ಮೇ 8 ರ ಸಂಜೆ 6 ಗಂಟೆಗೆ ಬಹಿರಂಗ ಪ್ರಚಾರ ಅಂತ್ಯ: ಮನೆ ಮನೆ ಭೇಟಿಗೆ ಮಾತ್ರ ಅವಕಾಶ: ಕ್ಷೇತ್ರದ ಮತದಾರ ಅಲ್ಲದವರು ಕ್ಷೇತ್ರ ಬಿಡಲು ಸೂಚನೆ

ಮೇ 8 ರ ಸಂಜೆ 6 ಗಂಟೆಗೆ ಬಹಿರಂಗ ಪ್ರಚಾರ ಅಂತ್ಯ: ಮನೆ ಮನೆ ಭೇಟಿಗೆ ಮಾತ್ರ ಅವಕಾಶ: ಕ್ಷೇತ್ರದ ಮತದಾರ ಅಲ್ಲದವರು ಕ್ಷೇತ್ರ ಬಿಡಲು ಸೂಚನೆ

ದಾವಣಗೆರೆ: ಸಾರ್ವತ್ರಿಕ ವಿಧಾನಸಭಾ ಚುನಾವಣೆಗೆ ಮತದಾನವು ಮೇ 10 ರಂದು ಬೆಳಗ್ಗೆ 7 ರಿಂದ ಸಂಜೆ 6 ಗಂಟೆಯವರೆಗೆ ನಡೆಯಲಿದ್ದು ಮತದಾನ ಮುಕ್ತಾಯವಾಗುವ 48 ಗಂಟೆ ಮುಂಚಿತವಾಗಿ ಬಹಿರಂಗ ಪ್ರಚಾರ ಅಂತ್ಯಗೊಳ್ಳಲಿದ್ದು ಮತದಾರರಲ್ಲದವರು ಮೇ 8 ರ ಸಂಜೆ 6 ಗಂಟೆಯೊಳಗೆ ಕ್ಷೇತ್ರಬಿಟ್ಟು ಹೋಗಬೇಕೆಂದು ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಚುನಾವಣಾಧಿಕಾರಿ ಶಿವಾನಂದ ಕಾಪಶಿ ತಿಳಿಸಿದರು.

ಅವರು ಭಾನುವಾರ (ಮೇ.7) ಅವರ ಕಚೇರಿಯಲ್ಲಿ ಚುನಾವಣಾ ಮತದಾನ ಕುರಿತು ಏರ್ಪಡಿಸಲಾದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು. ಮೇ 8 ರ ಸಂಜೆ 6 ಗಂಟೆಗೆ ಬಹಿರಂಗ ಪ್ರಚಾರ ಮುಕ್ತಾಯವಾಗಲಿದ್ದು ಅಭ್ಯರ್ಥಿಗಳು ಮಾತ್ರ ಮನೆ ಮನೆ ಪ್ರಚಾರವನ್ನು ಮಾಡಬಹುದಾಗಿದೆ. ಮತ್ತು ಈ ವೇಳೆ ಒಬ್ಬ ಅಭ್ಯರ್ಥಿಗೆ ಮೂರು ವಾಹನಗಳಿಗೆ ಮಾತ್ರ ಅನುಮತಿ ನೀಡಲಾಗಿರುತ್ತದೆ. ಕ್ಷೇತ್ರದ ಮತದಾರರಲ್ಲದವರು ಕ್ಷೇತ್ರವನ್ನು ಬಿಟ್ಟು ಹೋಗತಕ್ಕದ್ದು ಮತ್ತು ಲಾಡ್ಜ್, ಕಲ್ಯಾಣ ಮಂಟಪ ಸೇರಿದಂತೆ ಇತರೆ ಕಡೆ ವಾಸ್ತವ್ಯ ಮಾಡಿದಲ್ಲಿ ಪೊಲೀಸ್ ಇಲಾಖೆಯಿಂದ ತಪಾಸಣೆ ನಡೆಸಲಾಗುತ್ತದೆ ಎಂದರು.

