ರೈತರಿಗೆ ಸಿಹಿ ಸುದ್ದಿ; ಆಗಸ್ಟ್ 10ರಿಂದ ಭದ್ರಾ ಡ್ಯಾಂನಿಂದ ಎಡದಂಡೆ ಹಾಗೂ ಬಲದಂಡೆ ನಾಲೆಗಳಿಗೆ ನೀರು; ಯಾವ ನಾಲೆಗೆ ಎಷ್ಟು ನೀರು.?
ದಾವಣಗೆರೆ : ಮಧ್ಯಕರ್ನಾಟಕದ ಜೀವನಾಡಿ ತುಂಗಾಭದ್ರಾನದಿ. ತುಂಗಾಭದ್ರಾ ಉಕ್ಕಿ ಹರಿದ್ರೆ ಮಧ್ಯ ಕರ್ನಾಟಕದ ರೈತರ ಪಾಲಿಗೆ ಬಂಗಾರದ ಬೆಳೆ ಬರುತ್ತದೆ.ತುಂಗಾ ಹಾಗು ಭದ್ರಾ ಜಲಾಶಯಗಳು ಭರ್ತಿಯಾಗಿ ತುಂಬಿ ಹರಿದ್ರೆ ಮಾತ್ರ ಭದ್ರಾ ಅಚ್ಚುಕಟ್ಟು ಪ್ರದೇಶದ ರೈತರಿಗೆ ಭರಪೂರ ಬೆಳೆಯಾಗಿದ್ದು, ರೈತರಿಗೆ ಸಿಹಿ ಸುದ್ದಿಯೊಂದನ್ನು ಭದ್ರಾ ಅಚ್ಚುಕಟ್ಟು ಪ್ರಾಧಿಕಾರ ನೀಡಿದ್ದು, ಮುಂಗಾರು ಭತ್ತದ ಬೆಳೆಗೆ ನೀರು ಹರಿಸಲಿದೆ.
ಆಗಸ್ಟ್ 10ರಿಂದ ಭದ್ರಾ ಡ್ಯಾಂನಿಂದ ಎಡದಂಡೆ ಹಾಗೂ ಬಲದಂಡೆ ನಾಲೆಗಳಿಗೆ ನೀರು ಹರಿಯಲಿದ್ದು,ರೈತರು ಸಂತಸ ವ್ಯಕ್ತಪಡಿಸಿದ್ದಾರೆ. ಈ ಸುದ್ದಿಯನ್ನು ನೀರಾವರಿ ಇಲಾಖೆಯ ಅಧಿಕಾರಿಗಳು ಪ್ರಟಣೆ ಮೂಲಕ ತಿಳಿಸಿದ್ದು, ಆಗಸ್ಟ್ 10ರಿಂದ ನಾಲೆಗಳಲ್ಲಿ ನೀರು ಹರಿಸುವುದಾಗಿ ಅಧಿಕೃತವಾಗಿ ಪ್ರಕಟಿಸಿದ್ದಾರೆ.
ಒಂದು ವೇಳೆ ಜಲಾಶಯದಿಂದ ನೀರು ಬಿಡದಿದ್ರೆ ಅಕ್ಷರಶಃ ನೀರಾವರಿ ರೈತರಿಗೆ ಬರ ಆವರಿಸುತ್ತಿತ್ತು.ಒಟ್ಟು ದಾವಣಗೆರೆ ಜಿಲ್ಲೆಯಲ್ಲಿ 65 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಭತ್ತ ನಾಟಿ ಮಾಡಿದ್ದು, ಹೋದ ಜೀವ ಬಂದತಾಗಿದೆ, ಮುಂಗಾರು ಹಂಗಾಮಿನ ಬೆಳೆಗಳಿಗೆ ನೀರಾವರಿ ಇಲಾಖೆ ಭದ್ರಾ ಜಲಾಶಯದ ಎಡದಂಡೆ ಮತ್ತು ಬಲದಂಡೆ ನಾಲೆ ಆನವೇರಿ ಶಾಖಾನಾಲೆ, ದಾವಣಗೆರೆ ಶಾಖಾ ನಾಲೆ, ಮಲೇಬೆನ್ನೂರು ಶಾಖಾನಾಲೆ ಹರಿಹರ ಮತ್ತು ಗೋಂದಿ ನಾಲೆಗಳಿಗೆ ನೀರು ಹರಿಸಲಿದ್ದು, ಒಟ್ಟು ನೂರು ದಿನಗಳ ಕಾಲ ನಾಲೆಗಳ ನೀರನ್ನು ರೈತರು ಬಳಸಬಹುದು.
