ಹುಡುಗಿರೇ ಸ್ಟ್ರಾಂಗು ಗುರು : ದಾವಣಗೆರೆ ವಿವಿಯಲ್ಲಿ ಮಹಿಳೆಯರ ಮುಡಿಗೇ ಹೆಚ್ಚು ಚಿನ್ನ

ದಾವಣಗೆರೆ: ದಾವಣಗೆರೆ ವಿಶ್ವವಿದ್ಯಾನಿಲಯದಲ್ಲಿ ಈ ಬಾರಿಯೂ ಮಹಿಳೆಯರೇ ಉತ್ತಮ ಶೈಕ್ಷಣಿಕ ಸಾಧನೆಯ ಮೂಲಕ ಅತಿ ಹೆಚ್ಚು ಚಿನ್ನದ ಪದಕಗಳನ್ನು ಮುಡಿಗೇರಿಸಿಕೊಂಡಿದ್ದಾರೆ.

ಸ್ನಾತಕೋತ್ತರ ವಾಣಿಜ್ಯಶಾಸ್ತ್ರ (ಎಂ.ಕಾಂ.) ವಿಭಾಗದ ವಿದ್ಯಾರ್ಥಿನಿ ದೀಪ್ತಿ ಜೆ.ಗೌಡರ್ 5 ಪದಕಗಳೊಂದಿಗೆ ಈ ವರ್ಷ ದಾವಣಗೆರೆ ವಿಶ್ವವಿದ್ಯಾನಿಲಯದ ಚಿನ್ನದ ರಾಣಿ ಗೌರವಕ್ಕೆ ಪಾತ್ರರಾಗಿದ್ದಾರೆ. ಸ್ನಾತಕ ಪದವಿಯಲ್ಲಿ ಹೊನ್ನಾಳಿಯ ಎಸ್.ಸಿಂಧುಬಾಯಿ ಮೂರು ಚಿನ್ನದ ಪದಕ ಗಳಿಸಿದ್ದಾರೆ.

ಸ್ನಾತಕ ಮತ್ತು ಸ್ನಾತಕೋತ್ತರ ಪದವಿ ಸೇರಿ ಒಟ್ಟು 79 ಚಿನ್ನದ ಪದಕಗಳನ್ನು 45 ವಿದ್ಯಾರ್ಥಿಗಳು ತಮ್ಮದಾಗಿಸಿಕೊಂಡಿದ್ದಾರೆ. ಇವರಲ್ಲಿ 39 ಮಹಿಳೆಯರಿದ್ದರೆ, ಕೇವಲ 6 ಪುರುಷ ವಿದ್ಯಾರ್ಥಿಗಳಿದ್ದಾರೆ.

ಸ್ನಾತಕ ಪದವಿಯಲ್ಲಿ 10 ಮಹಿಳೆಯರು ಮತ್ತು 2 ಪುರುಷ ವಿದ್ಯಾರ್ಥಿಗಳು 20 ಚಿನ್ನದ ಪದಕಗಳನ್ನು ಪಡೆದಿದ್ದಾರೆ. ಸ್ನಾತಕೋತ್ತರ ಪದವಿಯಲ್ಲಿ 29 ವಿದ್ಯಾರ್ಥಿನಿಯರು ಮತ್ತು 4 ಪುರುಷರು 59 ಸ್ವರ್ಣ ಪದಕಗಳನ್ನು ಗಳಿಸಿದ್ದಾರೆ.

ಚಿನ್ನದ ರಾಣಿ ದೀಪ್ತಿ ಜೆ.ಗೌಡರ್ ಅವರು ಶ್ರೀಮತಿ ವೀರಮ್ಮ ಶಾಂತವೀರಪ್ಪ ಅಥಣಿ, ಶ್ರೀಮತಿ ಲೇ. ಚನ್ನಬಸಮ್ಮ ಮುರಿಗೆಪ್ಪ ದೇವರಮನೆ, ಶ್ರೀ ಚಿಕ್ಕಣ್ಣ ಕಂಪಲಾಪುರ, ಕಣಿವೆ ಜೋಗಿಹಳ್ಳಿ ಶ್ರೀಮತಿ ರಾಮಕ್ಕ ಗೌಡರ ತಿಮ್ಮಪ್ಪ, ಲೇ.ಶ್ರೀಮತಿ ಶ್ರೀ ಜಿ.ಎಸ್.ಕಮಲಮ್ಮ ಬಿ.ನರಸಿಂಹಪ್ಪ ಸ್ಮಾರಕ ಚಿನ್ನದ ಪದಕಗಳನ್ನು ತಮ್ಮ ಮುಡಿಗೇರಿಸಿಕೊಂಡಿದ್ದಾರೆ.

ಸ್ನಾತಕ ಕಲಾ ಪದವಿಯಲ್ಲಿ ಹೊನ್ನಾಳಿಯ ಎಸ್.ಎಂ.ಎಸ್. ಕಲಾ ಮತ್ತು ವಾಣಿಜ್ಯ ಕಾಲೇಜಿನ ವಿದ್ಯಾರ್ಥಿನಿ ಎಸ್.ಸಿಂಧುಬಾಯಿ ಮೂರು ಚಿನ್ನದ ಪದಕ ಪಡೆದಿದ್ದಾರೆ. ಇವರು ಶ್ರೀ ತರಳುಬಾಳು ಬೃಹನ್ಮಠ ಸಿರಿಗೆರೆಯ ಲಿಂಗೈಕ್ಯ ಹಿರಿಯ ಜಗದ್ಗುರು ಶ್ರೀ ಶಿವಕುಮಾರ ಶಿವಾಚಾಯ ಮಹಾಸ್ವಾಮಿಗಳು, ಬಿ.ಎಸ್.ಚನ್ನಬಸಪ್ಪ ಅಂಡ್ ಸನ್ಸ್ ಹಾಗೂ ಶ್ರೀಮತಿ ಸುಧಾ ಮತ್ತು ಕಟೀಲ್ ಪದ್ಮನಾಭ ಭಟ್ ಸ್ಮಾರಕ ಸ್ವರ್ಣ ಪದಕಗಳನ್ನು ಪಡೆದರು.

