ಅಪೌಷ್ಟಿಕ ಮಕ್ಕಳಿಗೆ ಆಯುಷ್ಯ ಇಲಾಖೆಯಿಂದ ಉಚಿತ ಔಷಧಿಗಳ ಕಿಟ್: ಪೋಷಕರು ಸದುಪಯೋಗ ಪಡಿಸಿಕೊಳ್ಳಲು ಜಿಪಂ ಸಿಇಓ ಸಲಹೆ

IMG-20210906-WA0026

ದಾವಣಗೆರೆ: ಕೋವಿಡ್ ವಿರುದ್ಧ ಮಕ್ಕಳಲ್ಲಿ ರೋಗ ನಿರೋಧಕ ಶಕ್ತಿ ವರ್ಧನೆ ಹಾಗೂ ಸದೃಢ ಆರೋಗ್ಯಕ್ಕಾಗಿ ಅಪೌಷ್ಠಿಕತೆಯಿಂದ ಬಳಲುತ್ತಿರುವ ಮಗುವಿಗೆ ಆಯುಷ್ ಇಲಾಖೆಯಿಂದ ಆರೋಗ್ಯ ವೃದ್ಧಿಸುವ ಔಷಧಗಳನ್ನು ಉಚಿತವಾಗಿ ನೀಡಲಾಗುತ್ತಿದ್ದು, ಪೋಷಕರು ಸದುಪಯೋಗ ಪಡಿಸಿಕೊಳ್ಳುವಂತೆ ಎಂದು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ. ವಿಜಯ ಮಹಾಂತೇಶ ದಾನಮ್ಮನವರ್ ಹೇಳಿದರು.

ಸೋಮವಾರ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಆಯುಷ್ ಇಲಾಖೆ ಮತ್ತು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಸಂಯುಕ್ತಾಶ್ರಯದಲ್ಲಿ ೭೫ನೇ ವರ್ಷದ ಭಾರತ ಸ್ವಾತಂತ್ರ್ಯದ ಅಮೃತ ಮಹೋತ್ಸವ ಮತ್ತು ಪೋಷಣ್ ಅಭಿಯಾನ ಮಾಸಾಚರಣೆ ಹಾಗೂ ಮಾತೃವಂದನಾ ಸಪ್ತಾಹದ ಅಂಗವಾಗಿ ಹಮ್ಮಿಕೊಂಡಿದ್ದ ಆಯುಷ್ ಬಾಲ ಸಂಜೀವಿನಿ ಕಾರ್ಯಕ್ರಮದ ಉದ್ಘಾಟನೆ ನೆರವೇರಿಸಿ ಅವರು ಮಾತನಾಡಿದರು.

ಜಿಲ್ಲೆಯಲ್ಲಿ ಕೋವಿಡ್ ೩ನೇ ಅಲೆ ಎದುರಾದಲ್ಲಿ ಮಕ್ಕಳಿಗೆ ರಕ್ಷಣೆ ಹಾಗೂ ಚಿಕಿತ್ಸೆ ಒದಗಿಸಲು ಬೇಕಾದ ಮುಂಜಾಗ್ರತ ಕ್ರಮ ಕೈಗೊಳ್ಳಲಾಗಿದೆ. ಮೂರನೇ ಅಲೆಯು ಮಕ್ಕಳ ಮೇಲೆ ಪ್ರಭಾವ ಬೀರುತ್ತದೆ ಎಂಬ ವರದಿಗಳ ಹಿನ್ನೆಲೆಯಲ್ಲಿ ಮಕ್ಕಳ ಆರೋಗ್ಯ ಸದೃಢತೆಗಾಗಿ ಆದ್ಯತೆ ನೀಡಲಾಗುತ್ತಿದೆ. ಮಕ್ಕಳಲ್ಲಿನ ಅಪೌಷ್ಠಿಕತೆ ನಿವಾರಣೆ ಹಾಗೂ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುವ ನಿಟ್ಟಿನಲ್ಲಿ ಕಾರ್ಯಕ್ರಮ ರೂಪಿಸಲಾಗುತ್ತಿದೆ. ಗ್ರಾಮೀಣ ಭಾಗದಲ್ಲಿ ಅಂಗನವಾಡಿ ಕಾರ್ಯಕರ್ತೆಯರೊಂದಿಗೆ ಆರೋಗ್ಯ ಸಮೀಕ್ಷೆ ನಡೆಸಿ ಮಕ್ಕಳ ಆರೋಗ್ಯದ ಮೇಲೆ ನಿಗಾ ವಹಿಸಲಾಗುತ್ತಿದೆ ಎಂದು ತಿಳಿಸಿದರು.