ದಾವಣಗೆರೆ ಜಿಲ್ಲೆಗೆ ಭದ್ರಾ ಜಲಾಶಯ ಅಕ್ಷರಶಃ ಅನ್ನದೇವತೆ.ಭದ್ರಾ ಜಲಾಶಯದಲ್ಲಿ ನೀರಿದ್ದರೆ ದಾವಣಗೆರೆ ಜಿಲ್ಲೆ ಸೇರಿದಂತೆ ನಾಲ್ಕು ಜಿಲ್ಲೆಗಳ ರೈತರ ಮೊಗದಲ್ಲಿ ಮಂದಹಾಸ ಮೂಡುತ್ತದೆ.ಇಲ್ಲದಿದ್ದರೆ ರೈತರ ಬಾಳಲ್ಲಿ ಆತಂಕ ದುಗುಡ ಮನೆ ಮಾಡುತ್ತದೆ.ಕಳೆದ ವರ್ಷ ಈ ವೇಳೆಗಾಗಲೇ ಭದ್ರಾ ಜಲಾಶಯ ಭರ್ತಿ ಯಾಗಿ ಕಾಲುವೆಯಲ್ಲಿ ನೀರು ಹರಿದಿತ್ತು. ಆದ್ರೆ ಈ ಬಾರಿ ಜಲಾಶಯ ತುಂಬಿಲ್ಲದ ಕಾರಣ 65 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ರೈತರು ಭತ್ತದ ಮಡಿ ಮಾಡಿಕೊಂಡು ನಾಟಿ ಮಾಡಲು ಮುಗಿಲು ನೋಡುತ್ತಿದ್ದರು
ಮಲೆ ನಾಡಿನಲ್ಲಿ ಮಳೆ ಕಣ್ಣಾಮುಚ್ಚಾಲೆಯಿಂದ ಭದ್ರಾ ಜಲಾಶಯದ ನೀರು ಕಾಲುವೆಗೆ ಹರಿಯುತ್ತಾ….ಇಲ್ಲವೋ ಎಂಬ ಆತಂಕದಲ್ಲಿರುವ ರೈತರು ಭದ್ರಾ ಜಲಾಶಯದಲ್ಲಿ ನೀರಿನ ಮಟ್ಟವನ್ನು ಚಾತಕ ಪಕ್ಷಿಯಂತೆ ಕಾದುನೋಡುತ್ತಿದ್ದರು. ಭದ್ರಾ ಜಲಾಶಯದ ನೀರನ್ನು ನೆಚ್ಚಿಕೊಂಡು ರೈತರು ಬೀಜ ಗೊಬ್ಬರ, ಔಷಧಿ ಕ್ರಿಮಿನಾಶಕಕ್ಕೆ ಲಕ್ಷಾಂತರ ಬಂಡವಾಳ ಹಾಕಿ ಗದ್ದೆ ಹಸನು ಮಾಡಿದ್ದರು. ಕಾಡಾ ಅಧ್ಯಕ್ಷರು ನೀರಾವರಿ ಇಲಾಖೆ ಎಂಜಿನಿಯರ್ ಗಳ ತೀರ್ಮಾನವನ್ನು ಕಾದು ನೋಡುತ್ತಿರುವ ರೈತರಿಗೆ ಕಾಲುವೆ ನೀರು ಹರಿಯುತ್ತಿರುವುದು ಸಹಜವಾಗಿಯೇ ಖುಷಿ ತಂದಿದೆ.
