ಭಾರತದ ರಾಯಭಾರ ಕಚೇರಿ ಪೋಲೆಂಡ್‌ಗೆ ಸ್ಥಳಾಂತರ
ನವದೆಹಲಿ: ಉಕ್ರೇನ್‌ನಲ್ಲಿ ರಷ್ಯಾ ದಾಳಿ ಹೆಚ್ಚಿರುವುದರಿಂದ ಭಾರತದ ರಾಯಭಾರ ಕಚೇರಿಯನ್ನು ಉಕ್ರೇನ್‌ನಿಂದ ತಾತ್ಕಾಲಿಕವಾಗಿ ಪೋಲೆಂಡ್‌ಗೆ ಸ್ಥಳಾಂತರಗೊಳ್ಳಲಿದೆ. ರಷ್ಯಾ ಮತ್ತು ಉಕ್ರೇನ್ ನಡುವಿನ ಸಂಘರ್ಷ 18ನೇ ದಿನವೂ ಮುಂದುವರಿದಿದೆ. ‘ಉಕ್ರೇನ್‌ನ ಪಶ್ಚಿಮ ಭಾಗಗಳಲ್ಲೂ ದಾಳಿ ನಡೆಯುತ್ತಿದ್ದು, ಭದ್ರತಾ ಪರಿಸ್ಥಿತಿಯು ಕುಸಿಯುತ್ತಿದೆ. ಉಕ್ರೇನ್‌ನಲ್ಲಿರುವ ಭಾರತದ ರಾಯಭಾರ ಕಚೇರಿಯನ್ನು ತಾತ್ಕಾಲಿಕವಾಗಿ ಪೋಲೆಂಡ್‌ಗೆ ಸ್ಥಳಾಂತರಿಸಲು ನಿರ್ಧರಿಸಲಾಗಿದೆ. ಮುಂದಿನ ಬೆಳವಣಿಗೆಗಳನ್ನು ಆಧರಿಸಿ ಪರಿಸ್ಥಿತಿಯ ಬಗ್ಗೆ ಮರು ಅವಲೋಕನ ನಡೆಸಲಾಗುತ್ತದೆ’ ಎಂದು ಸರ್ಕಾರ ಹೇಳಿದೆ. ಭಾನುವಾರ ಉಕ್ರೇನ್‌ನ ಸೇನಾ ನೆಲೆಯ ಮೇಲೆ ರಷ್ಯಾದ ವಾಯುಪಡೆ ಆಕ್ರಮಣ ನಡೆಸಿದ್ದು, ಕನಿಷ್ಠ 35 ಮಂದಿ ಸಾವಿಗೀಡಾಗಿದ್ದಾರೆ ಹಾಗೂ 57 ಮಂದಿ ಗಾಯಗೊಂಡಿದ್ದಾರೆ. ಪೋಲೆಂಡ್‌ನ ಗಡಿಗೆ ಸಮೀಪದಲ್ಲಿ ಭಾನುವಾರ ವೈಮಾನಿಕ ದಾಳಿ ನಡೆದಿರುವುದಾಗಿ ಉಕ್ರೇನ್ ಅಧಿಕಾರಿಗಳು ತಿಳಿಸಿದ್ದಾರೆ. ದಾಳಿ ನಡೆದಿರುವ ಸ್ಥಳವು ಪೋಲೆಂಡ್ ಗಡಿ ಭಾಗಕ್ಕೆ 25 ಕಿ.ಮೀ. ದೂರದಲ್ಲಿದೆ. ನ್ಯಾಟೊ ಪಡೆಗಳೊಂದಿಗೆ ಜಂಟಿ ಸಮರಾಭ್ಯಾಸ ಚಟುವಟಿಕೆಗಳನ್ನು ಇಲ್ಲಿನ ಸೇನಾ ತರಬೇತಿ ಕೇಂದ್ರದಲ್ಲಿ ನಡೆಸಲಾಗುತ್ತಿತ್ತು.