ಜಿಲ್ಲೆಯ ಸುಮಾರು ೮ ಸಾವಿರ ಅಪೌಷ್ಠಿಕ ಮಕ್ಕಳಿಗೆ ಪೌಷ್ಠಿಕ ಆಹಾರ, ಸ್ಪಿರುಲಿನ ಚಿಕ್ಕಿ ಸೇರಿದಂತೆ ಆಯುಷ್ ಔಷಧಿಗಳನ್ನು ಉಚಿತವಾಗಿ ನೀಡಲಾಗುತ್ತಿದೆ. ಕಳೆದ ಒಂದು ತಿಂಗಳಲ್ಲಿ ಚೂರ್ಣ ತೆಗೆದುಕೊಳ್ಳುತ್ತಿದ್ದ ಮಕ್ಕಳ ಪೈಕಿ ತೀವ್ರ ಅಪೌಷ್ಠಿಕದಲ್ಲಿದ್ದ ೧೦ ಮಕ್ಕಳ ಆರೋಗ್ಯ ಸುಧಾರಣೆಗೊಂಡಿದ್ದು, ೬೦೦ ಮಕ್ಕಳು ಸಾಮಾನ್ಯ ಹಂತಕ್ಕೆ ತಲುಪಿವೆ. ಸಿಎಸ್‌ಆರ್ ಫಂಡ್ ಅಡಿ ೨೦ ರಿಂದ ೩೦ ಲಕ್ಷ ರೂ., ಅನುದಾನಲ್ಲಿ ಆಯುಷ್ ಔಷಧಿಗಳ ಕಿಟ್‌ಗಳನ್ನು ತುಮಕೂರಿನಿಂದ ತರಿಸಿದ್ದು, ಪೋಷಕರು ನಿರ್ಲಕ್ಷ್ಯ ವಹಿಸದೇ ನಿರಂತರವಾಗಿ ತಮ್ಮ ಮಕ್ಕಳಿಗೆ ನೀಡಬೇಕು ಎಂದರು.

ಕೋವಿಡ್ ಅಲ್ಲದೇ ಟೈಫಾಯ್ಡ್, ಜಾಂಡೀಸ್ ನಂತಹ ಇತರೆ ವೈರಲ್ ಖಾಯಿಲೆ ಬರುತ್ತಿರುವುದರಿಂದ ಸಾಮಾನ್ಯ ಕೆಮ್ಮು, ಶೀತ, ಜ್ವರ ಬಂದರೂ ಕೋವಿಡ್ ಪರೀಕ್ಷೆಯನ್ನು ಕಡ್ಡಾಯವಾಗಿ ಮಾಡಿಸಬೇಕು. ಆಸ್ಪತ್ರೆಗಳಲ್ಲಿ ಕೋವಿಡ್ ಲೈಕ್ ಇಲ್‌ನೆಸ್ ಲಕ್ಷಣಗಳು ಕಂಡುಬಂದರೆ ತಕ್ಷಣವೇ ಕೋವಿಡ್ ಪರೀಕ್ಷೆ ಮಾಡಿಸಬೇಕು ಎಂದ ಅವರು, ಅಪೌಷ್ಠಿಕ ಮಕ್ಕಳ ತಾಯಂದಿರು ಹಾಗೂ ೬ ವರ್ಷದೊಳಗಿನ ತಂದೆ ತಾಯಿ ಇಬ್ಬರಿಗೂ ಆದ್ಯತಾ ಗುಂಪುಗಳಾಗಿ ಪರಿಗಣಿಸಿ ಕೋವಿಡ್ ನಿಯಂತ್ರಣ ವ್ಯಾಕ್ಸಿನ್ ಹಾಕಲಾಗುತ್ತಿದೆ. ಇನ್ನೂ ಶೇ.೧೫ ರಷ್ಟು ಪೋಷಕರು ಬಾಕಿ ಉಳಿದಿದ್ದು ಶೀಘ್ರದಲ್ಲಿ ಪೂರೈಸಲಾಗುವುದು ಎಂದರು.

ಜಿಲ್ಲಾ ಮತ್ತು ತಾಲ್ಲೂಕು ಆಸ್ಪತ್ರೆಗಳಲ್ಲಿ ಕೋವಿಡ್ ಬಾಧಿತ ಮಕ್ಕಳ ಚಿಕಿತ್ಸೆಗಾಗಿ ಪ್ರತ್ಯೇಕ ವಾರ್ಡ್, ಮಕ್ಕಳ ಸ್ನೇಹಿ ಕೋವಿಡ್ ಕೇರ್ ಸೆಂಟರ್ ವ್ಯವಸ್ಥೆ ಮಾಡಿಕೊಂಡಿದೆ. ಹೆಚ್ಚುವರಿ ಮಕ್ಕಳ ತಜ್ಞರು ಹಾಗೂ ಶುಶ್ರೂಷಕರಿಗೆ ತರಬೇತಿ ನೀಡಲಾಗಿದ್ದು, ತಜ್ಞರ ಸಲಹೆ ಮೇರೆಗೆ ಬೇಕಾದ ಔಷಧಿಗಳನ್ನು ಖರೀದಿಸಿ ದಾಸ್ತಾನು ಮಾಡಿಕೊಂಡಿದ್ದೇವೆ ಎಂದು ತಿಳಿಸಿದರು.

