ ಮೋದಿ ಕನಸಿಗೆ 20% ಅಧಿಕ ರಾಜ್ಯದ ಕೊಡುಗೆ ಇರಬೇಕು ಅನ್ನುವ ನಿಟ್ಟಿನಲ್ಲಿ ಪ್ರಣಾಳಿಕೆ ಸಿದ್ಧವಾಗಲಿದೆ ಎಂದು ತಿಳಿಸಿದರು.
ನಾವು ಬದ್ಧತೆಯಿಂದ ಇರುವ ಪ್ರಣಾಳಿಕೆ ನೀಡಿ ಜನರ ಬಳಿ ಮತಭಿಕ್ಷೆ ಕೇಳುತ್ತೇವೆ. ಸ್ಪಷ್ಟ ಬಹುಮತ ಕೊಟ್ಟರೆ, ನಾವು ಉತ್ತರದಾಯಿಗಳಾಗುತ್ತೇವೆ. ಹೀಗಾಗಿ ಬಿಜೆಪಿಗೆ ಬಹುಮತ ಕೊಡಿ. ನಮ್ಮ ಭರವಸೆಗಳನ್ನು 100% ಅನುಷ್ಠಾನ ಮಾಡಲು ಅವಕಾಶ ಕೊಡಿ ಎಂದರು.
ಬಿಜೆಪಿ ಮತ ಕಸಿಯಲು, ಸುಳ್ಳು ಆಶ್ವಾಸನೆಗಳನ್ನು ನೀಡುವಂತಹ ಪಾಪದ ಕೆಲಸ ಮಾಡುವುದಿಲ್ಲ. ಬದಲಾಗಿ ಜನ ಸಾಮಾನ್ಯರ ಬದುಕು ಹಸನಾಗಲು, ಇವತ್ತಿನ ಸ್ಥಿತಿಯಲ್ಲಿ ಯಾವೆಲ್ಲಾ ಸಾಧ್ಯತೆ ಇದೆ, ಅದನ್ನು ಯಾವ ರೀತಿಯಲ್ಲಿ ಪೂರೈಸಬಹುದು ಮತ್ತು ಸಮಯ ನಿಗದಿ ಮಾಡಿ ಕಾರ್ಯಕ್ರಮವನ್ನು ಪೂರ್ಣಮಾಡುವುದನ್ನೇ ಗುರಿಯಾಗಿರಿಸಿಕೊಂಡಿದೆ. ಬೆಂಗಳೂರು ಅಭಿವೃದ್ಧಿಯ ಎಂಜಿನ್ ಆಗಿರುವುದರಿಂದ ರಾಜಧಾನಿಗೆ ವಿಶೇಷ ಒತ್ತು ಹಾಗೂ ಕಾಳಜಿ ನೀಡುವ ಬಗ್ಗೆಯೂ ಚರ್ಚೆ ನಡೆಸಲಾಗುವುದು ಎಂದರು. ಸಮಿತಿಯ ಸಹ ಸಂಚಾಲಕರು, ಸಿಎಂ, ರಾಜ್ಯಾಧ್ಯಕ್ಷರು, ಮುಖಂಡರು ಚರ್ಚೆ ಮಾಡಿ ಒಪ್ಪಿತವಾದ ಒಳ್ಳೆಯ ಪ್ರಣಾಳಿಕೆ ಶೀಘ್ರದಲ್ಲೇ ಹೊರಬರಲಿದೆ ಎಂದು ಹೇಳಿದರು.

Click to comment

Leave a Reply

Your email address will not be published. Required fields are marked *

Most Popular

To Top
error: Content is protected !!