ನಿಷೇಧಾಜ್ಞೆ ಜಾರಿ :ಬಹಿರಂಗ ಪ್ರಚಾರ ಅಂತ್ಯವಾಗುವ ಸಮಯದಿಂದ ಮೇ 11 ರ ಬೆಳಗ್ಗೆ 6 ಗಂಟೆಯವರೆಗೆ 144 ಸೆಕ್ಷನ್ ಜಾರಿಗೊಳಿಸಿ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ. 5 ಜನರಿಗಿಂತ ಹೆಚ್ಚಾಗಿ ಯಾವುದೇ ಗುಂಪಾಗಿ ಭಾಗಹಿಸುವಂತಿಲ್ಲ. ಸಾರ್ವಜನಿಕ ಸಭೆಗಳನ್ನು ನಡೆಸುವುದನ್ನು ನಿಷೇಧಿಸಲಾಗಿದೆ. ಯಾವುದೇ ಸಂಘಟನೆಗಳು, ರಾಜಕೀಯ ಪಕ್ಷಗಳು, ಧಾರ್ಮಿಕ ಪಂಗಡಗಳು ಮೆರವಣಿಗೆ ಮಾಡುವಂತಿಲ್ಲ. ಧ್ವನಿವರ್ಧಕ ಉಪಯೋಗಿಸುವಂತಿಲ್ಲ, ಜಾತಿ, ಧರ್ಮ ಆಧಾರಿತ ದ್ವೇಷ ಭಾಷಣ ಮಾಡುವಂತಿಲ್ಲ ಮತ್ತು ಜಾತಿ, ಧರ್ಮದ ಹೆಸರಿನಲ್ಲಿ ಮತಯಾಚನೆ ಮಾಡುವಂತಿಲ್ಲ.

ಮದುವೆಗಳಲ್ಲಿ ರಾಜಕೀಯ ಗಿಪ್ಟ್ ಇಲ್ಲ : ಮದುವೆ ಸೇರಿದಂತೆ ಇನ್ನಿತರೆ ಖಾಸಗಿ ಕಾರ್ಯಕ್ರಮಗಳಲ್ಲಿ ಯಾವುದೇ ರಾಜಕೀಯ ವ್ಯಕ್ತಿಗಳು ಭಾಗವಹಿಸುವಂತಿಲ್ಲ, ಭಾಗವಹಿಸಿದಲ್ಲಿ ಯಾವುದೇ ವಿಧವಾದ ಕೊಡುಗೆಗಳನ್ನು ನೀಡುವಂತಿಲ್ಲ.