ಜಿಲ್ಲಾ ಆಯುಷ್ ಅಧಿಕಾರಿ ಡಾ.ಶಂಕರ್‌ಗೌಡ ಮಾತನಾಡಿ, ರಾಜ್ಯ ಸರ್ಕಾರದಿಂದ ಬಿಡುಗಡೆಯಾದ ಸುಮಾರು ೧ ಲಕ್ಷ ರೂ. ಅನುದಾನದಲ್ಲಿ ಅಪೌಷ್ಠಿಕ ಮಕ್ಕಳಿಗೆ ಆಯುರ್ವೇದ ಔಷಧಿ ನೀಡಲಾಗುತ್ತಿದೆ. ೨೫ ಆರೋಗ್ಯ ವೈದ್ಯಾಧಿಕಾರಿಗಳು ತಾಲ್ಲೂಕುವಾರು ಭೇಟಿ ನೀಡಿ ಅಂಗನವಾಡಿ ವ್ಯಾಪ್ತಿಯಲ್ಲಿ ಬರುವ ಮಕ್ಕಳ ಆರೋಗ್ಯ ತಪಾಸಣೆ ನಡೆಸಿ ಅಪೌಷ್ಠಿಕತೆಯಿಂದ ಬಳಲುವ ಮಕ್ಕಳಿಗೆ ಆಯುಷ್ ಔಷಧಿಗಳನ್ನು ನೀಡುತ್ತಿದ್ದಾರೆ ಎಂದರು.

ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪ ನಿರ್ದೇಶಕ ವಿಜಯಕುಮಾರ್ ಮಾತನಾಡಿ, ಈ ಹಿಂದೆ ಮಕ್ಕಳ ಆರೋಗ್ಯದಲ್ಲಿ ವ್ಯತ್ಯಯ ಕಂಡುಬಂದರೆ ಅಂಗನವಾಡಿ ಕೇಂದ್ರದಲ್ಲಿ ಚಿಕಿತ್ಸೆ ನೀಡಲಾಗುತಿತ್ತು. ಆದರೆ ಈಗ ಜಿ.ಪಂ ಸಿಇಒ ಅವರ ಆಸಕ್ತಿಯಿಂದಾಗಿ ೩೦ ಲಕ್ಷ ರೂ., ಅನುದಾನ ವೆಚ್ಚದಲ್ಲಿ ಗ್ರಾಸಿಂ ಇಂಡಸ್ಟ್ರಿಯಿಂದ ಮಕ್ಕಳಿಗೆ ಚೂರ್ಣ ಹಾಗೂ ಆಯುಷ್ ಇಲಾಖೆಯಿಂದ ರೋಗನಿರೋಧಕ ಶಕ್ತಿ ಹೆಚ್ಚ್ಚಿಸುವ ಔಷಧಿಗಳನ್ನು ತರಿಸುತ್ತಿರುವುದರಿಂದ ಅಪೌಷ್ಠಿಕ ಮಕ್ಕಳ ಬೆಳವಣಿಗೆಗೆ ಹೆಚ್ಚು ಉಪಯುಕ್ತವಾಗಿದೆ ಎಂದರು.

ಈ ವೇಳೆ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಅಪೌಷ್ಠಿಕ ಮಕ್ಕಳ ಆರೋಗ್ಯ ತಪಾಸಣೆ ನಡೆಸಿ, ಕಿಟ್ ವಿತರಣೆ ಮಾಡಲಾಯಿತು.
ಈ ಸಂದರ್ಭದಲ್ಲಿ ಜಿಲ್ಲಾ ಪಂಚಾಯತ್ ಉಪಕಾರ್ಯದರ್ಶಿ ಆನಂದ್, ಆಯುಷ್ ವೈದ್ಯಾಧಿಕಾರಿಗಳು, ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳು, ಅಂಗನವಾಡಿ ಕಾರ್ಯಕರ್ತೆಯರು ಸೇರಿದಂತೆ ಮತ್ತಿತ್ತರರು ಪಾಲ್ಗೊಂಡಿದ್ದರು.

Leave a Reply

Your email address will not be published. Required fields are marked *

error: Content is protected !!