ಇವರಲ್ಲದೆ ಸ್ನಾತಕೋತ್ತರ ಪದವಿಯ ಅರ್ಥಶಾಸ್ತ್ರ ವಿಭಾಗದ ಎಂ.ವೈ.ಚಂದನ, ಇಂಗ್ಲಿಷ್ ವಿಭಾಗದ ಜಿ.ಕೆ.ಮೋನಿಕಾ, ಬಿಎಡ್. ಪದವಿಯ ಟಿ.ಎನ್.ಕಾವ್ಯಾ, ಜೀವರಾಸಾಯನಶಾಸ್ತ್ರ ವಿಭಾಗದ ಎಂ.ರಂಗಸ್ವಾಮಿ, ಗಣಿತಶಾಸ್ತ್ರ ವಿಭಾಗದ ಸಾನಿಯಾ ಅಂಜುಂ, ಜೀವಶಾಸ್ತ್ರ ವಿಭಾಗದ ಫರಾನಾ ಸುರನ್ ಅವರು ತಲಾ ಮೂರು ಚಿನ್ನದ ಪದಕಗಳನ್ನು ಪಡೆದಿದ್ದಾರೆ.

ಸ್ನಾತಕೋತ್ತರ ಕನ್ನಡ ವಿಭಾಗದ ಡಿ.ರೇವಣಸಿದ್ದಪ್ಪ, ಪತ್ರಿಕೋದ್ಯಮ ವಿಭಾಗದ ಬಿ.ಮೀನಾಕ್ಷಿ, ರಾಜ್ಯಶಾಸ್ತ್ರ ವಿಭಾಗದ ಆರ್.ಕೆ.ಪೂಜಾ, ಬಿವಿಎ ವಿಭಾಗದ ಜಯಲಕ್ಷ್ಮಿ ಅನಂತಾಚಾರ್ಯ ಉಪಾಧ್ಯೆ, ಎಂಬಿಎ ವಿಭಾಗ ವೈ.ಶಾಝಿಯಾ ಮತ್ತು ಟಿ.ಕೃತಿಕಾ, ಎಂ.ಪಿ.ಎಡ್ ವಿಭಾಗದ ಎನ್.ಕಿರಣಕುಮಾರ, ರಾಸಾಯನಶಾಸ್ತ್ರ ವಿಭಾಗ ಐ.ಕೆ.ಸಂಗೀತಾ, ಸಸ್ಯಶಾಸ್ತ್ರ ವಿಭಾಗದ ಎಸ್.ಜೆ.ಜಯಶ್ರೀ, ಕಂಪ್ಯೂಟರ್ ವಿಜ್ಞಾನ ವಿಭಾಗದ ಎಂ.ಅಂಬಿಕಾ, ಆಹಾರ ತಂತ್ರಜ್ಞಾನ ವಿಭಾಗದ ಎಚ್.ಎ.ದೀಪಿಕಾ, ಅಣುಜೀವಿಶಾಸ್ತ್ರ ವಿಭಾಗದ ಎಸ್.ದಿವ್ಯಶ್ರೀ, ಭೌತಶಾಸ್ತ್ರ ವಿಭಾಗದ ಕೆ.ಯಶೋದಾ ತಲಾ ಎರಡು ಚಿನ್ನದ ಪದಕಗಳನ್ನು ಗಳಿಸಿದ್ದಾರೆ.

ಸ್ನಾತಕ ವಿಜ್ಞಾನ ವಿಭಾಗದಲ್ಲಿ ಚಿತ್ರದುರ್ಗ ಎಸ್.ಜೆ.ಎಂ. ಕಲಾ, ವಿಜ್ಞಾನ ಮತ್ತು ವಾಣಿಜ್ಯ ಕಾಲೇಜಿನ ವಿದ್ಯಾರ್ಥಿನಿ ಸಿ.ಎಸ್.ಪೂಜಾ ಮತ್ತು ಸ್ನಾತಕ ಕಂಪ್ಯೂಟರ್ ಅಪ್ಲಿಕೇಶನ್ ಪದವಿಯಲ್ಲಿ ದಾವಣಗೆರೆಯ ಬಾಪೂಜಿ ಇನ್‍ಸ್ಟಿಟ್ಯೂಟ್ ಆಫ್ ಹೈಟೆಕ್ ಎಜುಕೇಶನ್ ಕಾಲೇಜಿನ ವಿದ್ಯಾರ್ಥಿನಿ ಜಿ.ಎಂ. ಸುಮತಿ ಅವರು ತಲಾ ಎರಡು ಚಿನ್ನದ ಪದಕಗಳನ್ನು ಪಡೆದಿದ್ದಾರೆ.

Leave a Reply

Your email address will not be published. Required fields are marked *

error: Content is protected !!