ಮತಗಟ್ಟೆ 100 ವ್ಯಾಪ್ತಿಯಲ್ಲಿ ಮತಪ್ರಚಾರ ಇಲ್ಲ: ಮತಗಟ್ಟೆ 100 ಮೀಟರ್ ಒಳಗೆ ಯಾವುದೇ ಚುನಾವಣಾ ಮತ ಪ್ರಚಾರ ಮಾಡುವಂತಿಲ್ಲ. ಅಭ್ಯರ್ಥಿಗಳು, ಪಕ್ಷದವರು ಮತ ಕೇಂದ್ರದ 200 ಮೀಟರ್ ವ್ಯಾಪ್ತಿ ನಂತರ 1 ಟೇಬಲ್, 2 ಚೇರ್ ಹಾಗೂ 1 ಬ್ಯಾನರ್ 3 ಅಡಿ ಉದ್ದ ಮತ್ತು 1.5 ಅಡಿ ಎತ್ತರ ಇರುವುದನ್ನು ಉಪಯೋಗಿಸಿ ಮತದಾರರ ಪ್ರಚಾರ ಸಹಾಯವಾಣಿ ನಡೆಸಲು ಅವಕಾಶ ಇದೆ. ಮತ್ತು ಇವರು ಕಡ್ಡಾಯವಾಗಿ ಮತದಾರರ ಗುರುತಿನ ಚೀಟಿಯನ್ನು ಇಟ್ಟುಕೊಂಡಿರಬೇಕು, ಇದಕ್ಕೆ ಚುನಾವಣಾಧಿಕಾರಿಯ ಅನುಮತಿ ಕಡ್ಡಾಯವಾಗಿದೆ. ಮತಗಟ್ಟೆ 100 ಮೀಟರ್ ವ್ಯಾಪ್ತಿಯಲ್ಲಿ ಯಾವುದೇ ಮಾರಕಾಸ್ತ್ರವನ್ನು ತೆಗೆದುಕೊಂಡು ಹೋಗುವುದನ್ನು ನಿಷೇಧಿಸಿದೆ. ಯಾವುದೇ ಶಾಸಕರು, ಸಂಸದರು, ಸಚಿವರುಗಳು ಅಭ್ಯರ್ಥಿಗಳಿಗೆ ಏಜೆಂಟರು, ಮತದಾನ ಏಜೆಂಟರು, ಎಣಿಕೆ ಏಜೆಂಟರಾಗುವಂತಿಲ್ಲ. ಮತದಾನ ಕೇಂದ್ರದೊಳಗೆ ಮತಗಟ್ಟೆ ಅಧಿಕಾರಿಗಳಿಗೆ, ಚುನಾವಣಾ ಕರ್ತವ್ಯ ನಿರತ ಅಧಿಕಾರಿಗಳಿಗೆ, ಚುನಾವಣಾ ಆಯೋಗದಿಂದ ನೇಮಕವಾದ ಅಧಿಕಾರಿಗಳಿಗೆ, ಅಭ್ಯರ್ಥಿಗಳ ಒಬ್ಬ ಏಜೆಂಟರಿಗೆ, ಅಂಧ, ದುರ್ಬಲ ಮತದಾರರ ಒಬ್ಬ ಸಹಾಯಕರಿಗೆ ಮಾತ್ರ ಅವಕಾಶ ಇರುತ್ತದೆ. ಮತದಾನದ ವೇಳೆ ಎಡಗೈ ತೋರು ಬೆರಳಿಗೆ ಅಳಿಸಲಾಗದ ಶಾಹಿಯನ್ನು ಹಾಕಲಾಗುತ್ತದೆ.

ಮತದಾನಕ್ಕೆ ಎಫಿಕ್ ಜೊತೆ ಇತರೆ 12 ದಾಖಲೆಗಳಿಗೆ ಅವಕಾಶ: ಮೇ 10 ರಂದು ನಡೆಯುವ ಮತದಾನದ ವೇಳೆ ಚುನಾವಣಾ ಆಯೋಗ ನೀಡಿರುವ ಗುರುತಿನ ಚೀಟಿ ಜೊತೆಗೆ ಪರ್ಯಾಯವಾಗಿ ಇತರೆ 12 ದಾಖಲೆಗಳಲ್ಲಿ ಒಂದನ್ನು ಹಾಜರುಪಡಿಸಿ ಮತದಾನ ಮಾಡಬಹುದಾಗಿದೆ. ಆಧಾರ್ ಕಾರ್ಡ್, ಉದ್ಯೋಗ ಖಾತರಿ ಕಾರ್ಡ್, ಬ್ಯಾಂಕ್ ಅಥವಾ ಅಂಚೆ ಇಲಾಖೆಯಿಂದ ಪಡೆದ ಭಾವಚಿತ್ರವಿರುವ ಪಾಸ್ ಬುಕ್, ಕಾರ್ಮಿಕ ಸಚಿವಾಲಯದಿಂದ ನೀಡಲಾದ ಆರೋಗ್ಯ ಸ್ಮಾರ್ಟ್ ಕಾರ್ಡ್, ಡ್ರೈವಿಂಗ್ ಲೈಸೆನ್ಸ್, ಪಾನ್ ಕಾರ್ಡ್, ಸ್ಮಾರ್ಟ್ ಕಾರ್ಡ್ ಆರ್‍ಜಿಐ ನೀಡಿದ ಎನ್‍ಪಿಆರ್, ಪಾಸ್‍ಪೋರ್ಟ್, ಭಾವಚಿತ್ರವಿರುವ ಪಿಂಚಣಿ ದಾಖಲೆ, ಕೇಂದ್ರ, ರಾಜ್ಯ ಹಾಗೂ ಸಾರ್ವಜನಿಕ ಉದ್ದೆಮೆಗಳಲ್ಲಿ ನೀಡಿರುವ ಭಾವಚಿತ್ರವಿರುವ ನೌಕರರ ಗುರುತಿನ ಚೀಟಿ, ಎಂ.ಪಿ, ಎಂ.ಎಲ್.ಸಿ.ಯವರು ನೀಡಿರುವ ಅಧಿಕೃತ ಗುರುತಿನ ಚೀಟಿ, ಕೇಂದ್ರ ಸಾಮಾಜಿಕ ನ್ಯಾಯ, ಸಬಲೀಕರಣ ಇಲಾಖೆಯಿಂದ ನೀಡಿರುವ ವಿಶೇಷಚೇತನ ಗುರುತಿನ ಚೀಟಿ, ಇವುಗಳಲ್ಲಿ ಒಂದನ್ನು ಹಾಜರುಪಡಿಸಿ ಮತದಾನ ಮಾಡಬಹುದಾಗಿದೆ.