ಭದ್ರಾ ಜಲಾಶಯ ಭರ್ತಿಯಾಗಿ ಕನಿಷ್ಠ 150 ಅಡಿ ದಾಟಿದ್ರೆ ಮಾತ್ರ ಭದ್ರಾ ಅಚ್ಚುಕಟ್ಟು ರೈತರಿಗೆ ನೀರು ಸಿಗಲಿದ್ದು, 161 ಅಡಿ ದಾಟಿದ್ರೆ ನೀರು ಹರಿಯಲಿದೆ ಎಂದು ಅಧಿಕಾರಿಗಳು, ಸಚಿವ ಎಸ್.ಎಸ್.ಮಲ್ಲಿಕಾರ್ಜುನ ಹೇಳಿದ್ದರು. ಭತ್ತ ನಾಟಿ ಮಾಡುವ ವೇಳೆ ಭದ್ರಾ ಜಲಾಶಯದ ನೀರಿನ ಮಟ್ಟ ಕೇವಲ 140 ಅಡಿ ಮಾತ್ರ ಇದ್ದು ಭದ್ರಾ ಜಲಾಶಯದ ಕ್ಯಾಚ್ಮೆಂಟ್ ಏರಿಯಾದಲ್ಲಿ ಮಳೆಯ ಕಣ್ಣಾಮುಚ್ಚಾಲೆ ಆಡುತ್ತಿತ್ತು. ಒಂದು ವೇಳೆ ಭದ್ರಾ ಜಲಾಶಯ ಭರ್ತಿಯಾಗದಿದ್ದರೆ ಮುಂಗಾರು ಹಂಗಾಮಿಗೆ ಬರದ ಛಾಯೆ ಆವರಿಸುತ್ತಿತ್ತು.
ಸದ್ಯ ಹಾಲಿ ಜಲಾಶಯದಲ್ಲಿ ಇರುವ ನೀರಿನ ಪ್ರಮಾಣವನ್ನು ಗಣನೆಗೆ ತೆಗೆದುಕೊಂಡು ಅನುಸೂಚಿಯಲ್ಲಿ ನಮೂದಿಸಿದ ಕ್ಷೇತ್ರ ಹಾಗೂ ಬೆಳೆಗಳಿಗೆ ಮಾತ್ರ ನೀರು ಒದಗಿಸಲು ಉದ್ದೇಶಿಸಲಾಗಿರುತ್ತದೆ. ಪ್ರಕಟಿತ ಬೆಳೆಗಳನ್ನು ಬೆಳೆಯದೇ, ಬೇರೆ ಬೆಳೆಯನ್ನು ಬೆಳೆದು ಬೆಳೆ ಉಲ್ಲಂಘನೆ ಮಾಡಿ ನಷ್ಟ ಅನುಭವಿಸಿದಲ್ಲಿ ಇದಕ್ಕೆ ಸಂಬಂಧಪಟ್ಟ ರೈತರೇ ಹೊಣೆಗಾರರಾಗಿರುತ್ತಾರೆ. ಜಲಸಂಪನ್ಮೂಲ ಇಲಾಖೆಯು ಯಾವುದೇ ರೀತಿಯಲ್ಲಿ ಜವಾಬ್ದಾರಿಯಾಗುವುದಿಲ್ಲ ಎಂಬ ಸ್ಪಷ್ಟನೆಯನ್ನೂ ಕೊಡಲಾಗಿದೆ.
ಯಾವ ನಾಲೆಗೆ ಎಷ್ಟು ನೀರು: ಎಡದಂಡ ನಾಲೆಯಲ್ಲಿ 380 ಹಾಗೂ ಬಲದಂಡೆ ನಾಲೆಯಲ್ಲಿ 2650 ಕ್ಯೂಸೆಕ್ಸ್ ಮುಂಗಾರು ಬೆಳೆಗಳಿಗೆ ಶಾಲೆಗಳಲ್ಲಿ 100 ದಿನಗಳ ಅವಧಿಗೆ ನೀರನ್ನು ಹರಿಸಲು ಕ್ರಮ ಕೈಗೊಳ್ಳಲಾಗಿದೆ.
ಆಗಸ್ಟ್ ಮೊದಲ ವಾರದಲ್ಲಿಯೇ ಮುಂಗಾರು ಹಂಗಾಮಿನ ಭತ್ತದ ನಾಟಿ ಮಾಡಬೇಕು. ತಡವಾದರೆ ಹೂವಾಡುವ ಹಂತದಲ್ಲಿ ಮೂಡು ಗಾಳಿಯಿಂದ ಬೆಳೆ ಶೀತಕ್ಕೆ ಸಿಲುಕಿ ಇಳುವರಿ ಕುಂಠಿತವಾಗುತ್ತದೆ ಎಂದು ಕೃಷಿ ಇಲಾಖೆ ಜಿಲ್ಲೆಯ ರೈತರಿಗೆ ಸಲಹೆ ನೀಡಿದೆ. ಆದರೆ ಆಗಸ್ಟ್ ಮೊದಲ ವಾರದ ಕೊನೆ ದಿನವಾದರೂ ಭದ್ರಾ ನೀರು ಹರಿಸುವ ಯಾವುದೇ ನಿರ್ಧಾರ ತೆಗೆದುಕೊಂಡಿಲ್ಲದ ಕಾರಣ ರೈತರು ಕಂಗಾಲಾಗಿದ್ದರು. ಆದ್ದರಿಂದ ತಕ್ಷಣವೇ ಇಂದಿನಿಂದ ನಾಲೆಗಳಿಗೆ ನೀರು ಹರಿಸಬೇಕು ಎಂದು ರೈತರು ಒತ್ತಾಯಿಸಿದ್ದರು.
