ಚುನಾವಣೆ: ಇಲ್ಲಿವರೆಗೆ ಜಪ್ತಿ ಮಾಡಿಕೊಂಡ ವಸ್ತುಗಳ ಮೌಲ್ಯ 99.18 ಕೋಟಿ

ಚುನಾವಣೆ: ಇಲ್ಲಿವರೆಗೆ ಜಪ್ತಿ ಮಾಡಿಕೊಂಡ ವಸ್ತುಗಳ ಮೌಲ್ಯ 99.18 ಕೋಟಿ

ಬೆಂಗಳೂರು: ಕಳೆದ ಮಾರ್ಚ್‌ 29ರಿಂದ ಈವರೆಗೆ ವಶಪಡಿಸಿಕೊಂಡಿರುವ ನಗದು, ಮದ್ಯ, ಉಚಿತ ಕೊಡುಗೆಗೆ ಬಳಸುವ ಉತ್ಪನ್ನಗಳ ಒಟ್ಟು ಮೌಲ್ಯ 99.18 ಕೋಟಿ ತಲುಪಿದೆ ಎಂದು ರಾಜ್ಯ ಮುಖ್ಯ ಚುನಾವಣಾಧಿಕಾರಿ ಕಚೇರಿ ತಿಳಿಸಿದೆ.
ಚುನಾವಣಾ ಅಕ್ರಮ ತಡೆಗೆ ಸ್ಥಾಪಿಸಿರುವ ತನಿಖಾ ಠಾಣೆಗಳು ಮತ್ತು ನೇಮಿಸಿರುವ ಜಾಗೃತ ದಳಗಳು ಈ ವಸ್ತುಗಳನ್ನು ವಶಪಡಿಸಿಕೊಂಡಿವೆ.
ಶನಿವಾರ ಒಂದೇ ದಿನ 88.50 ಲಕ್ಷ ನಗದು, 30.86 ಲಕ್ಷ ಮೌಲ್ಯದ ಉಚಿತ ಕೊಡುಗೆಗಳ ಉತ್ಪನ್ನಗಳು,1.67 ಕೋಟಿ ಮೌಲ್ಯದ 55,498 ಲೀಟರ್‌ ಮದ್ಯ, 16.97 ಲಕ್ಷ ಮೌಲ್ಯದ 19.2 ಕೆ.ಜಿ. ಗಾಂಜಾ, 16.07 ಲಕ್ಷ ಮೌಲ್ಯದ 310 ಗ್ರಾಂ. ಚಿನ್ನ, 3.20 ಲಕ್ಷ ಮೌಲ್ಯದ 5.45 ಕೆ.ಜಿ. ಬೆಳ್ಳಿಯನ್ನು ವಶಪಡಿಸಿಕೊಳ್ಳಲಾಗಿದೆ.
ಈವರೆಗೆ 36.80 ಕೋಟಿ ನಗದು, ಮತದಾರರಿಗೆ ಉಚಿತವಾಗಿ ವಿತರಿಸಲು ಬಳಸುವ 15.46 ಕೋಟಿ ಮೌಲ್ಯದ ವಿವಿಧ ವಸ್ತುಗಳು, 26.53 ಕೋಟಿ ಮೌಲ್ಯದ 5.20 ಕೋಟಿ ಲೀಟರ್‌ ಮದ್ಯ, 2.89 ಕೋಟಿ ಮೌಲ್ಯದ 336 ಕೆ.ಜಿ. ಮಾದಕವಸ್ತುಗಳು, 14.93 ಕೋಟಿ ಮೌಲ್ಯದ 34.31 ಕೆ.ಜಿ. ಚಿನ್ನ ಹಾಗೂ 17.48 ಕೋಟಿ ಮೌಲ್ಯದ 404 ಕೆ.ಜಿ. ಬೆಳ್ಳಿಯನ್ನು ವಶಪಡಿಸಿಕೊಳ್ಳಲಾಗಿದೆ .
ನಗದು, ಮದ್ಯ ಸೇರಿದಂತೆ ವಿವಿಧ ವಸ್ತುಗಳನ್ನು ವಶಪಡಿಸಿಕೊಂಡಿರುವ ಪ್ರಕರಣಗಳಲ್ಲಿ ಒಟ್ಟು 792 ಎಫ್‌ಐಆರ್‌ ದಾಖಲಿಸಲಾಗಿದೆ. ಸಿ–ವಿಜಿಲ್‌ ತಂತ್ರಾಂಶದ ಮೂಲಕ 1,760 ದೂರುಗಳು ಬಂದಿವೆ. ಅವುಗಳಲ್ಲಿ 1,348 ದೂರುಗಳು ನಿಜವೆಂದು ಕಂಡುಬಂದಿದ್ದು ಕ್ರಮ ಕೈಗೊಳ್ಳಲಾಗಿದೆ .
ದಾಖಲೆಯಿಲ್ಲದ ಚಿನ್ನ– ಬೆಳ್ಳಿ ಆಭರಣ, ನಗದು ಜಪ್ತಿ– (ಬೆಳಗಾವಿ): ದಾಖಲೆ ಇಲ್ಲದೆ ಸಾಗಿಸುತ್ತಿದ್ದ 4.15 ಲಕ್ಷ ಮೌಲ್ಯದ ಚಿನ್ನ– ಬೆಳ್ಳಿ ಆಭರಣಗಳನ್ನು ಕಿತ್ತೂರು ಚನ್ನಮ್ಮನ ಚೆಕ್‌ಪೋಸ್ಟ್‌ನಲ್ಲಿ ಭಾನುವಾರ ಜಪ್ತಿ ಮಾಡಲಾಗಿದೆ. ನಿಪ್ಪಾಣಿ ಚೆಕ್‌ಪೋಸ್ಟ್‌ನಲ್ಲಿ 5.96 ಲಕ್ಷ ನಗದು ವಶಪಡಿಸಿಕೊಳ್ಳಲಾಗಿದೆ.
ಜಮಖಂಡಿ ತಾಲ್ಲೂಕಿನ ಚಿಕ್ಕಲಕಿ ಕ್ರಾಸ್ ಚೆಕ್‌ ಪೋಸ್ಟ್‌ ಬಳಿ ವಾಹನದಲ್ಲಿ ಸಾಗಿಸುತ್ತಿದ್ದ 16 ಲಕ್ಷ ಮೌಲ್ಯದ 307 ಗ್ರಾಂ ಚಿನ್ನ ಜಪ್ತಿ ಮಾಡಲಾಗಿದೆ. ಇದೇ ಚೆಕ್‌ ಪೋಸ್ಟ್‌ನಲ್ಲಿ 1.50 ಲಕ್ಷ ನಗದು, ಬಾಗಲಕೋಟೆ, ತೇರದಾಳ ಸೇರಿದಂತೆ ವಿವಿಧೆಡೆ 24,892 ಮೌಲ್ಯದ ಮದ್ಯ ವಶಪಡಿಸಿಕೊಳ್ಳಲಾಗಿದೆ.

Leave a Reply

Your email address will not be published. Required fields are marked *

error: Content is protected !!