 7 ಕ್ಷೇತ್ರಗಳಿಂದ 1685 ಮತದಾನ ಕೇಂದ್ರಗಳು: ದಾವಣಗೆರೆ ಜಿಲ್ಲೆಯಲ್ಲಿ 7 ವಿಧಾನಸಭಾ ಕ್ಷೇತ್ರಗಳಿಂದ 1685 ಮತಗಟ್ಟೆಗಳನ್ನು ಸ್ಥಾಪಿಸಲಾಗಿದೆ. ಇದರಲ್ಲಿ ಜಗಳೂರು 262, ಹರಿಹರ 228, ದಾವಣಗೆರೆ ಉತ್ತರ 242, ದಕ್ಷಿಣ 214, ಮಾಯಕೊಂಡ 240, ಚನ್ನಗಿರಿ 254 ಹಾಗೂ ಹೊನ್ನಾಳಿ 245 ಮತಗಟ್ಟೆಗಳಿವೆ.

ಜಿಲ್ಲೆಯಲ್ಲಿ 1442553 ಮತದಾರರು: ಜಿಲ್ಲೆಯ 7 ಕ್ಷೇತ್ರಗಳಿಂದ 721964 ಪುರುಷ, 720004 ಮಹಿಳೆಯರು, 118 ಇತರೆ, 467 ಸೇವಾ ಮತದಾರರು ಸೇರಿ 1442553 ಮತದಾರರಿದ್ದಾರೆ. ಇದರಲ್ಲಿ ಜಗಳೂರು 97690 ಪುರುಷ, 95257 ಮಹಿಳೆ, 11 ಇತರೆ ಹಾಗೂ 70 ಸೇವಾ ಮತದಾರರು ಸೇರಿ 193028 ಮತದಾರರು. ಹರಿಹರ 103667 ಪುರುಷ, 103832 ಮಹಿಳೆ, 18 ಇತರೆ, 72 ಸೇವಾ ಮತದಾರರು ಸೇರಿ 207589. ದಾವಣಗೆರೆ ಉತ್ತರ 119353 ಪುರುಷ, 121841 ಮಹಿಳೆ, 38 ಇತರೆ, 46 ಸೇವಾ ಮತದಾರರು ಸೇರಿ 241278. ದಾವಣಗೆರೆ ದಕ್ಷಿಣ 104762 ಪುರುಷ, 105873 ಮಹಿಳೆ, 33 ಇತರೆ ಹಾಗೂ 40 ಸೇವಾ ಮತದಾರರು ಸೇರಿ 210708. ಮಾಯಕೊಂಡ 96491 ಪುರುಷ, 94803 ಮಹಿಳೆಯರು, 6 ಇತರೆ, 121 ಸೇವಾ ಮತದಾರರು ಸೇರಿ 191421. ಚನ್ನಗಿರಿ 100266 ಪುರುಷ, 99194 ಮಹಿಳೆ, 8 ಇತರೆ, 49 ಸೇವಾ ಮತದಾರರು ಸೇರಿ 199517. ಹೊನ್ನಾಳಿ 99735 ಪುರುಷ, 99204 ಮಹಿಳೆ, 4 ಇತರೆ ಹಾಗೂ 69 ಸೇವಾ ಮತದಾರರು ಸೇರಿ ಒಟ್ಟು 199012 ಮತದಾರರಿದ್ದಾರೆ.

