ಶಿಕ್ಷಕರ ನೇಮಕಾತಿ ನಿರೀಕ್ಷೆಯಲ್ಲಿದ್ದವರಿಗೆ ಸಿಹಿ ಸುದ್ದಿ : ವಯೋಮಿತಿ ನಿಯಮ ಸಡಿಲಿಕೆ, ಎರಡು ಹುದ್ದೆಗೆ ಒಂದೇ ಪರೀಕ್ಷೆ
ಬೆಂಗಳೂರು : ಪದವೀಧರ ಪ್ರಾಥಮಿಕ ಶಾಲಾ ಶಿಕ್ಷಕರ ನೇಮಕಾತಿಗಾಗಿ ನಡೆಸಲಾಗುವ ಸ್ಪರ್ಧಾತ್ಮಕ ಪರೀಕ್ಷೆಗಳ ನಿಯಮಗಳಲ್ಲಿ ಸಡಿಲಿಕೆ ಮಾಡಲಾಗಿದ್ದು, ಇದರಿಂದ ಲಕ್ಷಾಂತರ ಜನ ಶಿಕ್ಷಕ ಹುದ್ದೆ ಆಕಾಂಕ್ಷಿಗಳಿಗೆ ಅನುಕೂಲವಾಗಲಿದೆ ಎಂದು ಹೇಳಲಾಗಿದೆ. ಸ್ಪರ್ಧಾತ್ಮಕ ಪರೀಕ್ಷೆ ಪತ್ರಿಕೆ 2 ವಿಷಯ ಜ್ಞಾನ ಕನಿಷ್ಠ ಅರ್ಹತೆ ಮಿತಿಯನ್ನು ಶೇಕಡ 50 ರಿಂದ ಶೇ. 45ಕ್ಕೆ ಹಾಗೂ ಪತ್ರಿಕೆ 3 ಭಾಷಾ ಸಾಮರ್ಥ್ಯ ಕನಿಷ್ಠ ಅರ್ಹತೆ ಮಿತಿಯನ್ನು ಕನಿಷ್ಠ ಶೇ. 60 ರಿಂದ ಶೇ. 50ಕ್ಕೆ ಇಳಿಕೆ ಮಾಡಲಾಗಿದೆ. ಇದಲ್ಲದೆ ಎರಡು ವರ್ಷ ವಯೋಮಿತಿ ಸಡಿಲಿಕೆ ಮಾಡಲಾಗಿದೆ. ಅನೇಕ ವರ್ಷಗಳಿಂದ ಶಿಕ್ಷಣ ಇಲಾಖೆಯಲ್ಲಿ ನೇಮಕಾತಿ ನಡೆಯದ ಇದ್ದ ಕಾರಣದಿಂದ 2 ವರ್ಷ ವಯೋಮಿತಿ ಸಡಿಲಿಕೆ ಮಾಡಲಾಗಿದೆ. ಪ್ರಶ್ನೆಗಳ ಸಂಖ್ಯೆಯನ್ನು ಕಡಿತಗೊಳಿಸಿ ಉತ್ತರಗಳನ್ನು ವಾಕ್ಯಗಳ ಬದಲು ಪದಗಳಿಗೆ ಸೀಮಿತಗೊಳಿಸಿ ಪರೀಕ್ಷೆ ನಡೆಸಲು ನಿರ್ಧರಿಸಲಾಗಿದೆ ಎಂದು ಹೇಳಲಾಗಿದೆ.
ಪದವೀಧರ ಶಾಲಾ ಶಿಕ್ಷಕರ ನೇಮಕಾತಿಗೆ ಸಿಇಟಿ ಪರೀಕ್ಷೆಯನ್ನು ಕಲ್ಯಾಣ ಕರ್ನಾಟಕ ಮತ್ತು ಕಲ್ಯಾಣ ಕರ್ನಾಟಕೇತರ ಪ್ರದೇಶ ಹುದ್ದೆಗಳಿಗೆ ಪ್ರತ್ಯೇಕ ಎರಡು ಪರೀಕ್ಷೆಗಳನ್ನು ನಡೆಸಲಾಗುತ್ತಿದ್ದು, ಇದನ್ನು ಸಡಿಲಿಕೆ ಮಾಡಿ ಎರಡು ಹುದ್ದೆಗಳಿಗೆ ಒಂದೇ ಪರೀಕ್ಷೆ ನಡೆಸಲು ಮುಂದಾಗಿದೆ. ಇದರಿಂದಾಗಿ ಕಲ್ಯಾಣ ಕರ್ನಾಟಕ ಭಾಗದ ಅಭ್ಯರ್ಥಿಗಳು ಎರಡು ಪರೀಕ್ಷೆ ಬರೆಯುವ ಬದಲಿಗೆ ಒಂದೇ ಪರೀಕ್ಷೆ ಬರೆಯಲು ಅನುಕೂಲವಾಗುತ್ತದೆ ಎನ್ನಲಾಗಿದೆ.