ಕಳೆದ ವರ್ಷ ಈ ವೇಳೆಗಾಗಲೇ ಭದ್ರಾ ಜಲಾಶಯ ಭರ್ತಿಯಾಗಿ ಭತ್ತ ನಾಟಿ ಮಾಡಿದ್ದ ರೈತರು ಮಳೆಗಾಗಿ ಮುಗಿಲು ನೋಡುತ್ತಿದ್ರು. ಇನ್ನು 10 – 15 ಅಡಿ ನೀರು ಜಾಸ್ತಿ ಆದ್ರೆ ಮುಂಗಾರು ಹಂಗಾಮು ಖಚಿತ ಎಂದು ರಾಜಕಾರಣಿಗಳು ಹೇಳಿದ್ದರು. ಇನ್ನು ಒಂದು ವಾರ ಭದ್ರಾ ಕಾಲುವೆಗೆ ನೀರು ಹರಿಯದಿದ್ದರೆ ಮಡಿ ಮಾಡಿರುವ ಭತ್ತದ ಸಸಿಗೆ ಎಳ್ಳುನೀರೇ ಗತಿಯಾಗಿದ್ದು, ಮುಂಗಾರು ಹಂಗಾಮ ಬರ ಖಚಿತವಾಗಿತ್ತು.
ಸಸಿ ಮಡಿ : ಭದ್ರಾ ಅಚ್ಚುಕಟ್ಟು ಪ್ರದೇಶದ ಬಹುತೇಕ ರೈತರು ಬೇರೆ ಮೂಲಗಳಿಂದ ನೀರು ಬಳಸಿ, ಸಸಿಮಡಿ ಸಿದ್ದಪಡಿಸಿಕೊಂಡು, ನಾಟಿ ಮಾಡುವ ಸಲುವಾಗಿ ನಾಲೆಗೆ ನೀರು ಹರಿಸುವುದನ್ನು ಕಾಯುತ್ತಿದ್ದಾರೆ. ಆದ್ದರಿಂದ ನೀರು ಹರಿಸಿ ರೈತರ ನೆರವಿಗೆ ಧಾವಿಸಬೇಕು ಎಂದು ಕಳೆದ 10 ದಿನಗಳಿಂದಲೂ ಬಿಜೆಪಿ ಮತ್ತು ರೈತರ ಸಂಘಟನೆಗಳು ಒತ್ತಾಯ ಮಾಡಿದ್ದರು. ಅಲ್ಲದೇ ಭದ್ರಾ ಡ್ಯಾಂನ ಇಂದಿನ ನೀರಿನ ಮಟ್ಟ 165 ಅಡಿ ದಾಟಿದ್ದರೂ, ನೀರು ಬಿಡುಗಡೆ ಮಾಡಿಲ್ಲ. ಸುಮಾರು 47 ಟಿಎಂಸಿಯಷ್ಟು ನೀರಿನ ಸಂಗ್ರಹವಾಗಿದೆ. ಮುಂದಿನ ದಿನಗಳಲ್ಲಿ ಇನ್ನೂ ಮಳೆ ಬರುವ ಸಾಧ್ಯತೆ ಇದೆ. ಆದ್ದರಿಂದ ಇಂದಿನಿಂದಲೇ ತಕ್ಷಣವೇ ನೀರು ಬಿಡುವ ನಿರ್ಧಾರ ಮಾಡಬೇಕು ಎಂದು ರೈತರು ಆಗ್ರಹಿಸಿದ್ದರುಒಟ್ಟಿನಲ್ಲಿ ಭದ್ರಾ ಎಡದಂಡೆ ಹಾಗೂ ನಾಲೆಗಳಲ್ಲಿ ನೀರು ಹರಿಸುವ ತೀರ್ಮಾನ ಪ್ರಕಟಿಸಿರುವುದು ರೈತರಿಗೆ ಖುಷಿ ಕೊಟ್ಟಿದೆ.