ಮತದಾರರ ವಯೋಮಾನದ ವಿವರ: ಜಿಲ್ಲೆಯ 7 ಕ್ಷೇತ್ರಗಳಿಂದ 18-19 ರ ಯುವ ಹೊಸ ಮತದಾರರು 35454, 20 ರಿಂದ 29 ವರ್ಷದವರು 287161, 30-39 ರ ವಯೋಮಾನ 342321, 40-49 ವಯೋಮಾನ 306292, 50-59 ರ ವಯೋಮಾನ 227876, 60-69 ವಯೋಮಾನ 143794, 70-79 ರ ವಯೋಮಾನ 71589 ಮತ್ತು 80 ವರ್ಷ ಮೇಲ್ಪಟ್ಟು 27599 ಮತದಾರರಿದ್ದಾರೆ.

ಮನೆಯಿಂದ ಮತದಾನ: ಇದೇ ಮೊದಲ ಭಾರಿ ಮನೆಯಿಂದ ಮತದಾನ ಮಾಡಲು ಹಿರಿಯ ನಾಗರೀಕರಿಗೆ ಮತ್ತು ವಿಶೇಷಚೇತನರಿಗೆ ಅವಕಾಶ ಕಲ್ಪಿಸಿದ್ದು 80 ವರ್ಷ ಮೇಲ್ಪಟ್ಟ 1870 ಮತದಾರರು ಮನೆಯಿಂದಲೇ ಮತದಾನ ಮಾಡುತ್ತೇನೆ ಎಂದು ದೃಢೀಕರಿಸಿದ್ದು ಇದರಲ್ಲಿ 1784 ಜನರು ಮತ ಚಲಾಯಿಸಿ ಶೇ 95.40 ರಷ್ಟು ಮತದಾನವಾಗಿದೆ. 510 ವಿಶೇಷಚೇತನರಲ್ಲಿ 495 ಜನರು ಮತದಾನ ಮಾಡಿ ಶೇ 97.04 ರಷ್ಟು ಮತದಾನ ಮಾಡಲಾಗಿದೆ. ಅಗತ್ಯ ಸೇವಾ ಇಲಾಖೆಯ ಸಿಬ್ಬಂದಿಗಳು 339 ಜನರಲ್ಲಿ 268 ಜನರು ಮತದಾನ ಮಾಡಿ ಶೇ 79.05 ರಷ್ಟು ಮತದಾನ ಮಾಡಲಾಗಿದೆ. 10751 ಮತದಾನ ಸಿಬ್ಬಂದಿಗಳಲ್ಲಿ ಮೇ 6 ರ ವರೆಗೆ 4562 ಮತದಾನ ಮಾಡಲಾಗಿದ್ದು ಮತದಾನ ಸಿಬ್ಬಂದಿಗೆ ಇನ್ನೂ ಮತದಾನ ಮಾಡಲು ಕಾಲಾವಕಾಶ ಇರುತ್ತದೆ.

