ಪಂಡಿತರಿಗೆಲ್ಲ ಪರಮಾಚಾರ್ಯರು ಪಂಡಿತಾರಾಧ್ಯರು – ಶ್ರೀ ಶೈಲ ಜಗದ್ಗುರುಗಳು

ಶ್ರೀಶೈಲಂ — ಎಲ್ಲ ಜ್ಞಾನಗಳ ಮೂಲ ಸ್ಥಾನವಾದ ಶಿವನ ಆದೇಶದಂತೆ ಶ್ರೀಶೈಲ ಮಲ್ಲಿಕಾರ್ಜುನ ಜ್ಯೋತಿರ್ಲಿಂಗದಿಂದ ಅವತರಿಸಿದ ಜಗದ್ಗುರು ಪಂಡಿತಾರಾಧ್ಯರು ಪಾಂಡಿತ್ಯ ಪರಂಪರೆಯ ಪ್ರಥಮಾಚಾರ್ಯರಾಗಿರುವುದರಿಂದ ಪಂಡಿತರ ಪರಮಾಚಾರ್ಯರಾಗಿರುವರು ಎಂದು ಶ್ರೀಶೈಲ ಜಗದ್ಗುರು ಡಾ. ಚನ್ನಸಿದ್ಧರಾಮ ಪಂಡಿತಾರಾಧ್ಯ ಶಿವಾಚಾರ್ಯ ಮಹಾಸ್ವಾಮಿಗಳು ಹೇಳಿದ್ದಾರೆ.

ಶ್ರೀಶೈಲದಲ್ಲಿ ಶಿವರಾತ್ರಿ ಹಾಗೂ ಜಗದ್ಗುರು ಪಂಡಿತಾರಾಧ್ಯರ ಜಯಂತಿ ಸಮಾರಂಭದ ಸಾನಿಧ್ಯ ವಹಿಸಿ ಆಶೀರ್ವಚನ ನೀಡುತ್ತ ಈ ವಿಚಾರವನ್ನು ತಿಳಿಸಿದರು.

ಕೇವಲ ಶಾಸ್ತ್ರದ ತರ್ಕ ವಿತರ್ಕಗಳಲ್ಲಿ ಕಾಲ ಕಳೆಯದೆ ಯುಕ್ತಿ, ಪ್ರಮಾಣ, ಮತ್ತು ಅನುಭವಗಳ ಮೂಲಕ ಆತ್ಮಜ್ಞಾನವನ್ನು ಪ್ರಾಪ್ತ ಮಾಡಿಕೊಂಡು ವಿದ್ವಾಂಸನನ್ನೆ ಶಾಸ್ತ್ರದಲ್ಲಿ ಪಂಡಿತ ಎಂದು ಕರೆಯುತ್ತಾರೆ. ಶಿವರಾತ್ರಿಯ ದಿನದಂದು ಶ್ರೀಶೈಲದ ಮಲ್ಲಿಕಾರ್ಜುನ ಜ್ಯೋತಿರ್ಲಿಂಗದಿಂದ ಅವತರಿಸಿದ ಜ. ಪಂಡಿತಾರಾಧ್ಯರು ಸಾನಂದ ಮಹರ್ಷಿ ಮೊದಲಾದ ಇಂತಹ ಅನೇಕ ಋಷಿಗಳಿಗೆ, ಪಂಡಿತರಿಗೆ ವೀರಶೈವ ಸಿದ್ಧಾಂತವನ್ನು ಬೋಧಿಸಿ ಶ್ರೀಶೈಲದಲ್ಲಿ ಸೂರ್ಯಸಿಂಹಾಸನ ಮಹಾಪೀಠವನ್ನು ಸ್ಥಾಪಿಸಿದರು.

ಪಂಡಿತಾರಾಧ್ಯರು ಈ ಪೀಠವನ್ನು ಸ್ಥಾಪಿಸಿರುವುದರಿಂದ ಮತ್ತು ಈ ಪೀಠಕ್ಕೆ ಅನೇಕ ಪಂಡಿತರು ಜಗದ್ಗುರುಗಳಾಗಿರುವುದರಿಂದ ಇದು ಪಂಡಿತಾರಾಧ್ಯ ಪೀಠವೆಂದು ಪ್ರಸಿದ್ಧಿಯನ್ನು ಪಡೆದುಕೊಂಡಿದೆ. ತೆಲುಗು ಭಾಷೆಯ ಆದಿಕವಿ ಎಂಬ ಖ್ಯಾತಿಗೆ ಪಾತ್ರನಾದ ನನ್ನೇಚೋಡ ಮಹಾರಾಜನಿಗೆ ಗುರುಗಳಾದ ಜಂಗಮ ಮಲ್ಲಿಕಾರ್ಜುನ ಜಗದ್ಗುರುಗಳು, ಕನ್ನಡದ ಆದಿ ವಚನಕಾರರಲಲ್ಲೊಬ್ಬರಾದ ದೇವರ ದಾಸಿಮಯ್ಯನಿಗೆ ಶ್ರೀಶೈಲದಲ್ಲಿ ವಿದ್ಯಾದಾನ ಮಾಡಿದ ಚಂದ್ರಗುಂಡ ಶಿವಾಚಾರ್ಯ ಭಗವತ್ಪಾದರು, ಬ್ರಹ್ಮಸೂತ್ರಗಳಿಗೆ ಪ್ರಪ್ರಥಮ ವೀರಶೈವ ಭಾಷ್ಯ ಬರೆದ ಶ್ರೀಪತಿ ಪಂಡಿತಾರಾಧ್ಯರು, ಆಂಧ್ರ ಪ್ರದೇಶದ ಸುಪ್ರಸಿದ್ಧ ಪಂಡಿತತ್ರಯರಲ್ಲಿ ಬರುವ ಮಲ್ಲಿಕಾರ್ಜುನ ಪಂಡಿತರು ಮುಂತಾದ ಶ್ರೇಷ್ಠಮಟ್ಟದ ವಿದ್ವಾಂಸರನ್ನು ಪ್ರಾಚೀನ ಕಾಲದಿಂದಲೂ ಈ ಪೀಠವು ಜಗತ್ತಿಗೆ ನೀಡಿರುವುದು ಇತಿಹಾಸದಲ್ಲಿ ಉಲ್ಲೇಖವಿದೆ. ಕಾರಣ ಇದು ಕೇವಲ ಹೆಸರಿಗೆ ಮಾತ್ರ ಪಂಡಿತಾರಾಧ್ಯ ಪೀಠವಾಗಿರದೆ, ಪೀಠದ ಈ ಹೆಸರು ಹಲವಾರು ಕಾರಣಗಳಿಂದ ಅನ್ವರ್ಥಕವಾಗಿದೆ. ಎಂದು ಹೇಳಿದರು.

