ದಾವಣಗೆರೆ: ಜಿಲ್ಲೆಯ ಹಲವೆಡೆ ಕಿಚ್ಚ ಸುದೀಪ್ ಬಿಜೆಪಿ ಅಭ್ಯರ್ಥಿಗಳ ಪರ ಭರ್ಜರಿ ರೋಡ್ ಶೋ ನಡೆಸಿ ಮತ ಯಾಚಿಸಿದರು.
ಈ ವೇಳೆ ಅಭಿಮಾನಿಗಳು ನೋಡಲು ಮುಗಿ ಬಿದ್ದರು. ಕಿಚ್ಚ ಕಿಚ್ಚ ಎಂದು ಘೋಷಣೆ ಕೂಗಿದರು. ಮನೆಗಳ ಮೇಲೆ, ನಿಂತಿದ್ದ ಬಸ್‌ಗಳ ಮೇಲೆ, ವಾಹನಗಳ ಮೇಲೆ ಹತ್ತಿ ಕಿಚ್ಚನಿಗೆ ಕೈ ಬೀಸಿದರು.
ಇತ್ತ ಕೀಚ್ಚನೂ ಸಹ ಅಭಿಮಾನಿಗಳತ್ತ ಕೈ ಮುಗಿಯುತ್ತಾ, ಕೈ ಬೀಸುತ್ತಾ, ಗಾಳಿಯಲ್ಲಿಯೇ ಮುತ್ತುಗಳನ್ನು ಕಳುಹಿಸುತ್ತಾ, ಬಿಜೆಪಿ ಅಭ್ಯರ್ಥಿಗಳಿಗೆ ಮತ ನೀಡುವಂತೆ ಮನವಿ ಮಾಡಿದರು.
ಮೊಳಕಾಲ್ಮೂರಿನಿಂದ ಜಗಳೂರಿಗೆ ಆಗಮಿಸಿದ ಸುದೀಪ್ ಬಿಜೆಪಿ ಅಭ್ಯರ್ಥಿ ಎಸ್. ವಿ. ರಾಮಚಂದ್ರಪ್ಪರ ಪರ ಪ್ರಚಾರ ನಡೆಸಿದರು.
ನಂತರ ದಾವಣಗೆರೆ ತಾಲೂಕಿನ ಮಾಯಕೊಂಡ ಕ್ಷೇತ್ರ ವ್ಯಾಪ್ತಿಯಲ್ಲಿ ಬಿಜೆಪಿ ಅಭ್ಯರ್ಥಿ ಬಸವರಾಜ್ ನಾಯ್ಕ್ ಪರ ಸುದೀಪ್ ಮತಯಾಚಿಸಿದರು. ತ್ಯಾವಣಿಗೆಯಲ್ಲಿ ಚುನಾವಣಾ ಪ್ರಚಾರ ನಡೆಸಿದ ಸುದೀಪ್, ಬಸವರಾಜ್ ನಾಯ್ಕ್ ಅವರನ್ನು ಗೆಲ್ಲಿಸುವಂತೆ ಕೈಮುಗಿದು ಮನವಿ ಮಾಡಿಕೊಂಡರು.
ಹದಡಿಯಲ್ಲಿ ದಾವಣಗೆರೆ ದಕ್ಷಿಣ ಕ್ಷೇತ್ರದ ಅಭ್ಯರ್ಥಿ ಬಿ.ಜಿ. ಅಜಯ್ ಕುಮಾರ್ ಪರ ಮತ ಯಾಚಿಸಿ, ನಂತರ, ದಾವಣಗೆರೆ ನಿಟುವಳ್ಳಿ ದುರ್ಗಾಂಬಿಕಾ ದೇವಸ್ಥಾನದ ಮುಂಭಾಗದಿಂದ ರೋಡ್ ಶೋ ನಡೆಸಿ, ಉತ್ತರ ಕ್ಷೇತ್ರದ ಅಭ್ಯರ್ಥಿ ಲೋಕಿಕೆರೆ ನಾಗರಾಜ್ ಪರ ಮತ ಯಾಚಿಸಿದರು. ಈ ಕ್ಷೇತ್ರದಲ್ಲಿಯೂ ವಾಲ್ಮೀಕಿ ಸಮುದಾಯದ ಮತಗಳಿದ್ದು, ಸೆಳೆಯಲು ಬಿಜೆಪಿ ತಂತ್ರಗಾರಿಕೆ ರೂಪಿಸಿದೆ.
