ಅನುಗ್ರಹ ಯೋಜನೆಯಡಿ ಕುರಿ/ ಮೇಕೆಗಳ ಪರಿಹಾರ ಧನಕ್ಕೆ ಅರ್ಜಿ ಸ್ವೀಕರಿಸಲು ಸರ್ಕಾರದ ಅನುಮತಿ
ದಾವಣಗೆರೆ: ಕುರಿ/ ಮೇಕೆಗಳು ಆಕಸ್ಮಿಕ ಮರಣ ಹೊಂದಿದ್ದಲ್ಲಿ ಅವುಗಳಿಗೆ ಅನುಗ್ರಹ ಕೊಡುಗೆ ಯೋಜನೆ ಅಡಿ ಪರಿಹಾರಧನ ನೀಡಲು ಸರ್ಕಾರ ಮುಂದಾಗಿದೆ.
ಕುರಿ/ ಮೇಕೆಗಳು ಆಕಸ್ಮಿಕವಾಗಿ ಸಾವನ್ನಪ್ಪಿದರೆ ಅವುಗಳಿಗೆ ಪರಿಹಾರ ನೀಡಬೇಕೆಂದು ಪಶುಪಾಲನ ಮತ್ತು ಪಶುವೈದ್ಯ ಸೇವಾ ಇಲಾಖೆಯ ಆಯುಕ್ತರು ಮತ್ತು ಕರ್ನಾಟಕ ಕುರಿ ಮತ್ತು ಉಣ್ಣೆ ಅಭಿವೃದ್ಧಿ ನಿಗಮದ ವ್ಯವಸ್ಥಾಪಕರ ಪ್ರಸ್ತಾವನೆಯನ್ನು ಪರಿಗಣಿಸಿರುವ ಸರ್ಕಾರ ಪ್ರಸಕ್ತ ಸಾಲಿನಿಂದ ಅನುಗ್ರಹ ಕೊಡುಗೆ ಯೋಜನೆಯಡಿ ಪರಿಹಾರ ನೀಡಲು ನಿರ್ದರಿಸಿದ್ದು, ಫಲಾನುಭವಿಗಳಿಂದ ಅರ್ಜಿ ಸ್ವೀಕರಿಸಲು ಸೂಚನೆ ನೀಡಿದೆ.
ಅನುಗ್ರಹ ಕೊಡುಗೆ ಕಾರ್ಯಕ್ರಮವನ್ನು ಆಯವ್ಯಯದಲ್ಲಿ ಮುಂದುವರಿಸಿರುವ ಪ್ರಯುಕ್ತ ಅನುಗ್ರಹ ಕೊಡುಗೆ ಯೋಜನೆಯಡಿ ಕುರಿ/ ಮೇಕೆಗಳ ಆಕಸ್ಮಿಕ ಮರಣಕ್ಕೆ ಕುರಿ ಮಾಲೀಕರುಗಳಿಗೆ ಪರಿಹಾರ ಧನವನ್ನು ನೀಡಲು ಅರ್ಜಿಗಳನ್ನು ಸ್ವೀಕರಿಸಲು ಸರ್ಕಾರದ ಅನುಮತಿ ನೀಡಲಾಗಿದೆ ಎಂದು ಪಶುಸಂಗೋಪನೆ ಮತ್ತು ಮೀನುಗಾರಿಕೆ ಇಲಾಖೆಯ ಸರ್ಕಾರದ ಕಾರ್ಯದರ್ಶಿ ಜಿ.ಎನ್. ಪ್ರವೀಣ್ ಆದೇಶ ತಿಳಿಸಿದ್ದಾರೆ.