ಪತ್ನಿಯ ಮೇಲೆ ಬಲವಂತದ ಅತ್ಯಾಚಾರಕ್ಕೆ ವಿವಾಹ ಲೈಸನ್ಸ್ ಅಲ್ಲ : ಹೈಕೋರ್ಟ್ ಮಹತ್ವದ ಆದೇಶ

ಬೆಂಗಳೂರು: ಪತಿಯೇ ತನ್ನ ಮೇಲೆ ಅತ್ಯಾಚಾರವೆಸಗಿದ್ದಾನೆ ಎಂದು ಪತ್ನಿಯೇ ಆರೋಪಿಸಿರುವ ವಿಚಾರಕ್ಕೆ ಸಂಬಂಧಿಸಿದಂತೆ ಹೈಕೋರ್ಟ್ “ಹೆಂಡತಿ ಮೇಲೆ ರೇಪ್ ಮಾಡುವ ಗಂಡನಿಗೆ ಯಾವುದೇ ವಿನಾಯ್ತಿ ಇರಬಾರದು, ವಿವಾಹವೆನ್ನುವುದು ಪತಿಗೆ ಪತ್ನಿಯ ಮೇಲೆ ಬಲವಂತದ ಅತ್ಯಾಚಾರವೆಸಗಲು ಲೈಸೆನ್ಸ್ ಅಲ್ಲ ಎಂದು ಹೇಳಿ ಪತ್ನಿ ತನ್ನ ವಿರುದ್ಧ ಹೂಡಿರುವ ಅತ್ಯಾಚಾರ ಪ್ರಕರಣ ರದ್ದು ಮಾಡಬೇಕೆಂದು ಕೋರಿ ಪತಿ ಸಲ್ಲಿಸಿದ್ದ ಅರ್ಜಿಯನ್ನು ಹೈಕೋರ್ಟ್ ವಜಾಗೊಳಿಸಿದೆ.

ಬೆಂಗಳೂರಿನ ಅಭಿಷೇಕ್ ಎಂಬುವರು ಸಲ್ಲಿಸಿರುವ ಅರ್ಜಿಯನ್ನು ಆಲಿಸಿದ ನ್ಯಾ. ಎಂ. ನಾಗಪ್ರಸನ್ನ ಅವರ ಏಕಸದಸ್ಯಪೀಠ, ಅತ್ಯಾಚಾರ ಆರೋಪದಲ್ಲಿ ಪತಿಯೇ ಇದ್ದರೂ ಅವರಿಗೆ ವಿನಾಯ್ತಿ ನೀಡಬಾರದು, ಆ ಬಗ್ಗೆ ಶಾಸಕಾಂಗ ಚಿಂತನೆ ನಡೆಸಬೇಕಾಗುತ್ತದೆ ಎಂದು ನ್ಯಾಯಪೀಠ ಅಭಿಪ್ರಾಯಪಟ್ಟಿದೆ. ಗಂಡನ ವಿರುದ್ಧವೇ ಹೆಂಡತಿ ಅತ್ಯಾಚಾರ ಕೇಸ್ ದಾಖಲಿಸಿದ್ದಾರೆ. ಹಾಗಾಗಿ ಪತಿಗೆ ವಿನಾಯಿತಿ ಇದ್ದರೂ ಆತನ ವಿರುದ್ಧದ ಅತ್ಯಾಚಾರ ಆರೋಪ ರದ್ದುಪಡಿಸಲು ಹೈಕೋರ್ಟ್ ನಿರಾಕರಿಸಿದೆ. ಪತಿಯ ಅರ್ಜಿ ವಜಾ ಗೊಳಿಸಿರುವ ಹೈಕೋರ್ಟ್ ಏಕಸದಸ್ಯ ಪೀಠ ಪತಿಯ ವಿರುದ್ಧವೂ ಅತ್ಯಾಚಾರ ಕೇಸ್ ಪರಿಗಣಿಸಬೇಕು. ಪತಿಯ ಕೃತ್ಯದಿಂದ ಪತ್ನಿಯ ಮೇಲೆ ಮಾನಸಿಕವಾಗಿ, ದೈಹಿಕವಾಗಿ ಹಿಂಸೆಯಾಗಿದೆ. ಪತ್ನಿಯ ಮನಸಿನ ಮೇಲೆ ಅಳಿಸಲಾಗದ ಕಲೆ ಉಳಿದುಬಿಡುತ್ತದೆ. ಅತ್ಯಾಚಾರದ ವಿಚಾರದಲ್ಲಿ ಮಹಿಳೆ, ಪತ್ನಿಯ ನಡುವೆ ತಾರತಮ್ಯ ಸರಿಯಲ್ಲ. ವಿವಾಹ ಪತ್ನಿಯ ಮೇಲೆ ದೌರ್ಜನ್ಯವೆಸಗಲು ನೀಡುವ ಅನುಮತಿಯಲ್ಲ ಎಂದು ಹೇಳಿದೆ.