ಮತದಾನಕ್ಕೆ ನಿಯೋಜಿಸಿದ ಸಿಬ್ಬಂದಿಗಳ ವಿವರ: ಮತದಾನದ ದಿನ ಮೈಕ್ರೋ ಅಬ್ಸರ್‍ವರ್, ಮತದಾನ ಅಧಿಕಾರಿ ಹಾಗೂ ಸಿಬ್ಬಂದಿಗಳನ್ನು ನೇಮಕ ಮಾಡಲಾಗುತ್ತದೆ. 298 ಮತಗಟ್ಟೆಗಳಿಗೆ ಮೈಕ್ರೋ ಅಬ್ಸರ್‍ವರ್‍ಗಳನ್ನು ನೇಮಕ ಮಾಡಲಾಗಿದೆ. ಉಳಿದಂತೆ 1685 ಮತಗಟ್ಟೆಗಳಿಗೆ 2026 ಮತಗಟ್ಟೆ ಅಧಿಕಾರಿ, 2026 ಸಹಾಯಕ ಮತಗಟ್ಟೆ ಅಧಿಕಾರಿ, ಮತಗಟ್ಟೆ ಸಿಬ್ಬಂದಿ 4052 ಸೇರಿ ಒಟ್ಟು ಮತದಾನ ದಿನ 8104 ಸಿಬ್ಬಂದಿಗಳನ್ನು ನಿಯೋಜಿಸಲಾಗಿದೆ.

ವಿಶೇಷ ಚೇತನರಿಗೆ ಸ್ವಯಂಸೇವಕರು: ವಿಶೇಷಚೇತನ ಮತದಾರರಿಗೆ ಸಹಾಯಕರಾಗಿ ಜಗಳೂರು 30, ಹರಿಹರ 28, ದಾವಣಗೆರೆ ಉತ್ತರ 11, ದಕ್ಷಿಣ 11, ಮಾಯಕೊಂಡ 44, ಚನ್ನಗಿರಿ 46 ಹಾಗೂ ಹೊನ್ನಾಳಿ 49 ಸೇರಿ 219 ಸ್ವಯಂ ಸೇವಕರನ್ನು ನೇಮಕ ಮಾಡಲಾಗಿದೆ.

ಮಸ್ಟರಿಂಗ್ ಡಿ.ಮಸ್ಟರಿಂಗ್ ಕೇಂದ್ರ: ಜಗಳೂರು ಸರ್ಕಾರಿ ಪದವಿ ಪೂರ್ವ ಕಾಲೇಜು, ಹರಿಹರ ಸೇಂಟ್ ಮೇರಿಸ್ ಕಾನ್ವೆಂಟ್ ಸ್ಕೂಲ್, ದಾವಣಗೆರೆ ಉತ್ತರ ಡಿ.ಆರ್.ಆರ್.ವಿದ್ಯಾಸಂಸ್ಥೆ, ಪಿ.ಬಿ.ರಸ್ತೆ, ದಾವಣಗೆರೆ ದಕ್ಷಿಣ ಸರ್ಕಾರಿ ಬಾಲಕರ ಪದವಿ ಪೂರ್ವ ಕಾಲೇಜು ಮತ್ತು ಪ್ರೌಢಶಾಲೆ, ಪಿ.ಜೆ.ಬಡಾವಣೆ, ಹೈಸ್ಕೂಲ್ ಮೈದಾನ, ಮಾಯಕೊಂಡ ಮೋತಿ ವೀರಪ್ಪ ಪದವಿ ಪೂರ್ವ ಕಾಲೇಜು, ದಾವಣಗೆರೆ. ಚನ್ನಗಿರಿ ಶ್ರೀ ಶಿವಲಿಂಗೇಶ್ವರ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಮತ್ತು ಹೊನ್ನಾಳಿ ಕ್ಷೇತ್ರದ ಮಸ್ಟರಿಂಗ್, ಡಿ.ಮಸ್ಟರಿಂಗ್ ಶ್ರೀಮತಿ ಗಂಗಮ್ಮ ಶ್ರೀ ವೀರಭದ್ರಶಾಸ್ತ್ರಿ ಕೈಗಾರಿಕಾ ತರಬೇತಿ ಕೇಂದ್ರ, ಹಿರೇಕಲ್ಮಠ, ಹೊನ್ನಾಳಿ ಇವು ಮಸ್ಟರಿಂಗ್, ಡಿ.ಮಸ್ಟರಿಂಗ್ ಕೇಂದ್ರಗಳಾಗಿವೆ.

