ತುರ್ತು ಸಂದರ್ಭದ ಕೊರೋನಾ ವಾರಿಯರ್ ಗಳನ್ನೇ ಸೇವೆಯಲ್ಲಿ ಮುಂದುವರೆಸುವಂತೆ ಆಗ್ರಹ
ದಾವಣಗೆರೆ: ಕೋವಿಡ್ ನಂತಹ ತುರ್ತು ಸಂದರ್ಭದಲ್ಲಿ ಆರೋಗ್ಯ ಇಲಾಖೆ ಮೂಲಕ ಸಾರ್ವಜನಿಕ ಸೇವೆ ಮಾಡುತ್ತಿರುವ ಎಲ್ಲಾ ಕೊರೋನಾ ವಾರಿಯರ್ ಗಳನ್ನೇ ಸೇವೆಯಲ್ಲಿ ಮುಂದುವರೆಸುವಂತೆ ಈಗಾಗಲೇ ಸೇವೆ ಸಲ್ಲಿಸುತ್ತಿರುವ ಕೊರೋನಾ ವಾರಿಯರ್ಸ್ ಸರ್ಕಾರವನ್ನು ಆಗ್ರಹಿಸಿದರು.
ಸುದ್ದಿಗೋಷ್ಠಿಯಲ್ಲಿಂದು ಮಾತನಾಡಿದ ನಾಗರಾಜ್, ಎ ಪಿ ಸ್ವಾಮಿ, ಕಳೆದ 1 ವರ್ಷ 8 ತಿಂಗಳಿಂದ ನಾವು ಕೊರೋನಾದಂತಹ ಸಾಂಕ್ರಾಮಿಕ ರೋಗವನ್ನು ಹಿಮ್ಮೆಟ್ಟಿಸಲು ಆರೋಗ್ಯ ಇಲಾಖೆಯೊಂದಿಗೆ ಕೈಜೋಡಿಸಿ ಕೆಲಸ ಮಾಡುತ್ತಿದ್ದೇವೆ. ಆದರೆ ಇದೀಗ ಇದೇ ಮಾರ್ಚ್ ಮೂವತ್ತುರಂದು ನಮ್ಮಗಳನ್ನು ಬಿಡುಗಡೆ ಮಾಡಲಾಗುತ್ತಿದೆ. ಇದರಿಂದಾಗಿ ನಮ್ಮ ಬದುಕು ಅತಂತ್ರವಾಗಿದೆ. ಕಾರಣ ಸರ್ಕಾರ ಈ ಬಗ್ಗೆ ಗಮನ ಹರಿಸಬೇಕೆಂದು ಮನವಿ ಮಾಡಿದರು.ಸಾರ್ವಜನಿಕರ ಆರೋಗ್ಯದ ಹಿತದೃಷ್ಟಿಯಿಂದ ಕೊರೋನ ವಾರಿಯರ್ಸ್ ಆಗಿ ಕೆಲಸ ಮಾಡುತ್ತಿರುವ ನೌಕರರನ್ನು ಸೇವೆಯಲ್ಲಿ ಮಾರ್ಚ್ ನಂತರವೂ ಮುಂದುವರಿಸಬೇಕು. ಬಾಕಿ ವೇತನ ಹಾಗೂ ಪ್ರೋತ್ಸಾಹ ಧನವನ್ನು ಈ ಕೂಡಲೇ ಬಿಡುಗಡೆ ಮಾಡಬೇಕು. ಕೊರೋನ ವಾರಿಯರ್ಸ್ ಆಗಿ ಕೆಲಸ ಮಾಡಿರುವ ಎಲ್ಲ ತಾತ್ಕಾಲಿಕ ನೌಕರರಿಗೆ ಕಳೆದ2020ರ ಸೆಪ್ಟೆಂಬರ್ 24ರಿಂದ 2021ರ ಸೆಪ್ಟೆಂಬರ್ 30ರವರೆಗೆ ವಿಶೇಷ ಹೆಚ್ಚುವರಿ ಭತ್ಯೆಯನ್ನು ನೀಡಬೇಕು. ಅಲ್ಲದೇ ಸಾರ್ವಜನಿಕರು ಸಂಕಷ್ಟ ಸಮಯದಲ್ಲಿ ಇದ್ದಾಗ ಸೇವೆ ಸಲ್ಲಿಸಿದ ನಮಗೆ ಸರ್ಕಾರ ಈ ಹುದ್ದೆಗಳಿಗೆ ಮುಂದೆ ಆಗಬಹುದಾದ ನೇರ ನೇಮಕಾತಿ ಸಂದರ್ಭದಲ್ಲಿ ನಮ್ಮ ಸೇವೆಯನ್ನು ಕಾಯಂ ಮಾಡಬೇಕೆಂದು ಆಗ್ರಹಿಸಿದರು.
ಕೊರೋನಾ ಮಹಾಮಾರಿ ಸಂದರ್ಭದಲ್ಲಿ ಸರ್ಕಾರ ವಿವಿಧ ಆದೇಶಗಳ ಮೂಲಕ ವೈದ್ಯರು, ಫಾರ್ಮಸಿ ಅಧಿಕಾರಿಗಳು, ಶುಶ್ರೂಷಾ ಅಧಿಕಾರಿಗಳು, ಪ್ರಯೋಗ ಶಾಲಾ ತಂತ್ರಜ್ಞರು, ಆರೋಗ್ಯ ನಿರೀಕ್ಷಕರು, ಸಂರಕ್ಷಣಾ ಅಧಿಕಾರಿಗಳು, ದತ್ತಾಂಶ ನಮೂದಕರು, ಡಿ ಗ್ರೂಪ್ ನೌಕರರನ್ನು ತಾತ್ಕಾಲಿಕವಾಗಿ ನೇಮಕ ಮಾಡಿದ್ದು ಈಗಲೂ ಆ ಎಲ್ಲಾ ಹುದ್ದೆಗಳು ಖಾಲಿ ಇವೆ ಕಾರಣ ಸರ್ಕಾರ ನಮ್ಮನ್ನು ಆಯ್ಕೆ ಮಾಡಲು ಪರಿಗಣಿಸಿ ಆದ್ಯತೆ ನೀಡಬೇಕು ಎಂದು ಒತ್ತಾಯಿಸಿದರು.ಸುದ್ದಿಗೋಷ್ಠಿಯಲ್ಲಿ ಪವನ್ ಕುಮಾರ್, ವಾಣಿಶ್ರೀ, ನಂದಿನಿ ಸತೀಶ್, ಪ್ರಮೋದ್ ಸೇರಿದಂತೆ ಹಲವರಿದ್ದರು.