“ಸಂವಿಧಾನದ ಅಡಿಯಲ್ಲಿ ಎಲ್ಲ ಮಾನವ ಜೀವಿಗಳೂ ಸಮಾನರೇ, ಅವರು ಗಂಡಾಗಿದ್ದರೂ ಸರಿ, ಹೆಣ್ಣಾಗಿದ್ದರೂ ಸರಿಯೇ ಅಥವಾ ಇನ್ಯಾರೇ ಆಗಿದ್ದರೂ ಸೈ, ಸಂವಿಧಾನದ 14ನೇ ವಿಧಿಯ ಅನುಸಾರ ಸಮಾನತೆ ಸಮಾನತೆಯೇ. ಇದರಲ್ಲಿ ಯಾವುದೇ ರಾಜೀ ಇಲ್ಲ” ಎಂದು ನ್ಯಾಯಪೀಠ ಅಭಿಪ್ರಾಯಪಟ್ಟಿದೆ. “ಇಂತಹ ಬಲವಂತದ ಅತ್ಯಾಚಾರ ಪ್ರಕರಣಗಳಲ್ಲಿ ಪತಿಗಿರುವ ವಿನಾಯ್ತಿ ರದ್ದು ಮಾಡುವುದೇ ಸೂಕ್ತ. ಶಾಸಕಾಂಗ ಈ ಬಗ್ಗೆ ಚಿಂತನೆ ನಡೆಸಬೇಕು” ಎಂದು ಹೇಳಿರುವ ನ್ಯಾಯಪೀಠ ಅಮೆರಿಕಾ, ಆಸ್ಟೆಲಿಯಾ, ನ್ಯೂಜಿಲೆಂಡ್ ಸೇರಿ ಕೆಲ ದೇಶಗಳಲ್ಲಿ ಇದು ಅಪರಾಧ. ಗಂಡನು ಪತ್ನಿಯ ಇಚ್ಚೆಗೆ ವಿರುದ್ಧವಾಗಿ ಸಂಭೋಗಿಸಿದರೆ ಅದು ಅತ್ಯಾಚಾರವೇ. ಇಂಗ್ಲೆಂಡ್ನಲ್ಲೂ ಪತಿಗಿರುವ ವಿನಾಯಿತಿ ತೆಗೆಯಲಾಗಿದೆ ಎಂದು ಹಲವು ದೇಶಗಳಲ್ಲಿನ ಸ್ಥಿತಿಯನ್ನು ವಿವರಿಸಿದೆ.

42 ವರ್ಷದ ಗಂಡ 27 ವರ್ಷದ ತನ್ನ ಪತ್ನಿಯ ಮೇಲೆ ಅಸ್ವಾಭಾವಿಕ ಲೈಂಗಿಕ ಕ್ರಿಯೆ ನಡೆಸಿದ್ದ. ಲೈಂಗಿಕ ಗುಲಾಮಳಂತೆ ತನ್ನನ್ನು ಬಳಸಿಕೊಂಡಿದ್ದಾಗಿ ಗಂಡನ ವಿರುದ್ಧವೇ ಪತ್ನಿ ಅತ್ಯಾಚಾರ ಆರೋಪ ಮಾಡಿದ್ದರು. ಅಪ್ರಾಪ್ತ ಮಗಳ ಮೇಲೂ ಪತಿರಾಯ ಲೈಂಗಿಕ ದೌರ್ಜನ್ಯವೆಸಗಿದ್ದ. ಬೆಂಗಳೂರು ಪೂರ್ವ ಮಹಿಳಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ವಿಚಾರಣಾ ನ್ಯಾಯಾಲಯ ಅತ್ಯಾಚಾರ ಆರೋಪ ಕೈಬಿಡಲು ನಿರಾಕರಿಸಿತ್ತು. ಅತ್ಯಾಚಾರ ಆರೋಪ ರದ್ದು ಕೋರಿ ಹೈಕೋರ್ಟ್ ಮೊರೆ ಹೋಗಿದ್ದ ಪತಿ, ಆಕೆಯನ್ನು ವಿವಾಹವಾಗಿ ವರಿಸಿರುವ ಕಾರಣ ಅತ್ಯಾಚಾರ ಪ್ರಕರಣದಲ್ಲಿ ವಿನಾಯಿತಿ ಇದೆ ಎಂದು ವಾದ ಮಂಡಿಸಿದ್ದನು.

Leave a Reply

Your email address will not be published. Required fields are marked *

error: Content is protected !!