ವಿಷ ಆಹಾರ ಸೇವಿಸಿ ನೂರಾರು ಜನ ಅಸ್ವಸ್ಥ: ಎಲ್ಲರಿಗೂ ಸೂಕ್ತ ಚಿಕಿತ್ಸೆ ನೀಡಿದ ವೈಧ್ಯರ ತಂಡ

ದಾವಣಗೆರೆ: ವಿಷ ಆಹಾರ ಸೇವಿಸಿ ನಿನ್ನೆ 100ಕ್ಕೂ ಹೆಚ್ಚು ಜನ ಅಸ್ವಸ್ಥರಾದ ಘಟನೆ ಜಗಳೂರಿನ ಬೆಣ್ಣೆಹಳ್ಳಿ ಗ್ರಾಮದಲ್ಲಿ ನಡೆದಿದ್ದು, ಇಂದು ಮುಂಜಾನೆ ವಾಂತಿ, ಭೇದಿಯಿಂದ ನರಳಿದ್ದವರಿಗೆ ಸೂಕ್ತ ಚಿಕಿತ್ಸೆ ನೀಡಲಾಗಿದೆ.
ನೆನ್ನೆ ರಾತ್ರಿ ಬೆಣ್ಣೆಹಳ್ಳಿ ಗ್ರಾಮದ ವ್ಯಕ್ತಿಯೊಬ್ಬರ ಮನೆಯಲ್ಲಿ ಸೀಮಂತ ಕಾರ್ಯವಿತ್ತು. ಸೀಮಂತ ಕಾರ್ಯಕ್ರಮದಲ್ಲಿ ಹೋಳಿಗೆ ಸೀಕರಣೆ ಸಿಹಿ ಅಡುಗೆ ಊಟದ ವ್ಯವಸ್ಥೆ ಮಾಡಲಾಗಿತ್ತು. ರಾತ್ರಿ ನೂರಾರು ಜನ ಸಿಹಿಯೂಟ ಸೇವಿಸಿದ್ದರು. ಇಂದು ಬೆಳಿಗ್ಗೆ ಆಹಾರ ಸೇವಿಸಿದ 100 ಕ್ಕೂ ಹೆಚ್ಚು ಜನರಲ್ಲಿ ವಾಂತಿ-ಭೇದಿ ಕಾಣಿಸಿಕೊಂಡಿತ್ತು. ಅದೃಷ್ಟವಶಾತ್ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ.
ಎಲ್ಲರೂ ಬೆಣ್ಣೆಹಳ್ಳಿ ಪಿಎಚ್‌ಸಿ ಕೇಂದ್ರದಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಹಲವರು ಗುಣಮುಖರಾಗಿ ಮನೆಗೆ ತೆರಳಿದ್ದಾರೆ. 20ಕ್ಕೂ ಹೆಚ್ಚು ಜನ ಜಗಳೂರು ಸಾರ್ವಜನಿಕ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಜಗಳೂರು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.