ದಾಖಲೆಗಳಿಲ್ಲದೇ ಸಾಗಿಸುತ್ತಿದ್ದ ನಾಲ್ಕು ಕೋಟಿ ಮೌಲ್ಯದ ಚಿನ್ನ, ವಜ್ರ ಬೆಳ್ಳಿ ಪೊಲೀಸ್ ವಶ

ದಾಖಲೆ ಇಲ್ಲದೇ ಸಾಗಿಸುತ್ತಿದ್ದ ನಾಲ್ಕು ಕೋಟಿ ಮೌಲ್ಯದ ಚಿನ್ನ, ವಜ್ರ ಬೆಳ್ಳಿ ವಶಕ್ಕೆ ಪಡೆದ ಘಟನೆ ಚಿಕ್ಕಮಗಳೂರು ಜಿಲ್ಲೆಯ ತರಿಕೆರೆ ತಾಲೂಕಿನ ಎಂ.ಸಿ. ಹಳ್ಳಿ ಚೆಕ್ ಪೋಸ್ಟ್ ಬಳಿ ನಡೆದಿದೆ.
1 ಕೆಜಿ 71.492 ಗ್ರಾಂ ವಜ್ರಾಭರಣ, 6 ಕೆಜಿ 586 ಗ್ರಾಂ ಚಿನ್ನ , 1 ಕೆಜಿ ಬೆಳ್ಳಿ ವಸ್ತುಗಳನ್ನು ಚೆಕ್ ಪೋಸ್ಟ್ ಸಿಬ್ಬಂದಿ ವಶಕ್ಕೆ ಪಡೆದಿದ್ದಾರೆ.
ಎಂ.ಸಿ. ಹಳ್ಳಿ ಚೆಕ್ ಪೋಸ್ಟ್ ಬಳಿ ಪೊಲೀಸರು ವಾಹನಗಳನ್ನು ತಪಾಸಣೆ ನಡೆಸುತ್ತಿದ್ದ ವೇಳೆ ಬಂದ ಒಂದು ಕಾರು ಪೊಲೀಸರಿಗೆ ಅನುಮಾನ ಹುಟ್ಟಿಸಿತ್ತು. ಹೀಗಾಗಿ ಕಾರನ್ನು ತಡೆದು ಪರಿಶೀಲನೆ ನಡೆಸಿದಾಗ ಕೋಟ್ಯಂತರ ಮೌಲ್ಯದ ಚಿನ್ನಾಭರಣಗಳು ಪತ್ತೆಯಾಗಿವೆ. ಸಾಗಿಸಲಾಗುತ್ತಿದ್ದ ಚಿನ್ನ, ಬೆಳ್ಳಿ, ಡೈಮಂಡ್ಗಳ ದಾಖಲೆಗಳನ್ನು ಕೇಳಿದಾಗ ಸಂಬಂಧಪಟ್ಟವರು ದಾಖಲೆ ನೀಡಿಲ್ಲ. ಹೀಗಾಗಿ ಚಿನ್ನಾಭರಣಗಳನ್ನು ಪೊಲೀಸರು ಜಪ್ತಿ ಮಾಡಿ ಚಿನ್ನಾಭರಣದ ಮೂಲದ ಕುರಿತು ತನಿಖೆ ನಡೆಸುತ್ತಿದ್ದಾರೆ.
ಬೆಂಗಳೂರಿನಿಂದ ಶಿವಮೊಗ್ಗ ಜಿಲ್ಲೆಗೆ ಕೋಟ್ಯಂತರ ಮೌಲ್ಯದ ಚಿನ್ನ, ಡೈಮಂಡ್ಸ್ ಹಾಗೂ ಬೆಳ್ಳಿ ವಸ್ತುಗಳನ್ನು ಟ್ರಕ್ ಮೂಲಕ ಸಾಗಾಟ ಮಾಡಲಾಗುತ್ತಿತ್ತು. ಈ ವೇಳೆ ಚುನಾವಣಾಧಿಕಾರಿಗಳು, ಪೊಲೀಸರು ಟ್ರಕ್ ತಡೆದು ಪರಿಶೀಲನೆ ನಡೆಸಿದಾಗ ಚಿನ್ನಾಭರಣಗಳನ್ನು ಸಾಗಿಸುತ್ತಿರುವ ವಿಚಾರ ತಿಳಿದುಬಂದಿದೆ. ತನಿಖೆ ವೇಳೆ ದಾಖಲೆ ಇಲ್ಲದೆ ಸಾಗಾಟ ಮಾಡುತ್ತಿರುವ ಹಿನ್ನೆಲೆ ಅವುಗಳನ್ನು ವಶಕ್ಕೆ ಪಡೆದಿದ್ದಾರೆ.