ಶಿವಮೊಗ್ಗ: ಸೋಮವಾರ ಕಾಂಗ್ರೆಸ್ ಸೇರಿದ ಮಾಜಿ ಮುಖ್ಯಮಂತ್ರಿ ಜಗದೀಶ ಶೆಟ್ಟರ್ ಅವರಿಗೆ ಶಾಸಕ ಕೆ.ಎಸ್. ಈಶ್ವರಪ್ಪ ಬರೆದಿರುವ ಬಹಿರಂಗ ಪತ್ರ ಬರೆದಿದ್ದಾರೆ.
ಸೋಮವಾರ ಇಲ್ಲಿ ಸುದ್ದಿಗೋಷ್ಠಿ ಯಲ್ಲಿ ಈ ಪತ್ರ ಬಿಡುಗಡೆ ಮಾಡಿರುವ ಅವರು, ‘ನಿಮಗೆ ಪಕ್ಷ ಎಲ್ಲವನ್ನೂ ನೀಡಿದೆ. ಆರು ಬಾರಿ ಶಾಸಕರಾಗಿದ್ದೀರಿ. ಪಕ್ಷದ ರಾಜ್ಯ ಘಟಕದ ಅಧ್ಯಕ್ಷ, ವಿಧಾನಸಭೆಯ ಸ್ಪೀಕರ್ ಆಗಿದ್ದೀರಿ. ಮುಖ್ಯಮಂತ್ರಿ ಪಟ್ಟವನ್ನೂ ಪಕ್ಷ ನಿಮಗೆ ಕರುಣಿಸಿತ್ತು. ಕೇವಲ ಒಂದು ಟಿಕೆಟ್ ಗಾಗಿ ತಲೆತಲಾಂತರಗಳಿಂದ ನಿಮ್ಮ ಕುಟುಂಬಕ್ಕೆ ಸಂಸ್ಕಾರ ರೂಪದಲ್ಲಿ ಬಂದ ಬಿಜೆಪಿಯ ಸಿದ್ಧಾಂತಗಳನ್ನು ಮಾರಿಕೊಳ್ಳುತ್ತಿದ್ದೀರಾ?’ ಎಂದು ಅವರು ಪ್ರಶ್ನಿಸಿದ್ದಾರೆ.
‘ನಿಮ್ಮ ತಂದೆಯವರೂ ಬಿಜೆಪಿಯಿಂದ ಆಯ್ಕೆಯಾಗಿ ಮೇಯರ್ ಸ್ಥಾನದಲ್ಲಿದ್ದವರು. ಅವರದೇ ಪ್ರಭಾವದೊಂದಿಗೆ ಬಿಜೆಪಿ ಸೇರಿದ್ದ ನೀವು ರಾಷ್ಟ್ರೀಯತೆಯನ್ನು ಮೈಗೂಡಿಸಿಕೊಂಡಿದ್ದವರು. ಕಾಂಗ್ರೆಸ್ ಪಕ್ಷದ ದೇಶವಿರೋಧಿ ಧೋರಣೆಗಳನ್ನು ಖಂಡಿಸುತ್ತಲೇ ಮುಖ್ಯಮಂತ್ರಿ ಸ್ಥಾನದ ಎತ್ತರಕ್ಕೆ ಬೆಳೆದವರು’ ಎಂದು ಹೇಳಿದ್ದಾರೆ.
‘ಮುಂದೊಂದು ದಿನ ತಾವು ಕಾಂಗ್ರೆಸ್ ಪಕ್ಷದಿಂದ ಗೆದ್ದು ಬಂದರೆ, ಸದನದಲ್ಲಿ ಗೋ ಹತ್ಯೆಯ ಪರ- ವಿರೋಧದ ಚರ್ಚೆ ನಡೆದರೆ ಗೋಹತ್ಯೆ ಸಮರ್ಥಿಸಲು ಸಾಧ್ಯವೇ? ಪಿಎಫ್‌ಐ ಸಂಘಟನೆ ಕುರಿತಾದ ಪರ- ವಿರೋಧದ ಚರ್ಚೆಯಲ್ಲಿ ಪಿಎಫ್‌ಐ ನಿರ್ಬಂಧ ತೆರವು ಮಾಡಲು ತಾವು ಸಮ್ಮತಿಸಲು ಸಾಧ್ಯವೇ?’ ಎಂದು ಪತ್ರದಲ್ಲಿ ಕೇಳಿರುವ ಈಶ್ವರಪ್ಪ, ‘ಜಗದೀಶ್ ಶೆಟ್ಟರ್ ಟಿಕೆಟ್‌ಗಾಗಿಯೇ ಕಾಂಗ್ರೆಸ್ ಸೇರುತ್ತಾರೆ ಎಂದು ತಿಳಿದಿದ್ದರೆ ಅವರನ್ನು ಬಿಜೆಪಿ ಇಷ್ಟು ಎತ್ತರಕ್ಕೆ ಬೆಳೆಸುತ್ತಿರಲಿಲ್ಲ’ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