ಪ್ರತಿವರ್ಷದಂತೆ ಬಯಲು ವೀರಭದ್ರಸ್ವಾಮಿ ದೇವಸ್ಥಾನದಿಂದ ಮಲ್ಲಿಕಾರ್ಜುನ ಸ್ವಾಮಿ ದೇವಸ್ಥಾನದವರೆಗೆ ಪ್ರಸ್ತುತ ಜಗದ್ಗುರುಗಳ ಅಡ್ಡಪಲ್ಲಕ್ಕಿ ಉತ್ಸವ ನೆರವೇರಿತು. ಜಗದ್ಗುರುಗಳು ಅನೇಕ ಶಿಷ್ಯರಿಂದ ಒಡಗೂಡಿ ಶ್ರೀ ಮಲ್ಲಿಕಾರ್ಜುನ ಜ್ಯೋತಿರ್ಲಿಂಗಕ್ಕೆ ರುದ್ರಾಭಿಷೇಕ ಮತ್ತು ಭ್ರಮರಾಂಬ ದೇವಿಗೆ ಕುಂಕುಮಾರ್ಚನ ಪೂಜೆ ಸಲ್ಲಿಸಿದರು ಮತ್ತು ಜಗದ್ಗುರು ಪಂಡಿತಾರಾಧ್ಯರ ಲಿಂಗೋದ್ಭವ ಮೂರ್ತಿಗೆ ವಿಶೇಷ ಪೂಜೆ ಹಾಗೂ ಸಹಸ್ರ ಬಿಲ್ವಾರ್ಚನೆ ನೆರವೇರಿಸಿದರು. ಇದೇ ಸಮಯದಲ್ಲಿ ದೇವಸ್ಥಾನ ಆವರಣದಲ್ಲಿರುವ ಜಂಗಮ ಮಲ್ಲಿಕಾರ್ಜುನ ಜಗದ್ಗುರುಗಳ ಸಮಾಧಿಗೆ ಮಹಾಮಂಗಳಾರತಿ ಅರ್ಪಿಸಿದರು.

ಈ ಎಲ್ಲ ಕಾರ್ಯಕ್ರಮಗಳಲ್ಲಿ ಗಡ್ಡಿಯ ಶ್ರೀ ಸಂಗಮೇಶ್ವರ ಶಿವಾಚಾರ್ಯರು, ಮುಳವಾಡದ ಶ್ರೀ ಸಿದ್ಧಲಿಂಗ ಶಿವಾಚಾರ್ಯರು, ಶಿವರಾತ್ರಿ ಬ್ರಹ್ಮೋತ್ಸವದ ವಿಶೇಷ ಅಧಿಕಾರಿಗಳಾಗಿ ಆಗಮಿಸಿದ ಚಂದ್ರಶೇಖರ್ ಆಜಾದ್, ಆಡಳಿತಾಧಿಕಾರಿಗಳಾದ ಪೆದ್ದಿರಾಜು ಮೊದಲಾದ ಅಧಿಕಾರಿಗಳು, ದೇವಸ್ಥಾನದ ಪ್ರಧಾನಾರ್ಚಕ ವೀರಯ್ಯ ಸ್ವಾಮಿ ಮೊದಲಾದ ಅರ್ಚಕರು ಪೀಠದ ಮುಖ್ಯ ಪ್ರಬಂಧಕರಾದ ಮಂಜುನಾಥ್ ಸ್ವಾಮಿ ಯವರು ಪಾಲ್ಗೊಂಡಿದ್ದರು. ಆಂಧ್ರಪ್ರದೇಶ, ತೆಲಂಗಾಣ ಮತ್ತು ಕರ್ನಾಟಕ ಗಳಿಂದ ಆಗಮಿಸಿದ ಅನೇಕ ಭಕ್ತರು ಭಾಗವಹಿಸಿದ್ದರು.

Leave a Reply

Your email address will not be published. Required fields are marked *

error: Content is protected !!