GM Sugars: ಜಿ.ಎಂ.ಶುಗರ್ಸ್ ಕಂಪನಿಯಿಂದ ಅಕ್ರಮ ಕಲ್ಲುಗಣಿಗಾರಿಕೆ:ಜಿ.ಎಂ. ಸಿದ್ದೇಶ್ವರ್ ವಿರುದ್ಧ ಗಂಭೀರ ಪ್ರಕರಣ ದಾಖಲಿಸಬೇಕು – ಎಸ್.ಆರ್. ಹಿರೇಮಠ್ ಆಗ್ರಹ
ದಾವಣಗೆರೆ: ಹಾವೇರಿ ಜಿಲ್ಲೆಯ ಜಿ.ಎಂ.ಶುಗರ್ಸ್ ಕಂಪನಿಯಿಂದ ರಟ್ಟೀಹಳ್ಳ ತಾಲೂಕು ಚಟ್ನಿಹಳ್ಳಿ ಹಾಗೂ ಇತರ ಗ್ರಾಮಗಳಲ್ಲಿ ಅಕ್ರಮವಾಗಿ ಕಲ್ಲುಗಣಿಗಾರಿಕೆ ನಡೆಸಲಾಗುತ್ತಿದ್ದು, ಕಂಪನಿ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸಬೇಕು ಹಾಗೂ ಕಂಪನಿಯ ಮಾಲೀಕರಾದ ದಾವಣಗೆರೆ ಸಂಸದ ಜಿ.ಎಂ.ಸಿದ್ದೇಶ್ವರ್ ಅವರ ಮೇಲೆ ಕಾನೂನು ಕ್ರಮ ಜರುಗಿಸಬೇಕೆಂದು ಸಮಾಜ ಪರಿವರ್ತನಾ ಸಮುದಾಯದ ಎಸ್.ಆರ್. ಹಿರೇಮಠ್ ಆಗ್ರಹಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ದಾವಣಗೆರೆ ಸಂಸದ ಜಿ.ಎಂ.ಸಿದ್ದೇಶ್ವರ್ ಒಡೆತನದ ಜಿ. ಎಂ.ಶುಗರ್ಸ ಕಂಪೆನಿಯು ಅಕ್ರಮ ಗಣಿಗಾರಿಕೆ ನಡೆಸುತ್ತಿದೆ ಎನ್ನುವುದು ಮೇಲ್ನೋಟಕ್ಕೆ ಕಂಡು ಬಂದಿದ್ದು, ಕೂಡಲೇ ಸರ್ಕಾರ ಗಣಿಗಾರಿಕೆ ನಿಲ್ಲಿಸುವ ನಿಟ್ಟಿನಲ್ಲಿ ಸೂಕ್ತ ಕ್ರಮ ಕೈಗೊಂಡು, ಅಕ್ರಮ ಗಣಿಗಾರಿಕೆ ಆಧಾರದ ಹಿನ್ನೆಲೆಯಲ್ಲಿ ಸಂಸದ ಜಿ.ಎಂ. ಸಿದ್ದೇಶ್ವರ್ ವಿರುದ್ಧ ಗಂಭೀರ ಪ್ರಕರಣ ದಾಖಲಿಸಬೇಕು ಎಂದವರು ಒತ್ತಾಯಿಸಿದರು.
ಅಕ್ರಮವಾಗಿ ಗಣಿಗಾರಿಕೆ ನಡೆಸಿದ್ದರ ಬಗ್ಗೆ ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿಯ ವರದಿ ಸಲ್ಲಿಸಿದ್ದು, ಈ ಕುರಿತಂತೆ ಸಮಾಜ ಪರಿವರ್ತನ ಸಮುದಾಯ ಸಂಘಟನೆ ಸೇರಿದಂತೆ ಇತರ ಸಂಘಟನೆಗಳು ಗಣಿ ಮತ್ತು ಭೂ ವಿಜ್ಞಾನ ಇಲಾಖೆಯವರಿಗೆ ಹಲವಾರು ಬಾರಿ ಮನವಿ ಸಲ್ಲಿಸಿದರೂ ಪ್ರಯೋಜನವಾಗಿಲ್ಲ. ಕಾರಣ ಕ್ರಷರ್ ಕಲ್ಲು ಪುಡಿ ಮಾಡುವ ಮಷಿನ್‍ಗಳನ್ನು ಸ್ಥಗಿತಗೊಳಿಸಬೇಕೆಂದು ಮನವಿ ಮಾಡಿದರು.
ಮಂಜೂರಾದ ಜಾಗವನ್ನು ಹೊರತುಪಡಿಸಿ ಬೇರೆಡೆ ಅಕ್ರಮ ಗಣಿಗಾರಿಕೆ ನಡೆಸುತ್ತಿದ್ದು, ತಕ್ಷಣವೇ ಮಂಜೂರಾದ ಗಣಿಗಾರಿಕೆಯಿಂದ ತೆಗೆದ ಕಲ್ಲು ಕ್ರಷರ್‍ಗಳನ್ನು ವಶಕ್ಕೆ ತೆಗೆದುಕೊಂಡು ವಿಚಾರಣೆ ಕೈಕೊಳ್ಳಬೇಕು. ಅಲ್ಲದೆ ಗಣಿಗಾರಿಕೆಯಿಂದ ತೆಗೆದು ಮಾರಾಟ ಮಾಡಲಾದ ಮೌಲ್ಯವನ್ನು ದಂಡದೊಂದಿಗೆ ಸರ್ಕಾರಕ್ಕೆ ಜಮಾ ಮಾಡಿಸಿಕೊಳ್ಳಬೇಕೆಂದು ಒತ್ತಾಯಿಸಿದರು.
ಗೋಷ್ಠಿಯಲ್ಲಿ ಎಂ.ಸಿ ಹಾವೇರಿ, ಎನ್.ಸಿ.ದೊಡ್ಡಮನಿ, ಅನೀಸ್ ಪಾಷಾ, ಬಲ್ಲೂರು ರವಿಕುಮಾರ್ ಮತ್ತಿತರರು ಇದ್ದರು.