ವಲ್ನೇರಾಬಲಿಟಿ, ಕ್ರಿಟಿಕಲ್ ಮತಗಟ್ಟೆ: ಜಿಲ್ಲೆಯಲ್ಲಿ 338 ವಲ್ನೇರಾಬಲಿಟಿ ಹಾಗೂ ಕ್ರಿಟಿಕಲ್ ಮತಗಟ್ಟೆಗಳಿದ್ದು 1347 ಸಾಮಾನ್ಯ ಮತಗಟ್ಟೆಗಳಿವೆ. ಕ್ರಿಟಿಕಲ್ ಮತಗಟ್ಟೆಗಳಲ್ಲಿ ಜಗಳೂರು 48, ಹರಿಹರ 58, ದಾವಣಗೆರೆ ಉತ್ತರ 37, ದಕ್ಷಿಣ 61, ಮಾಯಕೊಂಡ 30, ಚನ್ನಗಿರಿ 40 ಹಾಗೂ ಹೊನ್ನಾಳಿ 64 ಮತಗಟ್ಟೆಗಳಿವೆ.

ಮತದಾನ  ಪ್ರಕ್ರಿಯೆ ನೇರ ಪ್ರಸಾರ ವೆಬ್ ಕಾಸ್ಟಿಂಗ್: ಮತದಾನ ದಿನದಂದು ಮತಗಟ್ಟೆಗಳಲ್ಲಿ ನಡೆಯುವ ಮತದಾನ ಪ್ರಕ್ರಿಯೆಗಳನ್ನು ಆಯೋಗವು ನೇರವಾಗಿ ವೀಕ್ಷಿಸಲು ಒಟ್ಟು ಮತಗಟ್ಟೆಗಳಲ್ಲಿ ಶೇ 50 ರಷ್ಟು ಮತಗಟ್ಟೆಗಳಿಗೆ 869 ಕೇಂದ್ರಗಳಲ್ಲಿ ನೇರ ಪ್ರಸಾರ ವೆಬ್‍ಕಾಸ್ಟಿಂಗ್ ಮಾಡಲಾಗುತ್ತಿದೆ.

ನೀತಿ ಸಂಹಿತೆ ಕಟ್ಟುನಿಟ್ಟಿನ ಜಾರಿಗೆ ವಿವಿಧ ತಂಡಗಳು: ನೀತಿ ಸಂಹಿತೆಯನ್ನು ಕಟ್ಟುನಿಟ್ಟಾಗಿ ಜಾರಿಗೆ ತರಲು ಜಿಲ್ಲೆಯಲ್ಲಿ 21 ಎಫ್‍ಎಸ್‍ಟಿ 3 ಪಾಳಿಯಲ್ಲಿ ಕೆಲಸ, ಚೆಕ್ ಪೋಸ್ಟ್ 29 ಇಲ್ಲಿಯು 3 ಪಾಳಿಯಲ್ಲಿ ಕೆಲಸ, ವೀಡಿಯೋ ವೀಕ್ಷಣಾ ತಂಡ 7, ವೀಡಿಯೋ ಸರ್ವಲೆನ್ಸ್ ತಂಡ 14 ಗಳಲ್ಲಿ ಕರ್ತವ್ಯ ನಿರ್ವಹಿಸಲಾಗುತ್ತಿದೆ. ಇದಲ್ಲದೇ 164 ಸೆಕ್ಟರ್ ಅಧಿಕಾರಿಗಳನ್ನು ನೇಮಕ ಮಾಡಲಾಗಿದೆ ಎಂದರು.

ಕಾನೂನು ಸುವ್ಯವಸ್ಥೆಗೆ ಬಿಗಿ ಪೊಲೀಸ್ ಬಂದೋಬಸ್ತ್: ಮತದಾನದ ವೇಳೆ ಸಾರ್ವಜನಿಕ ಶಾಂತಿ, ಕಾನೂನು ಸುವ್ಯವಸ್ಥೆ ಮತ್ತು ಸಾರ್ವಜನಿಕರು ನಿರ್ಭಯವಾಗಿ ಮತದಾನ ಮಾಡಲು ಎಲ್ಲಾ ಬಂದೋಬಸ್ತ್ ವ್ಯವಸ್ಥೆಯನ್ನು ಇಲಾಖೆಯಿಂದ ಕೈಗೊಳ್ಳಲಾಗಿದೆ ಎಂದು ಜಿಲ್ಲಾ ರಕ್ಷಣಾಧಿಕಾರಿ ಡಾ: ಅರುಣ್.ಕೆ ತಿಳಿಸಿದರು.

23 ಜನರನ್ನು ಗಡಿಪಾರು ಮಾಡಲಾಗಿದ್ದು ಇದುವರೆಗೆ ನೀತಿ ಸಂಹಿತೆ ಉಲ್ಲಂಘನೆಯಡಿ 66 ಪ್ರಕರಣಗಳನ್ನು ದಾಖಲು ಮಾಡಲಾಗಿದೆ. 1685 ಮತಗಟ್ಟೆಗಳಿಗೂ ಪೊಲೀಸ್ ಬಂದೋಬಸ್ತ್ ವ್ಯವಸ್ಥೆ ಮಾಡಲಾಗಿದೆ. ಇದಕ್ಕಾಗಿ ಸಿವಿಲ್ ಪೊಲೀಸ್, ಗೃಹರಕ್ಷಕ ದಳ ಸಿಬ್ಬಂದಿ, ಸಿಐಪಿಎಫ್ 20 ತಂಡದಲ್ಲಿನ 1262 ಸಿಬ್ಬಂದಿ, 7 ಕೆ.ಎಸ್.ಆರ್.ಪಿ.ತಂಡವನ್ನು ನಿಯೋಜಿಸಲಾಗಿದೆ. ಯಾವುದೇ ತರಹದ ಸಮಸ್ಯೆಗಳು ಬಂದಲ್ಲಿ 112 ಸಂಖ್ಯೆಗೆ ಸಾರ್ವಜನಿಕರು ಕರೆ ಮಾಡಲು ತಿಳಿಸಿದರು.

ಶೇ 85 ರಷ್ಟು ಮತದಾನದ ಗುರಿ: 2018 ರ ಚುನಾವಣೆಯಲ್ಲಿ ದಾವಣಗೆರೆ ಜಿಲ್ಲೆಯಲ್ಲಿ ಶೇ 75.96 ರಷ್ಟು ಮತದಾನವಾಗಿತ್ತು. ಅದರಲ್ಲಿ ದಾವಣಗೆರೆ ಉತ್ತರ, ದಕ್ಷಿಣದಲ್ಲಿ 66, 65 ರಷ್ಟು ಮತದಾನವಾಗಿತ್ತು. ಈ ಭಾರಿ ಜಿಲ್ಲೆಯ ಸರಾಸರಿ ಶೇ 85 ಕ್ಕಿಂತ ಹೆಚ್ಚಿಸಬೇಕೆಂಬ ಗುರಿಯನ್ನು ಹೊಂದಿ ಅನೇಕ ಮತದಾರರ ಜಾಗೃತಿ ಕಾರ್ಯಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಹಾಗೂ ಸ್ವೀಪ್ ಸಮಿತಿ ಅಧ್ಯಕ್ಷರಾದ ಸುರೇಶ್ ಇಟ್ನಾಳ್ ತಿಳಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಅಪರ ಜಿಲ್ಲಾಧಿಕಾರಿ ಪಿ.ಎನ್.ಲೋಕೇಶ್ ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

error: Content is protected !!